ಇತಿಹಾಸದ ಅಧಿಕೃತ ಮೂಲದಲ್ಲೇ ಮಾಹಿತಿ ಸಮಸ್ಯೆ ಇದೆ

| Published : Oct 26 2024, 12:57 AM IST

ಸಾರಾಂಶ

ಇತಿಹಾಸವನ್ನು ಸರಿಪಡಿಸುವ ಪ್ರಯತ್ನ ಬಹಳ ಕಷ್ಟ. ತಪ್ಪುಗಳನ್ನು ಸರಿಪಡಿಸದಿದ್ದರೆ ಮುಂದಿನ ಪೀಳಿಗೆಗೂ ಕಷ್ಟವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರುಇತಿಹಾಸ ಅಧಿಕೃತ ಮೂಲದಲ್ಲಿಯೇ ಮಾಹಿತಿ ಸಮಸ್ಯೆಯಿದೆ. ನಿಜವಾದ ಅಂಶಗಳನ್ನು ನಾವು ಆಯ್ಕೆ ಮಾಡಿಕೊಂಡು, ಸಂಪೂರ್ಣ ಸತ್ಯ ತಿಳಿಯಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು. ನಗರದ ಕಿರುರಂಗಮಂದಿರದಲ್ಲಿ ಶುಕ್ರವಾರ ನಡೆದ ಅಯೋಧ್ಯ ಪಬ್ಲಿಕೇಷನ್ ಪ್ರಕಟಿಸಿರುವ, ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚಿತ ‘ಸತ್ಯವನ್ನೆ ಹೇಳುತ್ತಿದ್ದೇನೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತಿಹಾಸವನ್ನು ಸರಿಪಡಿಸುವ ಪ್ರಯತ್ನ ಬಹಳ ಕಷ್ಟ. ತಪ್ಪುಗಳನ್ನು ಸರಿಪಡಿಸದಿದ್ದರೆ ಮುಂದಿನ ಪೀಳಿಗೆಗೂ ಕಷ್ಟವಾಗುತ್ತದೆ. ಆದ್ದರಿಂದ ನೈಜ ಇತಿಹಾಸ ತಿಳಿಸುವ ಕೆಲಸ ಮಾಡಬೇಕು. ಅರ್ಧ ಸತ್ಯಗಳನ್ನು ಪೂರ್ಣಗೊಳಿಸಬೇಕು. ವಿಕಸಿತ ಭಾರತ, ಶ್ರೇಷ್ಠ ಭಾರತದ ಪರಿಕಲ್ಪನೆಯನ್ನು ಜಾರಿಗೆ ತರಬೇಕು. ಆ ಮೂಲಕ ಮೈಸೂರು ಸುವರ್ಣ ಯುಗ ಸ್ಥಾಪಿಸಬೇಕು ಎಂದು ಅವರು ಹೇಳಿದರು.ಇದುವರೆಗೆ ದೇಶದ ಇತಿಹಾಸದಲ್ಲಿ ಅರ್ಧ ಸತ್ಯ ಮಾತ್ರ ತಿಳಿದಿದೆ. ಹೀಗಾಗಿ ಪೂರ್ಣ ಸತ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಒಂದೇ ದೃಷ್ಟಿಕೋನದ ವ್ಯಕ್ತಿಗಳು ರಚಿಸಿರುವ ಪಠ್ಯಪುಸ್ತಕಗಳನ್ನೇ ನಾವೆಲ್ಲರೂ ಬಾಲ್ಯದಿಂದಲೂ ಓದಿಕೊಂಡು ಬಂದಿದ್ದೇವೆ. ಆಗ ಇದ್ದವರು ತಮಗೆ ಬೇಕಾದವರಿಂದಲೇ ಪಠ್ಯರಚನೆ ಮಾಡಿಸಿದ್ದಾರೆ. ಇದರಲ್ಲಿಯೂ ಇರುವುದು ಅರ್ಧ ಸತ್ಯ ಮಾತ್ರ. ಹೀಗಾಗಿ ಕಳೆದ ಹದಿನೈದು ವರ್ಷಗಳಿಂದ ಭಾರತದ ನೈಜ ಇತಿಹಾಸವನ್ನು ಪರಿಚಯಿಸಲಾಗುತ್ತಿದೆ ಎಂದರು. ದೇಶದ ಸಮಗ್ರ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕಾದರೆ ಆರ್.