ನಾರಾಯಣಪೂರ ಬಲದಂಡೆ ನಾಲಾ ವ್ಯಾಪ್ತಿಯಲ್ಲಿ ನೀರಿನ ಅಭಾವ ತೀವ್ರಗೊಂಡಿದ್ದು, ರೈತರು ಆತಂಕದಲ್ಲಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ನಿರ್ಮಾಣಗೊಂಡಿದೆ. ಸರ್ಕಾರ ಬೆಳೆಗಳ ರಕ್ಷಣೆಗೆ ಬಸವ ಜಲಾಶಯದಿಂದ ನೀರು ಹರಿಸದೇ ಹೋದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಉಪವಾಸ ಸತ್ಯಾಗ್ರಹ ಹೂಡುವದಾಗಿ ಶಾಸಕಿ ಕರೆಮ್ಮ ಜಿ. ನಾಯಕ ತಿಳಿಸಿದರು.
ಕನ್ನಡಪ್ರಭ ವಾರ್ತೆ ದೇವದುರ್ಗ
ನಾರಾಯಣಪೂರ ಬಲದಂಡೆ ನಾಲಾ ವ್ಯಾಪ್ತಿಯಲ್ಲಿ ನೀರಿನ ಅಭಾವ ತೀವ್ರಗೊಂಡಿದ್ದು, ರೈತರು ಆತಂಕದಲ್ಲಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ನಿರ್ಮಾಣಗೊಂಡಿದೆ. ಸರ್ಕಾರ ಬೆಳೆಗಳ ರಕ್ಷಣೆಗೆ ಬಸವ ಜಲಾಶಯದಿಂದ ನೀರು ಹರಿಸದೇ ಹೋದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಉಪವಾಸ ಸತ್ಯಾಗ್ರಹ ಹೂಡುವದಾಗಿ ಶಾಸಕಿ ಕರೆಮ್ಮ ಜಿ. ನಾಯಕ ತಿಳಿಸಿದರು.ದೇವದುರ್ಗ - ರಾಯಚೂರು ರಸ್ತೆ ಮಾರ್ಗದಲ್ಲಿರುವ ಸಿರವಾರ ಕ್ರಾಸ್ ಬಳಿ ತಾಲೂಕು ಜೆಡಿಎಸ್ ಸೋಮವಾರ ಹಮ್ಮಿ ಕೊಂಡಿದ್ದ ಬೃಹತ್ ರೈತರ ರ್ಯಾಲಿ ಹಾಗೂ ಸಂಚಾರ ತಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ರಾಯಚೂರು, ದೇವದುರ್ಗ ಮತ್ತು ಲಿಂಗಸಗೂರು ತಾಲೂಕುಗಳ ರೈತರ ಒತ್ತಾಸೆ ಮೇರೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ನಾರಾಯಣಪೂರ ಬಲದಂಡೆ ನಾಲೆ ನಿರ್ಮಿಸಿ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಆದರೆ ಜಲಾಶಯದಲ್ಲಿ ನೀರಿನ ಲಭ್ಯತೆ ಇದ್ದರೂ ನೀರಿಗಾಗಿ ನಾವು ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ನಿರ್ಮಾಣಗೊಂಡಿದೆ. ನೀರಾವರಿ ಸಲಹಾ ಸಮಿತಿಯಲ್ಲಿ ಅನೇಕ ಬಾರಿ ನೀರಿನ ಅವಶ್ಯಕತೆ ಮತ್ತು ಗಂಭೀರತೆ ಕುರಿತು ಅನೇಕ ಬಾರಿ ಗಮನ ಸೆಳೆಯಲಾಗಿದೆ. ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರಿಗೆ ಭೇಟಿ ಮಾಡಿ ಈ ಭಾಗದ ಬೆಳೆಗಳ ವಸ್ತುಸ್ಥಿತಿ ಕುರಿತು ಚರ್ಚಿಸಲಾಗಿದೆ. ಆದರೂ ಕೂಡ ಸರ್ಕಾರ ಗಮನ ಹರಿಸದೇ ಇರುವುದು ವಿಷಾದದ ಸಂಗತಿಯಾಗಿದೆ.
