ಶಿವರಾಜ ಯಲವಿಗಿಕನ್ನಡಪ್ರಭ ವಾರ್ತೆ ಸವಣೂರುಕಳೆದ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬಿತ್ತಿ ಬೆಲೆ ಕುಸಿತದಿಂದ ಕೈಸುಟ್ಟುಕೊಂಡಿದ್ದ ತಾಲೂಕಿನ ರೈತರು ಈ ಬಾರಿ ಮೆಕ್ಕೆಜೋಳದ ಬದಲು ಬಹುಬೆಳೆ ಪದ್ಧತಿ ಅನುಸರಿಸುತ್ತಿದ್ದಾರೆ.
ತಾಲೂಕು 48 ಸಾವಿರ ಹೆಕ್ಟೇರ್ ಕೃಷಿ ಭೂಮಿಯನ್ನು ಹೊಂದಿದ್ದು, ಅದರಲ್ಲಿ 44 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ಶೇ. 10ರಿಂದ 15 ಬಿತ್ತನೆಯಾಗಿದ್ದು, ಮುಂದಿನ ಒಂದು ವಾರದಲ್ಲಿ ತಾಲೂಕಿನಲ್ಲಿ ಸಂಪೂರ್ಣವಾಗಿ ಬಿತ್ತನೆ ಕಾರ್ಯ ಮುಗಿಸಲು ಕೃಷಿ ಕಾಯದಲ್ಲಿ ನಿರತರಾಗಿದ್ದಾರೆ.ಗೋವಿನ ಜೋಳ ಬಿತ್ತನೆ ಕುಂಠಿತ:ಪ್ರಸಕ್ತ ಸಾಲಿನಲ್ಲಿ ಶೇಂಗಾ, ಸೋಯಾಬೀನ್ ಶೇ. 20ರಿಂದ 30ರಷ್ಟು ಬಿತ್ತನೆ ಮಾಡಲಾಗಿದೆ. ಗೋವಿನಜೋಳ ಶೇ. 15ರಷ್ಟು ಬಿತ್ತನೆ ಮಾಡಲಾಗಿದೆ. ಪ್ರಸಕ್ತ ವರ್ಷ ಗೋವಿನಜೋಳ ಬಿತ್ತನೆಗೆ ಇನ್ನೂ ಶೇ. 5ರಷ್ಟು ಬಿತ್ತನೆ ಮಾಡಬಹುದಾಗಿದೆ. ಕ್ಷೇತ್ರದಲ್ಲಿ 5ರಷ್ಟು ಹತ್ತಿ ಉಳಿದಂತೆ ದವಸ-ಧಾನ್ಯಗಳನ್ನು ಮಿಶ್ರ ಬೆಳೆಯನ್ನಾಗಿ ತೊಗರಿ, ಹೆಸರು ಕಾಳು, ಅಲಸಂದೆ ಬೆಳೆಗಳ ಬಿತ್ತನೆಗೆ ರೈತರು ಮುಂದಾಗಿದ್ದಾರೆ.
ವಾಡಿಕೆ ಮಳೆ: ಪ್ರಸಕ್ತ ಸಾಲಿನಲ್ಲಿ 169 ಮಿಮೀ ವಾಡಿಕೆ ಮಳೆ ಇತ್ತು. ಆದರೆ, ಜೂನ್ 11ರ ವರೆಗೆ ರೈತರ ಅವಶ್ಯಕತೆಗೆ ತಕ್ಕಂತೆ ತಾಲೂಕಿನಲ್ಲಿ 137 ಮಿಮೀ ಮಳೆಯಾಗಿದ್ದು, ಭೂಮಿಯ ತೇವಾಂಶದ ಮೇಲೆ ನಿಗಾವಹಿಸಿ ರೈತರು ಬಿತ್ತನೆಗೆ ಮುಂದಾಗಿದ್ದಾರೆ.ತಾಲೂಕಿನಲ್ಲಿ 300 ಹೆಕ್ಟೇರ್‌ಗಿಂತಲೂ ಕಡಿಮೆ ಪ್ರಮಾಣದಲ್ಲಿ ಸಾವಯವ ಕೃಷಿ ಅವಲಂಬಿತವಾಗಿದ್ದು, ತಂತ್ರಜ್ಞಾನ ಹೆಚ್ಚಾದಂತೆ ಕೃಷಿ ಕ್ಷೇತ್ರದಲ್ಲಿಯೂ ಸಾವಯವ ಕೃಷಿ ಪದ್ಧತಿಯಿಂದ ರೈತರು ದೂರ ಉಳಿದು ರಾಸಾಯನಿಕ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿ ಇಳುವರಿಯ ಪ್ರಮಾಣವೂ ಕುಂಠಿತವಾಗುತ್ತಿದೆ. ಇದರಿಂದ, ರೈತರು ಸಮೃದ್ಧವಾಗಿ ಫಸಲನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಬೆಳೆಯನ್ನು ಬೆಳೆಯಲು ರೈತರು ಮುಂದಾಗಬೇಕು ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.