ಸಾತನೂರು ಪಂಚಾಯಿತಿಯ ಸರ್ವೇ ನಂ.೨೦೬ ಮತ್ತು ಉಮ್ಮಡಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ.೨೭೨ರಲ್ಲಿ ಬರುವ ಬಿ-ಖರಾಬು ಭೂಮಿಯನ್ನು ವಿಭಜಿಸಿ ಹೆದ್ದಾರಿ ರಸ್ತೆಗೆ ತೋರಿಸಿರುವುದು ತನಿಖೆ ವೇಳೆ ಕಂಡುಬಂದಿದೆ. ಅದೇ ರೀತಿ ಬಿ-ಖರಾಬು ಭೂಮಿಯನ್ನು ರಸ್ತೆಗೆ ಸೇರಿಸಿರುವ ಮಾದರಿಯಲ್ಲೇ ನಿವೇಶನಗಳಿಗೂ ಸೇರಿಸಿರಬಹುದೇ ಎಂಬ ನಿಟ್ಟಿನಲ್ಲೂ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಹೊರವಲಯದಲ್ಲಿರುವ ಸತ್ವ ಗ್ರೂಪ್ ರಿಯಲ್ ಎಸ್ಟೇಟ್ ಕಂಪನಿಯವರು ಬಿ- ಖರಾಬು ಭೂಮಿಯನ್ನು ಗುಳುಂ ಮಾಡಿರುವ ಪ್ರಕರಣ ಲೋಕಾಯುಕ್ತರು ನಡೆಸಿದ ದಾಳಿ ವೇಳೆ ಬೆಳಕಿಗೆ ಬಂದಿದೆ.

ಸತ್ವ ಗ್ರೂಪ್ ರಿಯಲ್ ಎಸ್ಟೇಟ್ ಮತ್ತು ಬಿಲ್ಡರ್ ಕಂಪನಿಯವರು ಬಿ- ಖರಾಬು ಭೂಮಿಯನ್ನು ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆಗೆ ಸೇರಿಸಿ ಹೆದ್ದಾರಿ ಪ್ರಾಧಿಕಾರದಿಂದ ₹೧೩ ಕೋಟಿ ಪರಿಹಾರ ಪಡೆದುಕೊಂಡಿರುವ ಬಗ್ಗೆ ಮಂಡ್ಯದ ಬೋರೇಗೌಡ ಎಂಬುವರು ಉಪ ಲೋಕಾಯುಕ್ತರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಶೋಧನೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದರು.

ಅದರಂತೆ ಲೋಕಾಯುಕ್ತ ಡಿವೈಎಸ್ಪಿ ಸುನೀಲ್‌ಕುಮಾರ್, ಲೋಕಾಯುಕ್ತ ನಿರೀಕ್ಷಕ ಬ್ಯಾಟರಾಯಗೌಡ, ರವಿಕುಮಾರ್, ಲೇಪಾಕ್ಷಮೂರ್ತಿ ಅವರು ಪ್ರತ್ಯೇಕ ತಂಡಗಳಾಗಿ ಎಡಿಎಲ್‌ಎಲ್ ಕಚೇರಿ, ಮುಡಾ ಕಚೇರಿ, ಉಮ್ಮಡಹಳ್ಳಿ ಹಾಗೂ ಸಾತನೂರು ಪಂಚಾಯಿತಿಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದರು.

ನಗರದ ಹೊರವಲಯದಲ್ಲಿದ್ದ ಅಸಿಟೇಟ್ ಕಾರ್ಖಾನೆ ಮುಚ್ಚಿದ ಬಳಿಕ ಭೂಮಿಯನ್ನು ಎನ್‌ಎಸ್‌ಎಲ್ ಷುಗರ್ಸ್‌ನವರಿಗೆ ಅಂದಿನ ರಾಜ್ಯ ಸರ್ಕಾರ ಮಾರಾಟ ಮಾಡಿತ್ತು. ಆನಂತರದಲ್ಲಿ ಆ ಭೂಮಿಯನ್ನು ಸತ್ವ ಗ್ರೂಪ್ ರಿಯಲ್ ಎಸ್ಟೇಟ್ ಮತ್ತು ಬಿಲ್ಡರ್ ಕಂಪನಿಯವರು ಖರೀದಿಸಿದ್ದರು. ಬಳಿಕ ಕೈಗಾರಿಕಾ ಉದ್ದೇಶಕ್ಕೆ ಇದ್ದ ಭೂಮಿಯನ್ನು ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲಾಯಿತು. ಈ ಸಮಯದಲ್ಲಿ ಬಿ- ಖರಾಬು ಭೂಮಿಯೂ ಸೇರಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಮಯದಲ್ಲಿ ಬಿ- ಖರಾಬು ಭೂಮಿಯನ್ನೂ ಸೇರಿಸಿ ಸತ್ವ ಗ್ರೂಪ್‌ನವರು ₹೧೩ ಕೋಟಿ ಪರಿಹಾರ ಪಡೆದುಕೊಂಡಿರುವುದಾಗಿ ದೂರಲಾಗಿದೆ. ಅದರನ್ವಯ ಲೋಕಾಯುಕ್ತ ಪೊಲೀಸರು ಉಮ್ಮಡಹಳ್ಳಿ ಮತ್ತು ಸಾತನೂರು ಪಂಚಾಯಿತಿಗಳಲ್ಲಿ ತಪಾಸಣೆ ನಡೆಸಿದಾಗ ಪಂಚಾಯಿತಿಯ ಮೂಲ ನಕ್ಷೆ ಹಾಗೂ ಸತ್ವ ಗ್ರೂಪ್‌ನ ಲೇ-ಔಟ್ ನಕ್ಷೆ ಬೇರೆ ಬೇರೆಯಾಗಿರುವುದು ಕಂಡುಬಂದಿದೆ.

