ಶನಿವಾರ ರಾತ್ರಿಯ ಮಳೆಗೆ ವ್ಯಾಪಕ ಹಾನಿ!

| Published : Apr 28 2025, 12:52 AM IST

ಸಾರಾಂಶ

ಗದಗ-ಬೆಟಗೇರಿ ಅವಳಿ ನಗರದಲ್ಲಿ ಶನಿವಾರ ಬಿರುಗಾಳಿಯೊಂದಿಗೆ ಸುರಿದ ಭಾರೀ ಮಳೆಗೆ ವ್ಯಾಪಕ ಹಾನಿ ಸಂಭವಿಸಿದ್ದು, ಅದರಲ್ಲಿಯೂ ಬೆಟಗೇರಿ ಭಾಗದಲ್ಲಿನ ಹಲವಾರು ವಿದ್ಯುತ್ ಕಂಬಗಳು, ಬೃಹತ್ ಮರಗಳು ಧರೆಗೆ ಉರುಳಿದ್ದು, ಭಾನುವಾರ ಮಧ್ಯಾಹ್ನದವರೆಗೂ ತೆರವು ಕಾರ್ಯಾಚರಣೆ ಮುಂದುವರಿದಿದೆ.

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಶನಿವಾರ ಬಿರುಗಾಳಿಯೊಂದಿಗೆ ಸುರಿದ ಭಾರೀ ಮಳೆಗೆ ವ್ಯಾಪಕ ಹಾನಿ ಸಂಭವಿಸಿದ್ದು, ಅದರಲ್ಲಿಯೂ ಬೆಟಗೇರಿ ಭಾಗದಲ್ಲಿನ ಹಲವಾರು ವಿದ್ಯುತ್ ಕಂಬಗಳು, ಬೃಹತ್ ಮರಗಳು ಧರೆಗೆ ಉರುಳಿದ್ದು, ಭಾನುವಾರ ಮಧ್ಯಾಹ್ನದವರೆಗೂ ತೆರವು ಕಾರ್ಯಾಚರಣೆ ಮುಂದುವರಿದಿದೆ.

ಅದರಲ್ಲಿಯೂ ಬೆಟಗೇರಿ ಬಸ್ ನಿಲ್ದಾಣದ ಪಕ್ಕದಲ್ಲಿಯೇ 7 ವರ್ಷಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ತರಕಾರಿ ಮಾರುಕಟ್ಟೆಯ ಫಿಲ್ಲರ್‌ಗಳಲ್ಲಿ ಬಿರುಕು ಬಿಟ್ಟಿದ್ದು ಅಲ್ಲಿ ವ್ಯಾಪಾರ ಮಾಡುತ್ತಿರುವ 100ಕ್ಕೂ ಹೆಚ್ಚು ತರಕಾರಿ ವ್ಯಾಪಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದರೊಟ್ಟಿಗೆ ಮಂಜುನಾಥ ನಗರದ ವಿವಿಧ ಭಾಗಗಳಲ್ಲಿ ಹಾಗೂ ಹುಯಿಲಗೋಳ ರಸ್ತೆಯಲ್ಲಿನ ವಿವಿಧ ಬಡಾವಣೆಗಳಲ್ಲಿ 5ಕ್ಕೂ ಹೆಚ್ಚಿನ ವಿದ್ಯುತ್ ಕಂಬಗಳು, ಬೃಹತ್ ಮರಗಳು ಉರುಳಿ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿತ್ತು.