ಸಿ.ಮಜುಂದಾರ್ ಶಾ ಅವರ ಪುಸ್ತಕವನ್ನು ಓದಬೇಕು. ಭಾರತೀಯ ವಿದ್ಯಾ ಭವನದಲ್ಲಿ 16 ಸಂಪುಟಗಳ ಮೂಲಕ ಹೊರ ತಂದಿದ್ದಾರೆ. ಇದು ಯಾರಿಗೂ ಗೊತ್ತಿಲ್ಲ. ನಮ್ಮ ತಾತನ ಗ್ರಂಥಾಲಯದಲ್ಲಿದ್ದ ಎರಡು ಸಂಪುಟ ಓದಿ ತಿಳಿದುಕೊಂಡಿದ್ದೇನೆ. ಪ್ರತಿಯೊಬ್ಬರು ಇದನ್ನು ಓದಬೇಕು ಎಂದು ತಿಳಿಸಿದರು. ಈಗೀನ ನಮಗೆ ಪರಿಚಯವಿರುವ ಸ್ವಾತಂತ್ರ್ಯ ಹೋರಾಗಾರರು ಮಾತ್ರ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿಲ್ಲ. ಅನೇಕ ಸಮುದಾಯಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿವೆ. ನಾಟಕಗಳ ಮೂಲಕ ಅಡ್ಡಂಡ ಕಾರ್ಯಪ್ಪ ಅರ್ಧಸತ್ಯದ ಇತಿಹಾಸವನ್ನು ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಜವಾಬ್ದಾರಿ ನಮ್ಮ ಮೇಲಿಯೂ ಇದೆ ಎಂದು ಹೇಳಿದರು. ನಟ ಪ್ರಕಾಶ್ ಬೆಳವಾಡಿ ಮಾತನಾಡಿ, ಸತ್ಯವನ್ನೆ ಹೇಳುತ್ತೇನೆ ಪುಸ್ತಕವನ್ನು 10 ಪುಟಗಳನ್ನು ಓದುವರಷ್ಟೆಲ್ಲಿಯೇ ಇದೊಂದು ಅಪಾಯಕಾರಿ ಪುಸ್ತಕ, ನಿಷೇಧ ಮಾಡುವ ಸಾಧ್ಯತೆಯೂ ಇದೆ ಅನಿಸುತ್ತಿದೆ. ಆದರೆ, ಪುಸ್ತಕಗಳನ್ನು ಪೂರ್ಣವಾಗಿ ಓದಿದರೆ ವಿಚಾರ ಗಟ್ಟಿಯಾಗಿದೆ ಅನಿಸಲಿದೆ ಎಂದರು. ಆರ್ಎಸ್ಎಸ್ ಗುರುತಿಸಿಕೊಂಡಿರುವುದರಿಂದ ಪುಸ್ತಕಕ್ಕೆ ದೊಡ್ಡ ಮಟ್ಟದಲ್ಲಿ ವಿರೋಧವೂ ವ್ಯಕ್ತವಾಗಬಹುದು. ಆದರೆ, ಅದನ್ನು ಕಾರ್ಯಪ್ಪ ಸ್ವಾಗತಿಸುತ್ತಾರೆ. ವಿರೋಧ ಬರುತ್ತದೆ ಎಂದೆನಿಸಿದಾಗ ಪರ-ವಿರೋಧ ಚರ್ಚೆ ಆಗಲು ಬಿಡಬೇಕು. ಸಂವಾದ ಏರ್ಪಡಿಸಿ ವಿರೋಧ ಮಾಡುವವರನ್ನು ವೇದಿಕೆಗೆ ಕೂರಿಸಬೇಕು ಎಂದು ಹೇಳಿದರು. ಲೇಖಕ ಅಡ್ಡಂಡ ಕಾರ್ಯಪ್ಪ, ಆದಿತ್ಯ ಅಧಿಕಾರಿ ಆಸ್ಪತ್ರೆಯ ಡಾ. ಚಂದ್ರಶೇಖರ್, ಶಾಸಕ ಟಿ.ಎಸ್. ಶ್ರೀವತ್ಸ, ಅನಿತಾ ಕಾರ್ಯಪ್ಪ, ಪುನೀತ್ ಕೆರೆಹಳ್ಳಿ, ಆರ್ಎಸ್ಎಸ್ ಅನಂತ ಕೃಷ್ಣ, ಅಕ್ಷಯ ರಾಜೇಂದ್ರ ಇದ್ದರು.