ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಾತಿ, ಜಾತಿಗಳನ್ನು ಒಡೆಯಲು, ಜಾತಿಗಳನ್ನು ಬಳಸುವವರು ಬಿಜೆಪಿಗರು. ಹೀಗಾಗಿ ಮಾಜಿ ಸಿಎಂ ಯಡಿಯೂರಪ್ಪರ ನಾಯಕತ್ವ ಒಡೆಯಲು ಸವದಿ, ಸೋಮಣ್ಣ, ಈಶ್ವರಪ್ಪ ಅವರನ್ನು ಬಳಸಲಾಗಿದೆ. ಸಮಾಜ ಒಡೆಯುವ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ತೇಜಸ್ವಿನಿಗೌಡ ಆರೋಪಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಒಗ್ಗೂಡಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ದೇಶದ ಜನತೆ ಅರಿತುಕೊಳ್ಳಬೇಕಿದೆ ಎಂದು ತಿಳಿಸಿದರು.
ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಪಂಚಾಯತ್ ರಾಜ್ಯ ಮೀಸಲಾತಿ ಜಾರಿಗೆ ತಂದ ಬಳಿಕ ಎಲ್ಲ ಸಮುದಾಯದ ಜನರು ರಾಜಕೀಯಕ್ಕೆ ಬರಲು ಅನುಕೂಲವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ದೇಶದ ರಕ್ಷಣೆಗೆ ಶ್ರಮಿಸಿದ ಕಾಂಗ್ರೆಸ್‌ಗೆ ಪಾಠ ಹೇಳುವ ಅಗತ್ಯ ಬಿಜೆಪಿಗಿಲ್ಲ. ಕಳೆದ 10 ವರ್ಷದಲ್ಲಿ ದೇಶದ ಸ್ಥಿತಿ ಏನಾಗಿದೆ ಎಂಬುವುದು ದೇಶದ ಜನತೆಗೆ ಅರಿವಾಗಿದೆ. ಕಾರ್ಗಿಲ್ ಯುದ್ಧ ಸಂಭವಿಸಿದಾಗ ಬಿಜೆಪಿ ಎಲ್ಲಿತ್ತು ಎಂದು ಪ್ರಶ್ನಿಸಿದರು.ಬಿಜೆಪಿ ಮೋದಿ ಗ್ಯಾರಂಟಿ ಬಿಟ್ಟು ಈಗ ಹಿಂದುತ್ವದ ಹಾಗೂ ಹಿಂದಿನ ಹಿಡನ್ ಅಜೆಂಡಾ ಇಟ್ಟುಕೊಂಡು ಮೋದಿ ಪ್ರಚಾರ ನಡೆಸಿದ್ದಾರೆ. ಮೋದಿ ಹೆಸರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಬದಲಾವಣೆ ಮಾಡಿದ್ದು ಏಕೆ? ಇದು ಭಯ ಅಲ್ಲವೆ ಎಂದು ವ್ಯಂಗ್ಯವಾಡಿದರು.
ಮಹಿಳೆಯವರ ಜತೆ ಅಶ್ಲೀಲವಾಗಿ ನಡೆದುಕೊಳ್ಳುವ ದುಸ್ಥಿತಿವಿರುವ ಪಕ್ಷದ ಜತೆ ಬಿಜೆಪಿಗರು ಹೇಗೆ ಇರುತ್ತಾರೆ? ಇದರಿಂದ ರಾಜ್ಯದ ಮಾನ ಮರ್ಯಾದೆ ಹಾಳಾಗಿದೆ. ಹೆಣ್ಣು ಮಕ್ಕಳಿಗೆ ಯಾವ ರೀತಿ ಗೌರವ ನೀಡಬೇಕು ಎಂಬ ಪರಿಜ್ಞಾನ ಇಲ್ಲವಾ ನಿಮಗೆ? ತಂದೆಯವರು ಇದನ್ನೇ ಕಲಿಸಿಕೊಟ್ಟಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಿಡಿಗೇಡಿಗಳಿಂದ ಸಂಸತ್ತಿನಲ್ಲಿ ಸಂಸದರ ಮೇಲೆ ಹಲ್ಲೆಯಾಗಿದೆ. ಇಲ್ಲಿವರೆಗೂ ಕೇಂದ್ರ ಸರ್ಕಾರ ಯಾವುದೇ ತನಿಖೆ ನಡೆಸಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರ ಅವಧಿಯಲ್ಲಾಗಿದ್ದರೇ ಬಿಜೆಪಿಗರು ಮುಗಿ ಬೀಳುತ್ತಿದ್ದರು. ಏಕೆ ಈ ತರಹ ಮನಸ್ಥಿತಿ ನಿಮ್ಮದು?. ತಪ್ಪು ಮಾಡಿದವರನ್ನು ಇನ್ನುಳಿದ ಸಂಸದರನ್ನು ಅಮಾನತು ಮಾಡಿದೆ. ಪ್ರಜಾಪ್ರಭುತ್ವವನ್ನು ಕಟ್ಟಿಹಾಕಲು ನಾವು ಬಿಡುವುದಿಲ್ಲ ಎಂದು ಗುಡುಗಿದರು.
ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಬರ ಪರಿಹಾರ ಕೊಡುವಂತೆ ಕಳೆದ ಡಿಸೆಂಬರ್‌ನಲ್ಲಿ ₹18 ಸಾವಿರ ಕೋಟಿ ಪರಿಹಾರ ಕೊಡಬೇಕೆಂದು ಮನವಿ ಮಾಡಿದರೂ ಕೇಂದ್ರ ಈಗ ಸ್ವಲ್ಪ ಕೊಟ್ಟಿದೆ ಎಂದು ದೂರಿದರು.ನೀರಾವರಿ ಯೋಜನೆಯಾದ ಮೇಕೆದಾಟು ವಿಚಾರದಲ್ಲಿ ಕರ್ನಾಟಕವನ್ನು ನಿರ್ಲಕ್ಷಿಸಿದ ಬಿಜೆಪಿ ಮುಖಂಡ ಅಣ್ಣಾಮಲೈಗೆ ರಾಜ್ಯದ ಮೇಲೆ ಯಾವ ಹಕ್ಕಿದೆ? ಕಾವೇರಿ ನೀರಿನ ವಿಚಾರ, ಮೇಕೆದಾಟು ಯೋಜನೆ ಪ್ರತಿಭಟನೆಯಲ್ಲಿ ರಾಜ್ಯದ ನೀತಿ ಖಂಡಿಸಿದ ಬಿಜೆಪಿ ಮುಖಂಡ ಅಣ್ಣಾಮಲೈಗೆ ಇಲ್ಲಿನ ಬಿಜೆಪಿ ಚುನಾವಣೆ ಹೊಣೆ ಹೊರಿಸಲಾಗಿದೆ. ಬಿಜೆಪಿಗೆ ಸ್ವಲ್ವವಾದರೂ ಬುದ್ಧಿ ಬೇಡವಾ? ಯಾವ ಹಕ್ಕಿದೇ ಅಣ್ಣಾಮಲೈಗೆ ಇದು ನಮ್ಮ ನೇರ ಪ್ರಶ್ನೆ ಎಂದು ಕಿಡಿಕಾರಿದರು.
ಬೆಳಗಾವಿ ಎರಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಶಾಲಿಯಾಗಲಿದೆ. ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತದಾರರು ಬಹುಮತ ಅಂತರದಿಂದ ಗೆಲ್ಲಿಸಲು ಸಹಾಯ, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಗೋಷ್ಠಿಯಲ್ಲಿ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಇದ್ದರು.
-------ಕೋಟ್..
ಕಿತ್ತೂರು ಚನ್ನಮ್ಮ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾರೆ. ಆದರೆ, ಸಂಸತ್ತಿನಲ್ಲಿ ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಯುಪಿಎ ಸರ್ಕಾರ. ಬರೆದುಕೊಟ್ಟ ಭಾಷಣ ಮಾಡುವುದು ಸರಿಯಲ್ಲ. ಪ್ರಧಾನಿ ಮೋದಿ ಮುಖವಾಡ ಕಳಚಿದೆ.-ತೇಜಸ್ವಿನಿಗೌಡ, ವಿಧಾನ ಪರಿಷತ್ತಿನ ಮಾಜಿ ಸದಸ್ಯೆ.