ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಪ್ರತಿಷ್ಠಿತ ದಿ ಮೈಸೂರು ಕೋ- ಆಪರೇಟಿವ್ ಬ್ಯಾಂಕ್ ನ 2025-30ನೇ ಸಾಲಿಗೆ ನೂತನ ನಿರ್ದೇಶಕರಾಗಿ 12 ಮಂದಿ ಆಯ್ಕೆಯಾಗಿದ್ದಾರೆ.ಈ ಬಾರಿ ಚುನಾವಣೆಯಲ್ಲಿ ಹಳಬರ ಜತೆ ಹೊಸ ಮುಖಗಳಿಗೂ ಆದ್ಯತೆ ನೀಡಲಾಗಿದೆ. ನಗರದ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಪ್ರಮೋದ ಕಲ್ಯಾಣ ಮಂಟಪದಲ್ಲಿ (ಶ್ರೀ ಆಂಜನೇಯ ದೇವಸ್ಥಾನ)ದಲ್ಲಿ ನಡೆಯಿತು. ಜ. 19ರಂದು ಮತದಾನ ಪ್ರಕ್ರಿಯೆ ನಡೆದಿತ್ತು. ಸಾಮಾನ್ಯವಾಗಿ ಮತದಾನ ನಡೆದ ದಿನವೇ ಮತ ಎಣಿಕೆ ನಡೆಯುವುದು ವಾಡಿಕೆ. ಆದರೆ, ಹೈಕೋರ್ಟ್ ಆದೇಶ ಮೇರೆಗೆ ಇಂದು ಮತ ಎಣಿಕೆ ನಡೆಯಿತು.ಮತದಾನಕ್ಕೆ ತಮ್ಮನ್ನು ಅನರ್ಹಗೊಳಿಸಿದ್ದರ ವಿರುದ್ಧ ಬ್ಯಾಂಕ್ ನ ಕೆಲ ಸದಸ್ಯರು ಹೈ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಇವರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಿ ಮುಂದಿನ ಆದೇಶದವರೆಗೆ ಫಲಿತಾಂಶ ಪ್ರಕಟಿಸದಂತೆ ಮಧ್ಯಂತರ ಆದೇಶ ನೀಡಿತ್ತು. ಈಗ ಎಲ್ಲ ಮತಗಳನ್ನು ಎಣಿಕೆ ಮಾಡಿದ ಬಳಿಕ ಕೋರ್ಟ್ ನಿರ್ದೇಶನದಂತೆ ಫಲಿತಾಂಶ ಪ್ರಕಟಿಸಲಾಗಿದೆ.ಒಟ್ಟು 13 ನಿರ್ದೇಶಕರ ಸ್ಥಾನಗಳಲ್ಲಿ ಟಿ. ರವಿ ಹಿಂದುಳಿದ ವರ್ಗಗಳ ಪ್ರವರ್ಗ-ಬಿ ವಿಭಾಗದಿಂದ ಅವಿರೋಧ ಆಯ್ಕೆಯಾಗಿದ್ದರು. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆ. ಯೋಗೇಶ್ (4647), ಎಸ್.ಬಿ.ಎಂ. ಮಂಜು (4751), ಎನ್. ಯೋಗಾನಂದ (3769), ಜಿ. ನಿರಂಜನ್ (3742), ಎಚ್. ಹರೀಶ್ ಕುಮಾರ್ (3579), ಆರ್. ರವಿಕುಮಾರ್ (3052), ಪರಿಶಿಷ್ಟ ಜಾತಿಯಿಂದ ಸ್ಪರ್ಧಿಸಿದ್ದ ಕೆ. ಗಿರೀಶ್ (2751), ಪ.ಪಂಗಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂ. ರಾಮಕೃಷ್ಣ (2679), ಹಿಂದುಳಿದ ವರ್ಗ ಪ್ರವರ್ಗ- ಎ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿ. ಚಂದ್ರಶೇಖರ (3982), ಮಹಿಳಾ ಮೀಸಲು ಕ್ಷೇತ್ರದಿಂದ ಪಿ. ರಾಜೇಶ್ವರಿ (3451), ಎಂ. ಪ್ರಮೀಳಾ (2576) ಮತಗಳನ್ನು ಪಡೆದು ಜಯಭೇರಿ ಬಾರಿಸಿದರು.