ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ನೂರೈವತ್ತು ವರ್ಷಗಳ ಇತಿಹಾಸ ಹೊಂದಿರುವ ಸವದತ್ತಿ ಯಲ್ಲಮ್ಮಾ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹರ್ಷ ವ್ಯಕ್ತಪಡಿಸಿದರು.ಯಲ್ಲಮ್ಮಾ ಪುರಸಭೆಯ ಆವರಣದಲ್ಲಿ ಸವದತ್ತಿ ಯಲ್ಲಮ್ಮಾ ಪುರಸಭೆಯು ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ನಗರಸಭೆಯಾಗಿ ನಿರ್ಣಯಿಸಿ ಮೇಲ್ದರ್ಜೆಗೇರಿಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ನಮ್ಮ ಪುರಸಭೆಯು ನಗರಸಭೆಯಾಗಿ ಅನುಮೋದನೆಗೊಂಡಿದೆ. ಪಟ್ಟಣದ ಅಭಿವೃದ್ದಿಗೆ ಇನ್ನಷ್ಟು ಇಂಬು ನೀಡಿದಂತಾಗಿದೆ. ಸಚಿವ ಸಂಪುಟದ ನಿರ್ಣಯವು ಇಂದು ನಮ್ಮ ಹೋರಾಟಕ್ಕೆ ನೀಡಿದ ಗೆಲುವಾಗಿದ್ದು, ಬರುವ ದಿನಗಳಲ್ಲಿ ಪಟ್ಟಣವನ್ನು ಉನ್ನತ ಅಭಿವೃದ್ಧಿಯತ್ತ ಕೊಂಡೊಯ್ಯುವುದರ ಜೊತೆಗೆ ಸಾರ್ವಜನಿಕರಿಗೆ ಅತ್ಯವಶ್ಯಕ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಹಾಗೂ ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ ಮಾತನಾಡಿ, ಜಗನ್ಮಾತೆ ಯಲ್ಲಮ್ಮಾ ದೇವಿಯ ಹೆಸರಿನಲ್ಲಿರುವ ಸವದತ್ತಿ ಪುರಸಭೆಯು ಇಂದು ಕರ್ನಾಟಕ ಪೌರಸಭೆಗಳ ಕಾಯ್ದೆ ೧೯೬೪ರ ಕಲಂ-೩,೯ ಮತ್ತು ೩೬೧ರನ್ವಯ ಶೆಡ್ಯೂಲ್-ಎ ನಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ ನಲ್ಲಿ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಹಾಲಿ ಸವದತ್ತಿ ಯಲ್ಲಮ್ಮಾ ಪುರಸಭೆಯನ್ನು ಸವದತ್ತಿ ಯಲ್ಲಮ್ಮಾ ನಗರಸಭೆ ಎಂದು ಉದ್ಘೋಷಿಸಲು ಸಚಿವ ಸಂಪುಟ ನಿರ್ಣಯಿಸಿರುವುದು ಎಲ್ಲರಿಗೂ ಖುಷಿ ತಂದಿದೆ ಎಂದರು. ನಗರ ಸಭೆಯಾಗಲು ನಿರಂತರ ಪ್ರಯತ್ನ ಮಾಡಿರುವ ಶಾಸಕರಾದ ವಿಶ್ವಾಸ ವೈದ್ಯರವರಿಗೆ ಈ ಕೀರ್ತಿ ಸಲ್ಲುತ್ತದೆ ಎಂದರು.ನಗರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿಯವರು ಪುರಸಭೆಯ ಕಟ್ಟಡಕ್ಕೆ ವಿದ್ಯುತ್ ದ್ವೀಪದ ಅಲಂಕಾರದೊಂದಿಗೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು. ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ತಾ.ಪಂ ಇಓ ಆನಂದ ಬಡಕುಂದರಿ, ಶಿವಾನಂದ ಹೂಗಾರ, ಶಿವಾನಂದ ಪಟ್ಟಣಶೆಟ್ಟಿ, ಬಿ.ಎನ್.ಪ್ರಭುನವರ, ಬಾಪುಸಾಬ ಚೂರಿಖಾನ, ಅಶ್ವತ ವೈದ್ಯ, ಅರ್ಜುನ ಅಮ್ಮೋಜಿ, ನಿಂಗಪ್ಪ ಬೆಟಸೂರ, ವಿರೇಶ ಬ್ಯಾಹಟ್ಟಿ, ಮಲ್ಲು ಜಕಾತಿ, ಮಂಜು ಪಾಚಂಗಿ, ಸುನೀಲ ಮೋಟೇಕರ, ಮೌಲಾಸಾಬ ತಬ್ಬಲಜಿ ಬಸವರಾಜ ಅರಮನಿ, ಜಗದೀಶ ಶಿರಸಂಗಿ, ಪ್ರವೀಣ ರಾಮಪ್ಪನವರ, ಸುನೀಲ ತಾರಿಹಾಳ, ಸುಭಾಸ ಪಾಟೀಲ, ಶಂಕರ ದಂಡಿನ, ಎಸ್.ವೈ.ಹಾದಿಮನಿ, ವಾಡಕರ, ಬಿ.ಎಸ್.ಆನಿ, ಚಂದ್ರಶೇಖರ ಮಲಕ್ಕನವರ ಇತರರು ಉಪಸ್ಥಿತರಿದ್ದರು.