ಸಾರಾಂಶ
ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಸವಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ರೋಣ: ಪಟ್ಟಣದಿಂದ ಸವಡಿ ಸಮರ್ಪಕ ಬಸ್ ಸೌಲಭ್ಯವಿಲ್ಲದಿರುವುದರಿಂದ ಶಾಲಾ-ಕಾಲೇಜಗಳಿಗೆ ನಿಗದಿತ ಸಮಯಕ್ಕೆ ಹೋಗಿ ಬರಲು ಆಗುತ್ತಿಲ್ಲ. ಇದರಿಂದಾಗಿ ಬೇಸತ್ತ ಗ್ರಾಮದ ವಿದ್ಯಾರ್ಥಿಗಳು ಸೋಮವಾರ ಪಟ್ಟಣದ ನಿಲ್ದಾಣದಲ್ಲಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಸವಡಿ ಗ್ರಾಮಕ್ಕೆ ಈ ಮೊದಲು ಮಧ್ಯಾಹ್ನ 3 ಗಂಟೆಗೆ ಬಸ್ ಬಿಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬಸ್ ಬಿಡದಿರುವುದರಿಂದ ಸವಡಿ ಗ್ರಾಮದಿಂದ ರೋಣ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಊರು ತಲುಪಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆ, ಮಧ್ಯಾಹ್ನ ನಿಗದಿತ ಸಮಯಕ್ಕೆ ಬಸ್ ಸಂಚರಿಸುತ್ತಿಲ್ಲ. ಈ ಕುರಿತು ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಸಾಕಷ್ಟು ವಿನಂತಿಸಿದರೂ ಸ್ಪಂದಿಸಿಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿ ತಿಳಿಯುತ್ತಿದಂತೆ ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ಕೆಎಸ್ಆರ್‌ಟಿಸಿ ಸಿಬ್ಬಂದಿ, ತಾಂತ್ರಿಕ ತೊಂದರೆಯಿಂದ ಬಸ್ ವಿಳಂಬವಾಗಿದ್ದು, ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಲಾಗುವುದು. ಈ ಕುರಿತು ವ್ಯವಸ್ಥಾಪಕರ ಗಮನಕ್ಕೂ ತರಲಾಗುವುದು ಎಂದು ಭರವಸೆ ನೀಡಿ, ತಕ್ಷಣವೇ ಗ್ರಾಮಕ್ಕೆ ಎರಡು ಬಸ್‌ಗಳ ವ್ಯವಸ್ಥೆ ಮಾಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದರು. ಪ್ರತಿಭಟನೆಯಲ್ಲಿ ಸವಡಿ ಗ್ರಾಮದ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.