ಹತ್ತಿ ಬೆಳೆಗಳಿಗೆ ನೀರೇನೂ ಬೇಕಾಗಿಲ್ಲ. ಆದರೆ ಭತ್ತ ಮತ್ತು ಮೆಣಸಿನಕಾಯಿ ಫಸಲು ಬಿಡುವ ಸಮಯವಿದೆ. ಕನಿಷ್ಟ ಜನವರಿ ಮೊದಲ ವಾರದವರೆಗೆ ಕಾಲುವೆಗಳ ಮುಖಾಂತರ ಜಮೀನುಗಳಿಗೆ ನೀರು ಬೇಕೇ ಬೇಕು. ಇಲ್ಲದೇ ಹೋದಲ್ಲಿ ಆಹಾರದ ಅಭದ್ರತೆ ಜೊತೆಗೆ ರೈತರಿಗೆ ಅಪಾರ ಹಾನಿ ಉಂಟಾಗಲಿದೆ. ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ನೀರಿನ ಅಗತ್ಯತೆ ಕುರಿತು ಸರ್ಕಾರದ ಗಮನ ಸೆಳೆಯಬೇಕು.ನೀರಾವರಿ ಸಚಿವರು ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೂಡಲೇ ನೀರು ಹರಿಸಬೇಕು. ಇಲ್ಲದೇ ಹೋದಲ್ಲಿ ವಿಧಾನಸೌಧದ ಬಳಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಶಾಸಕಿ ಕರೆಮ್ಮ ಜಿ. ನಾಯಕ ಎಚ್ಚರಿಸಿದರು.ಪ್ರತಿಭಟನಾ ಧರಣಿ ಉದ್ದೇಶಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ದೇವದುರ್ಗ ತಾಲೂಕು ಅಧ್ಯಕ್ಷ ಬಸನಗೌಡ ದೇಸಾಯಿ, ಅರಕೇರಾ ತಾಲೂಕು ಅಧ್ಯಕ್ಷ ಸಿದ್ದಣ್ಣ ಬಿ.ಗಣೆಕಲ್,ಮುಖಂಡರಾದ ಮಹಾಂತೇಶ ಪಾಟೀಲ್ ಅತ್ತನೂರು, ಶಿವಶಂಕರ ವಕೀಲರು, ಅಮರೇಶ ಪಾಟೀಲ್ ಪರ್ತಪೂರ, ಶರಣಪ್ಪ ಬಳೆ, ಶಾಲಂ ಉದ್ದಾರಮ ಶಿವನಗೌಡ ಕಕ್ಕಲದೊಡ್ಡಿ, ಬಸವರಾಜಪ್ಪ ವಾರದ ಮಾತನಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ರೇಣುಕಾ ಎಂ.ಸ್ವಾಮಿ, ರಂಗಮ್ಮ ಇರಬಗೇರಾ, ಗೋವಿಂದ ರಾಜ್ ನಾಯಕಕೊತ್ತದೊಡ್ಡಿ, ಶಿವು ಕಾಳೆ, ಈಸಾಕ್ ಮೇಸ್ತ್ರಿ, ಹನುಮಂತ್ರಾಯ ನಾಯಕ ಚಿಂತಲಕುಂಟಿ, ರಾಮಣ್ಣ ಮದರಕಲ್ ಹಾಗೂ ಇತರರು ಪಾಲ್ಗೊಂಡಿದ್ದರು.
ಸಂಚಾರ ತಡೆ, ಸಂಚಾರ ಅಸ್ತವ್ಯಸ್ತ: ಸಿರವಾರ ಕ್ರಾಸ್ ಬಳಿ ಜೆಡಿಎಸ್ ಕಾರ್ಯಕರ್ತರು ನಡೆಸಿದ ಸಂಚಾರ ತಡೆಯಿಂದ ಪ್ರಯಾಣಿಕರು ಪರದಾಡಬೇಕಾಯಿತು. ರಾಯಚೂರು ಮತ್ತು ಸಿರವಾರಕ್ಕೆ ತೆರಳುವ ವಾಹನಗಳನ್ನು ಪ್ರತ್ಯೇಕ ಮಾರ್ಗದಲಿ ಸಂಚರಿಸಲು ಪೊಲೀಸರು ಸೂಚಿಸಿದರು. ಸುಮಾರು 3 ಗಂಟೆ ಜರುಗಿದ ರಸ್ತೆ ತಡೆಯಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಸ್ತೆ ಮಧ್ಯದಲ್ಲಿಯೇ ಪ್ರತಿಭಟನಾಕಾರರು ಕುಳಿತ ದಿದ್ದರಿಂದ ಎರಡು ಬದಿಯಲ್ಲಿ ವಾಹನಗಳು ಜಮೆಗೊಂಡಿದ್ದವು.ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.ತಹಸೀಲ್ದಾರ್ರಿಗೆ ಮನವಿ ಪತ್ರ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ್ ನಾಗಮ್ಮ ಎಂ.ಕಟ್ಟೀಮನಿ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿ, ಜನವರಿ ಮೊದಲ ವಾರದವರೆಗೆ ನಾರಾಯಣಪೂರ ಬಲದಂಡೆ ನಾಲಾ ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಿಸುವದು,ಬರಗಾಲ ಪ್ರದೇಶ ಘೋಷಣೆಯಾಗಿದ್ದು ಕೂಡಲೇ ಪರಿಹಾರ ಕ್ರಮಗಳನ್ನು ಜಾರಿಗೊಳಿಸುವುದು, ಮುಂಗಾರು ಮತ್ತು ಹಿಂಗಾರು ಬೆಳೆಗಳು ಕೈಕೊಟ್ಟಿದ್ದು ರೈತರು ಸಂಕಷ್ಟದಲ್ಲಿದ್ದು ಕೂಡಲೇ ಸಾಲಮನ್ನಾ ಘೋಷಣೆ ಮಾಡಬೇಕು. ಬೆಳೆ ವಿಮೆ ಕಂಪನಿಯವರು ಈಗಾಗಲೇ ರೈತರಿಂದ ವಿಮೆ ಕಂತು ಪಡೆದಿದ್ದು ವಿಮಾ ಪರಿಹಾರ ನೀಡಬೇಕು.
ಚಿಕ್ಕಹೊನ್ನಕುಣಿಯಲ್ಲಿದ್ದ ಕೆಬಿಜೆಎನ್ಎಲ್ನ 6ನೇ ವಿಭಾಗೀಯ ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರಿಸಿದ್ದು,ಕೂಡಲೇ ರದ್ದು ಪಡಿಸಬೇಕು.ಮತ್ತು ಅಧೀಕ್ಷಕ ಅಭಿಯಂತರ ಕಚೇರಿಯನ್ನು ದೇವದುರ್ಗಕ್ಕೆ ಸ್ಥಳಾಂತರಿಸಬೇಕು. ತುಂಗಭದ್ರಾ ಕಾಲುವೆ ವ್ಯಾಪ್ತಿಯಲ್ಲಿ ಬರುವ ನಾಗಡದಿನ್ನಿ, ಹೆಗ್ಗಡದಿನ್ನಿ, ತಿಪ್ಪಲದಿನ್ನಿ ಸೇರಿದಂತೆ ಇತರೆ ಗ್ರಾಮಗಳ ಜಮೀನಿಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರ ವಿಜಯ ಕುಮಾರ ಮುಚ್ಚಳಾಂಬೆ , ಎಇಇ ಮಂಜುನಾಥ, ಗೋಪಾಲ ಸಿಂಗ್ ಹಾಗೂ ಇತರೆ ಅಧಿಕಾರಿಗಳು ಇದ್ದರು.
ಅನಿಧಿಷ್ಟ ಧರಣಿ 3ನೇ ದಿನಕ್ಕೆ: ನಾರಾಯಣಪೂರ ಬಲದಂಡೆ ನಾಲಾ ವ್ಯಾಪ್ತಿಯಲ್ಲಿ ಭತ್ತ ಮತ್ತು ಮೆಣಸಿನಕಾಯಿ ಬೆಳೆಗಳ ರಕ್ಷಣೆಗೆ ಅಗತ್ಯ ನೀರು ಹರಿಸ ಬೇಕೆಂದು ರಾಜ್ಯ ರೈತ ಸಂಘ(ಚಂದ್ರಶೇಖರ ಕೋಡಿಹಳ್ಳಿ)ಬಣದ ಪದಾಧಿಕಾರಿಗಳು ನಡೆಸಿರುವ ಅನಿರ್ಧಿಷ್ಟ ಧರಣಿ ಸೋಮವಾರ 3 ನೇ ದಿನಕ್ಕೆ ಕಾಲಿಟ್ಟಿದೆ. ಸಿರವಾರ ಕ್ರಾಸ್ ಬಳಿ ನಡೆಸುತ್ತಿರುವ ಧರಣಿಯಲ್ಲಿ ತಾಲೂಕು ಘಟಕದ ಅಧ್ಯಕ್ಷ ಮರಿಲಿಂಗ ಪಾಟೀಲ್,ಮುಖಂಡರಾದ ರಂಗಪ್ಪ ಕಲ್ಮನಿ,ಬಾಬು ಗೌರಂಪೇಟ,ಮಲ್ಲೇಶ ನಾಯಕ, ನಾಗರಾಜ, ಈರ್ಫಾನ ಬುವಾಜಿ, ರಮೇಶ ನಾಯಕ, ಬಸವರಾಜ ಬೋವಿ ಹಾಗೂ ಇತರರು ಪಾಲ್ಗೊಂಡಿದ್ದರು.ನಾರಾಯಣಪೂರ ಡ್ಯಾಂಗೆ ಹೊರಟ ರೈತರ ಪಾದಯಾತ್ರೆ: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕೃಷಿ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಗಬ್ಬೂರನಿಂದ ನಾರಾಯಣಪೂರ ಡ್ಯಾಂಗೆ ಪಾದಯಾತ್ರೆ ಹೊರಟಿದ್ದಾರೆ.
ವಿವಿಧ ಮಠಾಧೀಶರು ಪಾದಯಾತ್ರೆಗೆ ಚಾಲನೆ ನೀಡಿದ್ದು,ದಾನಿಗಳಿಂದ ,ರೈತರಿಂದ ಊಟ,ವಸತಿ ಸೌಕರ್ಯ ಮಾಡಿಕೊಂಡಿದ್ದು ಗಮನಸೆಳೆದಿದೆ.2 ನೇ ದಿನವಾದ ಸೋಮವಾರ ದೇವದುರ್ಗಕ್ಕೆ ತಲುಪಿದ ಪಾದಯಾತ್ರಿಗಳು ವಿವಿಧ ಗ್ರಾಮಗಳಲ್ಲಿ ಬಹಿರಂಗ ಸಭೆಗಳನ್ನು ನಡೆಸಿ ನೀರಿನ ಮಹತ್ವ ಮತ್ತು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮಸ್ತಾನನಾಯಕ ಹಾಗೂ ಇತರರು ಪಾಲ್ಗೊಂಡಿದ್ದರು.