ಮೂಲ ಜಾನಪದ ಉಳಿಸಿ ಬೆಳೆಸಿ: ಕೃಷ್ಣ ಕೊಳ್ಳಾನಟ್ಟಿ

| Published : Feb 06 2025, 11:45 PM IST

ಮೂಲ ಜಾನಪದ ಉಳಿಸಿ ಬೆಳೆಸಿ: ಕೃಷ್ಣ ಕೊಳ್ಳಾನಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಜಾನಪದ ಜಗತ್ತು ವೈವಿಧ್ಯಮಯ ಜನಾಶಯಗಳಿಂದ ತುಂಬಿಕೊಂಡಿದೆ. ಜನಪದರ ಬದುಕಿನ ಜೀವನಾನುಭವದ ‘ಜ್ಞಾನಪದ’ಗಳೇ ‘ಜಾನಪದ’ವಾಗಿ ಇಂದಿಗೂ ಮನುಕುಲದೊಂದಿಗೆ ಉಳಿದುಕೊಂಡಿದೆ.

ಧಾರವಾಡ:

ಹಳ್ಳಿಗಾಡಿನಲ್ಲಿರುವ ಸೋಬಾನೆ, ಡೊಳ್ಳು, ಲಾವಣಿ, ಹಂತಿ ಪದ, ಗೀಗೀ ಪದ, ಭಜನಾ ಗೀತೆಗಳೂ ಸೇರಿದಂತೆ ಹಲವು ಪ್ರಕಾರಗಳಲ್ಲಿರುವ ಮೂಲ ಜಾನಪದ ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಕೊಳ್ಳಾನಟ್ಟಿ ಕರೆ ನೀಡಿದರು.

ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ತಾಲೂಕಿನ ಇಟಿಗಟ್ಟಿ ಗ್ರಾಮದ ಶ್ರೀಪಾಂಡುರಂಗ ರುಕುಮಾಯಿ ಸಾಂಸ್ಕೃತಿಕ ಸೇವಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲಾ ಸಂಭ್ರಮ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಜಾನಪದ ಜಗತ್ತು ವೈವಿಧ್ಯಮಯ ಜನಾಶಯಗಳಿಂದ ತುಂಬಿಕೊಂಡಿದೆ. ಜನಪದರ ಬದುಕಿನ ಜೀವನಾನುಭವದ ‘ಜ್ಞಾನಪದ’ಗಳೇ ‘ಜಾನಪದ’ವಾಗಿ ಇಂದಿಗೂ ಮನುಕುಲದೊಂದಿಗೆ ಉಳಿದುಕೊಂಡಿದೆ ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಿನಿಮಾ ದಾಟಿಯ ಪದಗಳ ಭರಾಟೆಯಲ್ಲಿ ಮೂಲ ಜಾನಪದ ಹಾಡುಗಾರಿಕೆಗೆ ವ್ಯಾಪಕ ಧಕ್ಕೆ ಉಂಟಾಗಿದೆ ಎಂದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಂಕರ ಹಲಗತ್ತಿ, ಲಕ್ಷ್ಮಿಬಾಯಿ ಹರಿಜನ, ಡಾ. ರಾಮು ಮೂಲಗಿ, ಡಾ. ಪ್ರಭು ಹಂಚಿನಾಳ, ಚೆನ್ನಬಸಪ್ಪ ಕಾಳೆ ಅವರನ್ನು ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ:

ಯಲ್ಲಪ್ಪ ಡೊಕ್ಕಣ್ಣವರ, ಆಂಜನೇಯ ಭಜಂತ್ರಿ, ವೀರೇಶ ಅಕ್ಕಿ, ಪ್ರಸನ್ನ ಸಿಂದಗಿ, ಗಾಮಣ್ಣ ಹೂಲಿಕಟ್ಟಿ, ಶಿವಾನಂದ ಅಮರಶೆಟ್ಟಿ, ಯಲ್ಲಪ್ಪ ತರ‍್ಲಕೊಪ್ಪ, ರಾಘವೇಂದ್ರ ಭಜಂತ್ರಿ, ವೈ.ಎನ್. ಮಾಳಗಿ ಅವರಿಗೆ ‘ಕಲಾ ವಲ್ಲಭ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈಶ್ವರಪ್ಪ ಮಾಳಣ್ಣವರ, ಶಿವಯೋಗಿ ರೊಟ್ಟಿಮಠ, ಹಜರತ್‌ಸಾಬ್‌ ನದಾಫ್, ಮುರುಘೇಂದ್ರ ಯಲಿಗಾರ, ಶ್ರೀಶೈಲಗೌಡ ಕಮತರ, ಶ್ರವಣಕುಮಾರ ರೊಟ್ಟಿ, ಅಡಿವೆಪ್ಪ ಕಡೆಪ್ಪಗೋಳ, ಪ್ರವೀಣಕುಮಾರ ಮೊರಬ, ಲಕ್ಷ್ಮಣ ಕರಿ, ಮೀನಾಕ್ಷಿ ಏರಿಮಣಿ, ಹುಸೇನಪ್ಪ ಕುಲಾವಿ ಅವರಿಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಕಲಾವಿದ ಪ್ರಭು ಕುಂದರಗಿ ಸ್ವಾಗತಿಸಿದರು. ಚಂದ್ರಶೇಖರ ರಾಹುತರ ನಿರೂಪಿಸಿದರು. ಆನಂದ ಜಾಧವ ವಂದಿಸಿದರು. ತತ್ವಪದ, ಸಂಪ್ರದಾಯ ಪದ, ಬೀಸುವ ಕಲ್ಲಿನ ಪದ, ಸುಡಗಾಡುಸಿದ್ಧರ ಆಟಗಳು, ಭಕ್ತಿಗೀತೆಗಳ ಹಾಡುಗಾರಿಕೆ ಮತ್ತು ಭರತ ನಾಟ್ಯ ಪ್ರದರ್ಶನ ಮಾಡಲಾಯಿತು.