ಸಿಡಿಲಿಗೆ ಬೆದರಿದ ಜನ: ರಾತ್ರಿ ಸುರಿದ ಧಾರಾಕಾರ ಮಳೆಯೊಂದಿಗೆ ಅಬ್ಬರಿಸಿದ ಸಿಡಿಲುಗಳಿಗೆ ಜನರು ಬೆಚ್ಚಿ ಬಿದಿದ್ದು, ಹಲವಾರು ಗಂಟೆಗಳ ಕಾಲ ಜನರು ಮನೆಯಿಂದ ಆಚೆ ಬರಲು ಕೂಡಾ ಹೆದರಿ ಕುಳಿತುಕೊಂಡಿದ್ದರು. ಇದರೊಟ್ಟಿಗೆ ಭಾರೀ ಪ್ರಮಾಣದಲ್ಲಿ ಬೀಸಿದ ಬಿರುಗಾಳಿಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಹಲವಾರು ಮನೆಗಳ ಮೇಲಿನ ನೀರಿನ ಟ್ಯಾಂಕಗಳು ಕಿತ್ತು ಹೋಗಿವೆ. ತಗಡಿನಿಂದ ನಿರ್ಮಾಣವಾಗಿರುವ ಶೆಡ್ಗಳ ಚಾವಣಿಗಳು ಕಿತ್ತು ಹೋಗಿ ಸಾಕಷ್ಟು ಜನರು ಹಾನಿ ಅನುಭವಿಸಿದ್ದಾರೆ.

ಶನಿವಾರ ರಾತ್ರಿ ಸುರಿದ ಮಳೆ ಮತ್ತು ಗಾಳಿಯ ಅಬ್ಬರಕ್ಕೆ ಗದಗ ನಗರದ ಕೆ.ಸಿ. ರಾಣಿ ರಸ್ತೆಯ ಪಕ್ಕದಲ್ಲಿರುವ ಶಿರೋಳ ಆಸ್ಪತ್ರೆಯ ಮುಂಭಾಗದಲ್ಲಿನ ಬೃಹತ್ ಮರ ಬಿದ್ದು ಆ ಭಾಗದಲ್ಲಿ ರಾತ್ರಿಯಲ್ಲಾ ವಿದ್ಯುತ್ ಸಂಪರ್ಕ ಇಲ್ಲದೇ ಜನರು ಪರದಾಡಿದರು. ಇದರೊಟ್ಟಿಗೆ ಬೆಟಗೇರಿ ಮತ್ತು ಪಾಲಾ ಬದಾಮಿ ರಸ್ತೆಯಲ್ಲಿ ಬಿದ್ದಿದ್ದ ಮರಗಳ ತೆರವು ಕಾರ್ಯಾಚರಣೆ ಭಾನುವಾರ ಮಧ್ಯಾಹ್ನದವರೆಗೂ ನಡೆಯಿತು.

