ಒತ್ತುವರಿ ರಸ್ತೆ ತೆರವಿಗಾಗಿ ಮೂರನೇ ಬಾರಿಗೆ ಸತ್ಯಾಗ್ರಹ: ಡಿ.ಪ್ರಭಾಕರ್

| Published : Feb 25 2025, 12:49 AM IST

ಸಾರಾಂಶ

ಒತ್ತುವರಿ ರಸ್ತೆ ತೆರವಿಗಾಗಿ ಕಳೆದ 21 ವರ್ಷಗಳಿಂದ ಹೋರಾಟ ನಡೆಸಿದರೂ ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ಪಟ್ಟಣದ ತಾಲೂಕು ಕಚೇರಿ ಎದುರು 3ನೇ ಬಾರಿಗೆ ಸತ್ಯಾಗ್ರಹ ನಡೆಸಲಾಗುತ್ತಿದೆ. 2004ನೇ ಸಾಲಿನಿಂದ 2025ನೇ ಸಾಲಿನವರೆಗೆ ನಾನು ರಸ್ತೆ ಒತ್ತುವರಿ ವಿಚಾರವಾಗಿ ಒತ್ತಾಯಿಸುತ್ತಿದ್ದೇನೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಒತ್ತುವರಿ ರಸ್ತೆ ತೆರವಿಗಾಗಿ ಕಳೆದ 21 ವರ್ಷಗಳಿಂದ ಹೋರಾಟ ನಡೆಸಿದರೂ ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ಪಟ್ಟಣದ ತಾಲೂಕು ಕಚೇರಿ ಎದುರು 3ನೇ ಬಾರಿಗೆ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ದರಸಗುಪ್ಪೆ ಗ್ರಾಮದ ರೈತ ಡಿ.ಪ್ರಭಾಕರ್ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ತಾಲೂಕಿನ ಕಿರಂಗೂರು ಗ್ರಾಮದ ಸರ್ವೇ ನಂ. 1078/1 ರಿಂದ 1078/4 ಹಾಗೂ 1073/1ಬಿ2 ತನಕ ಇರುವ ನಾಲ ಹಾಗೂ ರಸ್ತೆ ಖರಾಬು ನಾಲಾ ಹಾಗೂ ರಸ್ತೆಯ ಮಧ್ಯದಲ್ಲಿನ (ಮಂಟಪದ ಪಕ್ಕ) ಒತ್ತುವರಿ ರಸ್ತೆ ತೆರವು ಮಾಡಿ ಸಾರ್ವಜನಿಕ ರಸ್ತೆಯನ್ನಾಗಿ ಕಲ್ಪಿಸುವಂತೆ ಹೋರಾಟ ನಡೆಸುತ್ತಿದ್ದೇನೆ ಎಂದರು.

ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಅಧಿಕಾರಿಗಳ ವಿರುದ್ಧ ಸತ್ಯಾಸತ್ಯತೆ ಬಗ್ಗೆ ನ್ಯಾಯಾಲಯದಲ್ಲಿ ಉನ್ನತ ಮಟ್ಟದ ತನಿಖೆ ಕೋರಿ 3ನೇ ಬಾರಿಗೆ ಸತ್ಯಾಗ್ರಹ ನಡೆಸಲು ಮುಂದಾಗಿದ್ದೇನೆ ಎಂದರು.

2004ನೇ ಸಾಲಿನಿಂದ 2025ನೇ ಸಾಲಿನವರೆಗೆ ನಾನು ರಸ್ತೆ ಒತ್ತುವರಿ ವಿಚಾರವಾಗಿ ಒತ್ತಾಯಿಸುತ್ತಿದ್ದೇನೆ. ಆದರೆ, ಪ್ರಭಾವಿ ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದು, ನನಗೆ ಕಷ್ಟ-ಆರ್ಥಿಕ ನಷ್ಟಗಳು ಹಾಗೂ ರಸ್ತೆ ಒತ್ತುವರಿ ಮಾಡಿಕೊಂಡಿರುವ ಅಕ್ಕ ಪಕ್ಕದ ರೈತರು ಸಹ ನನ್ನ ಮೇಲೆ ಮಾರಣಾಂತಿಕ ಹಲ್ಲೇ ಪ್ರಕರಣ ನಡೆದಿದ್ದರೂ ದೂರು ನೀಡಿದ ವೇಳೆ, ಪೊಲೀಸರು ಅದನ್ನು ‘ಸಿ’ ರೀಪೋರ್ಟ್ ಹಾಕಿದ್ದಾರೆ. ಸ್ಥಳೀಯ ಶಾಸಕರು ರಸ್ತೆ ಕಾಮಗಾರಿಗೆ ಹಣ ಮಂಜೂರಾತಿ ಮಾಡಿಸಿ ಗುತ್ತಲಿ ಪೂಜೆ ನಡೆಸಿದರೂ ಕಾಮಗಾರಿ ಇನ್ನು ಆರಂಭಿಸಿಲ್ಲ ಎಂದು ಆರೋಪಿಸಿದರು.

ಈಗಾಗಲೇ ಈ ರಸ್ತೆ ವಿಚಾರದಲ್ಲಿ ಎರಡು ಬಾರಿ ಉಪವಾಸ ಸತ್ಯಾಗ್ರಹಗಳ ನಡೆಸಿದ್ದೆ. ಈಗ ಮುಂದುವಸಿ ಸತ್ಯಾ-ಸತ್ಯತೆಯ ಬಗ್ಗೆ ನ್ಯಾಯಾಲಯದಲ್ಲಿ ಉನ್ನತ ಮಟ್ಟದ ತನಿಖೆ ಕೋರಿ ಮಾರ್ಚ್ 17ರಂದು ತಾಲೂಕು ಕಚೇರಿ ಮುಂದೆ ಧರಣಿ ಕುಳಿತು 3ನೇ ಬಾರಿಗೆ ಸತ್ಯಾಗ್ರಹ ಮಾಡಿ ಕಾನೂನು ಹೋರಾಟಕ್ಕೆ ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.