ಭಜನೆಯ ಮೂಲಕ ವ್ಯಕ್ತಿಯಲ್ಲಿ ಸಾತ್ವಿಕತೆ ಬೆಳೆದು, ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ಸಾಧ್ಯವಾಗುತ್ತದೆ. ಯಾವುದೇ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಭಜನಾ ಪರಂಪರೆಯು ಸಾಮರಸ್ಯ ಮತ್ತು ಸಂಘಟನಾ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಭಜನೆಯ ಮೂಲಕ ವ್ಯಕ್ತಿಯಲ್ಲಿ ಸಾತ್ವಿಕತೆ ಬೆಳೆದು, ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ಸಾಧ್ಯವಾಗುತ್ತದೆ. ಯಾವುದೇ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಭಜನಾ ಪರಂಪರೆಯು ಸಾಮರಸ್ಯ ಮತ್ತು ಸಂಘಟನಾ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಭಜನಾ ಪರಿಷತ್ತಿನ ಪದಾಧಿಕಾರಿಗಳ ವಾರ್ಷಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಭಜನಾ ಪರಿಷತ್ತಿನ ಕಾರ್ಯಚಟುವಟಿಕೆಗಳು ಯಾವುದೇ ಭೇದಭಾವವಿಲ್ಲದೆ ಉತ್ತಮವಾಗಿ ನಡೆಯುತ್ತಿವೆ. ಭಜನೋತ್ಸವಗಳ ಮೂಲಕ ವಿವಿಧ ಭಜನಾ ಮಂಡಳಿಗಳು ಒಂದೆಡೆ ಸೇರುವುದರಿಂದ ಪರಸ್ಪರ ಸಂಪರ್ಕ ಹೆಚ್ಚುವುದರ ಜೊತೆಗೆ ಸಂಘಟನೆ ಮತ್ತಷ್ಟು ಬಲಗೊಳ್ಳುತ್ತಿದೆ ಎಂದರು.‘ಭಜನೆಯಲ್ಲಿ ಮಕ್ಕಳು ಸಂತೋಷದಿಂದ ಪಾಲ್ಗೊಂಡು ಕುಣಿಯುವುದನ್ನು ನೋಡುವುದೇ ಒಂದು ಆನಂದ. ಭಜನಾ ಪರಿಷತ್ತಿನ ಎಲ್ಲ ಪದಾಧಿಕಾರಿಗಳ ಪರಿಶ್ರಮ ಅಭಿನಂದನೀಯ. ಜನರಲ್ಲಿ ಭಜನೆಯ ಬಗ್ಗೆ ಗೌರವ, ಆಸಕ್ತಿ ಮತ್ತು ಉತ್ಸಾಹ ಮೂಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ನಿರಂತರ ಪ್ರಯತ್ನ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಭಜನಾ ಪರಿಷತ್ತಿಗೆ ಸಂಘಟನಾ ಬಲ ಅಗತ್ಯ: ಹೇಮಾವತಿ ವಿ. ಹೆಗ್ಗಡೆಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಹಾಗೂ ದೀಪೋತ್ಸವಗಳಂತೆ ಭಜನಾ ಕಮ್ಮಟವೂ ನಿರಂತರವಾಗಿ ನಡೆಯುತ್ತಿರುವ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದೆ. ಭಜನಾ ಕಮ್ಮಟವು ಊರಿನ ಜನರು ನಿರೀಕ್ಷಿಸುವ ಹಬ್ಬದಂತಾಗಿದೆ ಎಂದರು.ಭಜನೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಇಂದಿನ ದಿನಗಳಲ್ಲಿ ದೂರದರ್ಶನ ಸೇರಿದಂತೆ ವಿವಿಧ ಮಾಧ್ಯಮಗಳ ಪ್ರಭಾವದಿಂದ ಯುವಜನತೆ ಭಜನೆಯಿಂದ ವಿಮುಖರಾಗುತ್ತಿರುವುದು ಕಂಡುಬರುತ್ತಿದೆ. ಯುವಜನರಿಗೆ ಭಜನೆಯ ಮಹತ್ವವನ್ನು ತಿಳಿಸಿ, ಅವರನ್ನು ಉತ್ತಮ ಜೀವನಮೌಲ್ಯಗಳತ್ತ ಮುನ್ನಡೆಸುವ ಪ್ರಯತ್ನ ನಡೆಯಬೇಕು ಎಂದು ಹೇಮಾವತಿ ವಿ. ಹೆಗ್ಗಡೆಯವರು ತಿಳಿಸಿದರು.ಭಜನಾ ಕಮ್ಮಟದ ಸಂಚಾಲಕ ಜಿ. ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ. ವೀರುಶೆಟ್ಟಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾದೇಶಿಕ ಭಜನಾ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಉಪಾಧ್ಯಕ್ಷರಾದ ರಾಜೇಂದ್ರ ಬಸ್ರೂರು, ರತ್ನವರ್ಮ ಜೈನ್ ಹಾಗೂ ಕೇಶವ ಪಿ. ಬೆಳಾಲ್ ಉಪಸ್ಥಿತರಿದ್ದರು.ಜಿ. ಸುಬ್ರಹ್ಮಣ್ಯ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ್ ಸಾಲ್ಯಾನ್ ಸ್ವಾಗತಿಸಿದರು. ಉಡುಪಿ ಸಮನ್ವಯಾಧಿಕಾರಿ ರವೀಂದ್ರ ಬಸ್ರೂರು ವಂದಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಕಾರ್ಯಕ್ರಮ ನಿರ್ವಹಿಸಿದರು.