ಡಿಎಪಿ ಕೊರತೆ: ಮುಂಗಾರು ಬಿತ್ತನೆಗೆ ಅವಶ್ಯವಿರುವ ಡಿಎಪಿ ಗೊಬ್ಬರ ಸಿಗದೆ ರೈತರು ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ತಾಲೂಕಿಗೆ ಒಟ್ಟು 2591 ಮೆಟ್ರಿಕ್ ಟನ್ ಡಿಎಪಿ ಬೇಡಿಕೆ ಇದ್ದು, ಇದುವರೆಗೂ 1425 ಮೆಟ್ರಿಕ್ ಟನ್ ರೈತರಿಗೆ ನೀಡಲಾಗಿದೆ. ಇನ್ನೂ ಅವಶ್ಯವಿರುವ 1125 ಮೆಟ್ರಿಕ್ ಟನ್ ಉಳಿದ ಗೊಬ್ಬರ ಬರುವ ನಿರೀಕ್ಷೆ ಇದೆ. ಯೂರಿಯಾ 5475 ಮೆಟ್ರಿಕ್ ಟನ್ ಬೇಡಿಕೆ ಇದೆ. 2346 ಮೆಟ್ರಿಕ್ ಟನ್ ಪೂರೈಕೆಯಾಗಿದ್ದು, ಅದರಲ್ಲಿ ಈಗಾಗಲೇ ರೈತರಿಗೆ 1283 ಮೆಟ್ರಿಕ್ ಟನ್ ಮಾರಾಟ ಮಾಡಲಾಗಿದೆ. ಉಳಿದ ಗೊಬ್ಬರವನ್ನು ಹವಾಮಾನ ಆಧಾರಿತವಾಗಿ ಪೂರೈಕೆ ಮಾಡಲಾಗುವುದು. ಡಿಎಪಿ ಬದಲಾಗಿ ಪೂರಕ ಗೊಬ್ಬರಗಳ ಬಳಕೆ ಮಾಡಲು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿತ್ತನೆ ಬೀಜ ದಾಸ್ತಾನು: ತಾಲೂಕಿನಲ್ಲಿ ರೈತರ ಅನುಕೂಲಕ್ಕಾಗಿ 6 ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಮೆಕ್ಕೆಜೋಳ, ಹೆಸರು, ಸೋಯಾಬಿನ್, ಶೇಂಗಾ, ತೊಗರಿ ಸೇರಿ ಅವಶ್ಯವಿರುವ 1762 ಕ್ವಿಂಟಲ್ ಬಿತ್ತನೆ ಬೀಜ ಮಾರಾಟ ಮಾಡಲಾಗಿದೆ. ಏಕ ಬೆಳೆಗಿಂತ ಮಿಶ್ರ ಬೆಳೆ ಅಥವಾ ಅಂತರ ಬೆಳೆಯನ್ನು ಬೆಳೆಯಲು ರೈತರು ಮುಂದಾಗಬೇಕು. ಯೂರಿಯಾ ಒಂದೇ ರಸಗೊಬ್ಬರ ಬಳಸುವುದಕ್ಕಿಂತ ಸಾವಯವ ರಸಗೊಬ್ಬರಗಳಿಗೆ ಜಾಸ್ತಿ ಒತ್ತು ನೀಡಿ ಭೂಮಿ ಸಂಪದ್ಭರಿತ ಮಣ್ಣನ್ನು ಕಾಪಾಡುವುದು ಅವಶ್ಯವಿದೆ. ಮಳೆ ಜಾಸ್ತಿಯಾದರೆ ಬಸಿಗಾಲುವೆಯನ್ನು ಮಾಡಿ ನೀರು ಇಲ್ಲದ ಹಾಗೆ ಜಾಗೃತಿ ವಹಿಸುವುದು ಅವಶ್ಯವಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಸವಿತಾ ಚಕ್ರಸಾಲಿ ಹೇಳಿದರು.
ಸವಣೂರು ತಾಲೂಕಿನಾದ್ಯಂತ ರಸಗೊಬ್ಬರಗಳ ಕೊರತೆ ಉಂಟಾಗಿದೆ. ತಕ್ಷಣ ಸರ್ಕಾರ ಸ್ಪಂದನೆ ಮಾಡಿ ರೈತರ ಬಿತ್ತನಗೆ ಅವಶ್ಯವಿರುವ ಯೂರಿಯಾ, ಡಿಎಪಿ ರಸಗೊಬ್ಬರಗಳನ್ನು ತ್ವರಿತಗತಿಯಲ್ಲಿ ಸರಬರಾಜಿಗೆ ಮುಂದಾಗಬೇಕು. ಇಲ್ಲದೇ ಹೋದರೆ ರೈತರ ಪರವಾಗಿ ಕರವೇ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಕರವೇ ತಾಲೂಕೂ ಅಧ್ಯಕ್ಷ ರಮೇಶ ಅರಗೋಳ ಹೇಳಿದರು.