ಕಳಪೆ ಕಾಮಗಾರಿ ವಾಸನೆ: ಭಾರೀ ಗಾಳಿ ಮತ್ತು ಮಳೆಗೆ ವಾಲಿರುವ ಬೆಟಗೇರಿ ತರಕಾರಿ ಮಾರುಕಟ್ಟೆಯ ಫಿಲ್ಲರ್‌ಗಳು ಯಾವಾಗ ಕುಸಿದು ಬಿಡುತ್ತವೆ ಎಂಬ ಭಯ ಎಲ್ಲರಲ್ಲಿಯೂ ಕಾಡಲಾರಂಭಿಸಿದ್ದು, ಭಾನುವಾರ ಬೆಳಗ್ಗೆಯಿಂದಲೇ ನಗರಸಭೆ ಅಧಿಕಾರಿಗಳು ತಜ್ಞರನ್ನು ಕರೆಸಿ ಪರಿಶೀಲನಾ ಕಾರ್ಯದ ಜತೆಗೆ ತಾತ್ಕಾಲಿಕ ಪರಿಹಾರದ ಕಾರ್ಯವನ್ನು ನಡೆಸುತ್ತಿದ್ದಾರೆ. ಬೆಟಗೇರಿ ಭಾಗದಲ್ಲಿ 2018 ಕ್ಕೂ ಮುಂಚೆ ತರಕಾರಿ ವ್ಯಾಪಾಸ್ಥರು ಬಿಸಿಲು, ಗಾಳಿ-ಮಳೆಯೆನ್ನದೇ ರಸ್ತೆ ಬದಿ ಕುಳಿತು ವ್ಯಾಪಾರ ಮಾಡುತ್ತಿದ್ದರು. ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದರಿಂದ ರಸ್ತೆಯಲ್ಲಿ ಟ್ರಾಫಿಕ್ ಉಂಟಾಗಿ ಸಂಚಾರದಲ್ಲಿ ವ್ಯತ್ಯಯ ವಾಗುತ್ತಿದ್ದರಿಂದ ನೂತನವಾಗಿ ತರಕಾರಿ ಮಾರುಕಟ್ಟೆ ನಿರ್ಮಿಸಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಲಾಗಿತ್ತು. ಬಸ್ ನಿಲ್ದಾಣದ ಪಕ್ಕದಲ್ಲಿ ನಗರಸಭೆ ವತಿಯಿಂದ ಅಂದಾಜು 2 ಕೋಟಿ ವೆಚ್ಚದಲ್ಲಿ 120 ಮಳಿಗೆಗಳನ್ನು ಹೊಂದಿದ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲಾಗಿತ್ತು. ಪ್ರತಿ ಮಳಿಗೆಗೆ ವಿದ್ಯುತ್ ದೀಪ, ತರಕಾರಿ ಸಂಗ್ರಹಕ್ಕಾಗಿ ನೆಲ ಮಹಡಿಯ ವಿಶೇಷ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ಮಾರುಕಟ್ಟೆಯ ಫಿಲ್ಲರ್‌ಗಳು ಬಿರುಕು ಬಿಟ್ಟು ವಾಲುತ್ತಿರುವುದರಿಂದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. 2016ರಲ್ಲಿ ಬೆಟಗೇರಿ ಭಾಗದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭಗೊಂಡು, 2018ರಲ್ಲಿ ಉದ್ಘಾಟನೆಗೆ ಸಿದ್ಧವಾಗಿತ್ತು. ಉದ್ಘಾಟನೆಯ ಸಮಯದಲ್ಲೇ ಮಾರುಕಟ್ಟೆ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಸ್ಥಳಿಯರು ಉದ್ಘಾಟನೆಗೆ ತಡೆ ನೀಡಿದ್ದರು. ಉದ್ಘಾಟನೆಯ ಸಮಯದಲ್ಲೇ ಮಾರುಕಟ್ಟೆಯ ಪಿಲ್ಲರ್‌ಗಳು ಸರಿಯಾಗಿಲ್ಲದ ಕಾರಣ ಕಾಂಕ್ರೀಟ್ ಫಿಲ್ಲರ್‌ಗಳಿಗೆ ಸಫೋರ್ಟ್ ಆಗಿ ಕಬ್ಬಿಣದ ಫಿಲ್ಲರ್‌ಗಳನ್ನು ಅಳವಡಿಸಲಾಗಿತ್ತು. ಬೆಟಗೇರಿ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭದಿಂದಲೂ ಕಳಪೆಯಿಂದ ಕೂಡಿದ್ದು, ವ್ಯಾಪಾರಸ್ಥರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು. ಮುಂದೆ ಅನಾಹುವಾಗುವುದಕ್ಕೂ ಮುನ್ನ ನಗರಸಭೆ ಎಚ್ಚೆತ್ತುಕೊಂಡು ಕಳಪೆ ಕಾಮಗಾರಿಯಿಂದ ಕೂಡಿದ ತರಕಾರಿ ಮಾರುಕಟ್ಟೆಯನ್ನು ನೆಲಸಮ ಮಾಡಿ, ವೈಜ್ಞಾನಿಕತೆಯಿಂದ ಕೂಡಿದ, ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಅನುಕೂಲವಾಗುವಂತಹ ಸುಸಜ್ಜಿತ ಮಾರುಕಟ್ಟೆ ಮಾಡಬೇಕು ಎಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಹೇಳಿದರು.