ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ೭ನೇ ಕರಡು ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸದೆ ಅದರ ಬಗ್ಗೆ ಮೌನವಹಿಸಿರುವ ಸಂಸದರ ಧೋರಣೆ ಖಂಡಿಸಿ ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಸಂಸದ ಬಿ.ವೈ.ರಾಘವೇಂದ್ರ ಅವರ ಮನೆ ಎದುರು ಸೆ. ೧ರಂದು ಬೆಳಿಗ್ಗೆ ೧೧ರಿಂದ ಅನಿರ್ದಿಷ್ಟಾವಧಿ ಏಕಾಂಗಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಸಂಯುಕ್ತ ರೈತ ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ತಿಳಿಸಿದ್ದಾರೆ.

ಸಾಗರ: ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ೭ನೇ ಕರಡು ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸದೆ ಅದರ ಬಗ್ಗೆ ಮೌನವಹಿಸಿರುವ ಸಂಸದರ ಧೋರಣೆ ಖಂಡಿಸಿ ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಸಂಸದ ಬಿ.ವೈ.ರಾಘವೇಂದ್ರ ಅವರ ಮನೆ ಎದುರು ಸೆ. ೧ರಂದು ಬೆಳಿಗ್ಗೆ ೧೧ರಿಂದ ಅನಿರ್ದಿಷ್ಟಾವಧಿ ಏಕಾಂಗಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಸಂಯುಕ್ತ ರೈತ ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಿ ವಿರುದ್ಧ ಲೋಕಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.ಪ್ರಸ್ತುತ ಮಲೆನಾಡು ಭಾಗದ ಜನರು ಅಭಯಾರಣ್ಯ, ಕಾಡು, ಕುಮ್ಕಿ, ಪರಿಭಾವಿತ ಅರಣ್ಯ ಇನ್ನಿತ್ಯಾದಿಯಿಂದ ರೋಸಿ ಹೋಗಿದ್ದಾರೆ. ಇದೀಗ ಕಸ್ತೂರಿರಂಗನ್ ವರದಿ ಅನುಷ್ಠಾನದ ಹೆಸರಿನಲ್ಲಿ ಮಲೆನಾಡು ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೇಂದ್ರದ ಪ್ರಯತ್ನವನ್ನು ರೈತ ಸಂಘ ಖಂಡಿಸುತ್ತದೆ. ವರದಿ ಜಾರಿಗೆ ಬಂದರೆ ಹಳ್ಳಿಭಾಗಗಳ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಳ್ಳುತ್ತದೆ. ಈತನಕ ಸಂಸದ ಬಿ.ವೈ.ರಾಘವೇಂದ್ರ ಮಲೆನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಕೇಂದ್ರದ ಗಮನ ಸೆಳೆದಿಲ್ಲ. ಮಲೆನಾಡು ಭಾಗದಿಂದ ಗೆದ್ದು, ಮಲೆನಾಡು ಭಾಗದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಸಂಸದರ ಧೋರಣೆ ಖಂಡಿಸಿ ಈ ಪ್ರತಿಭಟನೆ ಎಂದು ಹೇಳಿದರು.