ಸಾತನೂರು ಪಂಚಾಯಿತಿಯ ಸರ್ವೇ ನಂ.೨೦೬ ಮತ್ತು ಉಮ್ಮಡಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ.೨೭೨ರಲ್ಲಿ ಬರುವ ಬಿ-ಖರಾಬು ಭೂಮಿಯನ್ನು ವಿಭಜಿಸಿ ಹೆದ್ದಾರಿ ರಸ್ತೆಗೆ ತೋರಿಸಿರುವುದು ತನಿಖೆ ವೇಳೆ ಕಂಡುಬಂದಿದೆ. ಅದೇ ರೀತಿ ಬಿ-ಖರಾಬು ಭೂಮಿಯನ್ನು ರಸ್ತೆಗೆ ಸೇರಿಸಿರುವ ಮಾದರಿಯಲ್ಲೇ ನಿವೇಶನಗಳಿಗೂ ಸೇರಿಸಿರಬಹುದೇ ಎಂಬ ನಿಟ್ಟಿನಲ್ಲೂ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದರಂತೆ ಮುಡಾ ಕಚೇರಿಗೆ ಸಲ್ಲಿಸಿರುವ ಸ್ಕೆಚ್, ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿರುವ ಸರ್ವೇ ಸ್ಕೆಚ್, ಉಮ್ಮಡಹಳ್ಳಿ ಮತ್ತು ಸಾತನೂರು ಪಂಚಾಯಿತಿಗಳ ನಕಾಶೆ, ಪಂಚಾಯಿತಿಗಳ ವ್ಯಾಪ್ತಿ, ಸತ್ವ ಗ್ರೂಪ್‌ಗೆ ಸೇರಿದ ಒಟ್ಟು ವಿಸ್ತೀರ್ಣ, ಹೆದ್ದಾರಿ ರಸ್ತೆ ಹಾದುಹೋಗಿರುವ ವಿಸ್ತೀರ್ಣ, ಎರಡೂ ಪಂಚಾಯಿತಿ ವ್ಯಾಪ್ತಿಯಲ್ಲಿರಬಹುದಾದ ಬಿ-ಖರಾಬು ಜಮೀನು ಎಂಬೆಲ್ಲಾ ಮಾಹಿತಿಗಳನ್ನು ಲೋಕಾಯುಕ್ತ ಪೊಲೀಸರು ಕಲೆ ಹಾಕುತ್ತಿದ್ದಾರೆ. ಈ ಸಂಬಂಧ ಭೌತಿಕ ಸರ್ವೇ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವರದಿ ಬಂದ ನಂತರ ಬಿ-ಖರಾಬು ಭೂಮಿಯಲ್ಲೂ ನಿವೇಶನಗಳನ್ನು ರಚಿಸಲಾಗಿದೆಯೇ ಎನ್ನುವುದು ಗೊತ್ತಾಗಲಿದೆ ಎಂದು ತಿಳಿದುಬಂದಿದೆ.

ಲೋಕಾಯುಕ್ತ ಡಿವೈಎಸ್ಪಿ ಸುನಿಲ್‌ಕುಮಾರ್ ಅವರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ, ಲೋಕಾಯುಕ್ತ ನಿರೀಕ್ಷಕ ಬ್ಯಾಟರಾಯಗೌಡ ಅವರು ವಿಶೇಷ ಭೂಸ್ವಾಧಿನಾಧಿಕಾರಿ ಕಚೇರಿ, ಉಮ್ಮಡಹಳ್ಳಿ ಪಂಚಾಯಿತಿಯಲ್ಲಿ ರವಿಕುಮಾರ್ ಹಾಗೂ ಸಾತನೂರು ಪಂಚಾಯಿತಿ ಕಚೇರಿಯಲ್ಲಿ ಲೇಪಾಕ್ಷಮೂರ್ತಿ ಅವರು ತನಿಖೆ ನಡೆಸಿದರು. ಗುರುವಾರವೂ ಲೋಕಾಯುಕ್ತ ಪೊಲೀಸರ ತನಿಖೆ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.