ದೇಶದ ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸಿ

| Published : Nov 13 2024, 12:07 AM IST

ಸಾರಾಂಶ

ಮಹಿಳೆಯರು ಸಂಸಾರವನ್ನು ನಿಭಾಯಿಸುವ ಜೊತೆಯಲ್ಲಿ ಇನ್ನಿತರೆ ಸಮಾಜಮುಖಿ ಕೆಲಸಗಳಲ್ಲಿ, ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಇತರರಿಗೆ ಆದರ್ಶರಾಗಬೇಕು. ಮನೆಗಳಲ್ಲಿನ ಹೆಣ್ಣು ಮಕ್ಕಳಿಗೆ ಪೂಜೆ ಪುರಸ್ಕಾರಗಳನ್ನು ಮಾಡುವುದು,ರಂಗೋಲಿ ಬಿಡಿಸುವುದು,ದೇವರ ನಾಮ,ದೇವರ ಕೀರ್ತನೆಗಳನ್ನು ಕಲಿಸಬೇಕು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಮ್ಮ ದೇಶದ ಪರಂಪರೆ ಎಲ್ಲಾ ದೇಶಗಳಿಗಿಂತ ವಿಶಿಷ್ಟ ಮತ್ತು ವಿಶೇಷವಾದದ್ದು, ಮಹಿಳೆಯರು ನಮ್ಮ ಈ ಪರಂಪರೆ, ಆಚಾರ-ವಿಚಾರ,ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕೆಂದು ವಿಶ್ವ ಹಿಂದು ಪರಿಷದ್ ಮಾತೃ ಶಕ್ತಿಯ ತಾಲೂಕು ಸಂಯೋಜಕಿ ಗಂಗಲಕ್ಷ್ಮಮ್ಮ ತಿಳಿಸಿದರು. ಅವರು ನಗರದ ಹೊರ ಹೊಲಯದ ಕಲ್ಲಂತ್ರಾಯ ಗುಟ್ಟೆಯಲ್ಲಿರುವ ಕಲ್ಲಿನಾಥೇಶ್ವರ ದೇವಸ್ಥಾನದ ಆವರಣದಲ್ಲಿ, ಮಾತೃ ಶಕ್ತಿ ಮಂಡಲಿ, ಕಲ್ಲಿನಾಥೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ, ಕುಟುಂಬ ಪ್ರಭೋದನ್ ಅವರ ಸಂಯುಕ್ತಾಶ್ರಯದಲ್ಲಿ ಕಾರ್ತಿಕಮಾಸದ ಅಂಗವಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಮನೆಗಳಲ್ಲಿನ ಹೆಣ್ಣು ಮಕ್ಕಳಿಗೆ ಪೂಜೆ ಪುರಸ್ಕಾರಗಳನ್ನು ಮಾಡುವುದು,ರಂಗೋಲಿ ಬಿಡಿಸುವುದು,ದೇವರ ನಾಮ,ದೇವರ ಕೀರ್ತನೆಗಳನ್ನು ಹೇಳುವುದನ್ನು ಕಳಿಸುವ ಮೂಲಕ ಧಾರ್ಮಿಕ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.

ಸಮಾಜಮುಖಿ ಕಾರ್ಯ

ಎಬಿವಿಪಿಯ ಚಂದ್ರಶೇಖರ್ ಮಾತನಾಡಿ, ಮಹಿಳೆಯರು ಸಂಸಾರವನ್ನು ನಿಭಾಯಿಸುವ ಜೊತೆಯಲ್ಲಿ ಇನ್ನಿತರೆ ಸಮಾಜಮುಖಿ ಕೆಲಸಗಳಲ್ಲಿ, ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಇತರರಿಗೆ ಆದರ್ಶರಾಗಬೇಕೆಂದು ಕರೆ ನೀಡಿದರು. ವಿಜೇತರಿಗೆ ಬಹುಮಾನ

ರಂಗೋಲಿ ಸ್ಪರ್ಧೆಯಲ್ಲಿ ಒಟ್ಟು ಇಪ್ಪತ್ತೊಂದು ಮಂದಿ ಮಹಿಳೆಯರು ಭಾಗವಹಿಸಿ, ವಿವಿಧ ರೀತಿಯಲ್ಲಿ ಚಿತ್ತಾಕರ್ಷಕವಾಗಿ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿದ್ದರು. ಅತ್ಯುತ್ತಮವಾಗಿ ರಂಗೋಲಿಯನ್ನು ಬಿಡಿಸಿದ ವಿಜಯಲಕ್ಷ್ಮಿ ಅವರು ಮೊದಲ ಬಹುಮಾನವನ್ನು ಪಡೆದುಕೊಂಡರೆ,ದ್ವಿತೀಯ ಬಹುಮಾನ ನಂದನ,ಮೂರನೆ ಬಹುಮಾನವನ್ನು ಶಿಲ್ಪರಾಜಣ್ಣ ಅವರುಗಳು ಪಡೆದುಕೊಂಡರು.ಜೊತೆಗೆ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕುಟುಂಬ ಪ್ರಭೋದನ್ ಮುಖ್ಯಸ್ಥರಾದ ಕೃಷ್ಣ, ಕಲ್ಲಿನಾಥೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಕೆಎಸ್.ನರಸಿಂಹಮೂರ್ತಿ,ಆನಂದ್,ಗಂಗಾಧರಯ್ಯ ಹಾಗೂ ಶಿಕ್ಷಕರಾದ ರಾಜಣ್ಣ ಹಾಗೂ ಇನ್ನಿತರರು ಭಾಗವಹಿಸಿದ್ದರು.