ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಿ: ಶಾಸಕ ಪ್ರಭು ಚವ್ಹಾಣ್‌

| Published : Jan 12 2024, 01:46 AM IST

ಸಾರಾಂಶ

ಔರಾದ್‌ನಲ್ಲಿ ರೈತರೊಂದಿಗೆ ಎಳ್ಳಮಾವಾಸ್ಯೆ ಆಚರಿಸಿದ ಶಾಸಕರು. ಸಮೃದ್ಧ ಬೆಳೆ, ರೈತರ‌ ಬದುಕು ಸಂತೋಷದಿಂದ ಇರಲು ಪ್ರಾರ್ಥನೆ. ಗುರುವಾರ ಬೆಳಗ್ಗೆ ತಮ್ಮ ಗ್ರಾಮದಲ್ಲಿನ ಕೃಷಿ ಜಮೀನಿಗೆ‌‌‌‌ ತೆರಳಿ, ಭೂತಾಯಿಗೆ ಪೂಜೆ‌ ನೆರವೇರಿಸಿ, ಚರಗ ಚಲ್ಲುವ ಮೂಲಕ ನಮನ ಸಲ್ಲಿಸಿದರು.‌

ಕನ್ನಡಪ್ರಭ ವಾರ್ತೆ ಔರಾದ್

ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಳ್ಳಮಾವಾಸ್ಯೆ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಎಳ್ಳಮಾವಾಸ್ಯೆಯ ದಿನ ರೈತರು ಭೂತಾಯಿಗೆ ಚರಗ ಚೆಲ್ಲಿ ಸಂಭ್ರಮಿಸುವುದು ಸಂಪ್ರದಾಯ. ದೇಶದ ಸಂಸ್ಕೃತಿ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಶಾಸಕ ಪ್ರಭು ಚವ್ಹಾಣ್‌ ಹೇಳಿದರು.

ರೈತರ ಹಬ್ಬವಾದ ಎಳ್ಳಮಾವಾಸ್ಯೆಯನ್ನು ಗುರುವಾರ ಬೆಳಗ್ಗೆ ತಮ್ಮ ಗ್ರಾಮದಲ್ಲಿನ ಕೃಷಿ ಜಮೀನಿಗೆ‌‌‌‌ ತೆರಳಿ, ಭೂತಾಯಿಗೆ ಪೂಜೆ‌ ನೆರವೇರಿಸಿ, ಚರಗ ಚಲ್ಲುವ ಮೂಲಕ ನಮನ ಸಲ್ಲಿಸಿದರು.‌ ರೈತರು ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗಲಿ, ಮುಂದಿನ ಬೆಳೆ ಸಮೃದ್ಧಿಯಾಗಿ ಬೆಳೆಯಲಿ, ಭೂತಾಯಿ ಸಂಪನ್ನವಾಗಿರಲಿ, ರೈತರ‌ ಬದುಕು ಸಂತೋಷದಿಂದ ಕೂಡಿರಲೆಂದು ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ನಾನು ಶಾಸಕನಾದ ನಂತರ 2008ರಿಂದ ಕ್ಷೇತ್ರದಲ್ಲಿ ರೈತಪರ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಕೃಷಿ, ತೋಟಗಾರಿಕೆ ಹಾಗೂ ಮತ್ತಿತರೆ ಇಲಾಖೆಗಳಿಂದ ರೈತರಿಗಾಗಿ ಇರುವ ಎಲ್ಲ ಯೋಜನೆಗಳು ಅರ್ಹರಿಗೆ ತಲುಪುತ್ತಿವೆ. ರೈತರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಪ್ರಸಕ್ತ ಹಂಗಾಮಿನ ಕೃಷಿ ಬೆಳೆಗಳು ಸರಿಯಾಗಿ ಇರುವುದರಿಂದ ಸಂತೋಷವಾಗಿದೆ. ಉತ್ತಮ ಇಳುವರಿಯಾಗಿ ರೈತರಿಗೆ ಲಾಭವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದರು.

ಇದೇ ವೇಳೆ‌ ಶಾಸಕರು ಹೊಲದಲ್ಲಿನ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಉಯ್ಯಾಲೆ ಆಡಿ ಖುಷಪಟ್ಟರು. ಬಳಿಕ ಮನೆಯಿಂದ ತಂದಿದ್ದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಭಜ್ಜಿ ಪಲ್ಯೆ, ಶೇಂಗಾ-ಎಳ್ಳಿನ ಹೋಳಿಗೆಯನ್ನು ಗ್ರಾಮಸ್ಥರು ಹಾಗೂ ಮುಖಂಡರೊಂದಿಗೆ ಸೇವಿಸಿದರು.

ಬಳಿಕ ಪಟ್ಟಣದ ಪ್ರಕಾಶ ಅಲ್ಮಾಜೆ, ವನಮಾರಪಳ್ಳಿ ಗ್ರಾಮದ ನಾಗನಾಥ ಮರ್ಗೆ, ಚಿಂತಾಕಿಯ ಈರಾರೆಡ್ಡಿ, ಉಜನಿಯ ಶಿವಾಜಿರಾವ ಪಾಟೀಲ್, ವಡಗಾಂವನ ಮಲ್ಲಪ್ಪ ಸಾವಲೆ, ಪ್ರಕಾಶ ಜಿರ್ಗೆ , ನಾಗೂರ ಗ್ರಾಮದ ಗಂಗಾರೆಡ್ಡಿಯವರ ಕೃಷಿ ಜಮೀನು ಸೇರಿದಂತೆ ಚಿಂತಾಕಿ, ಉಜನಿ, ವಡಗಾಂವ, ನಾಗೂರ(ಬಿ), ಹಾಲಹಳ್ಳಿ, ಚಾಂದೋರಿ ಗ್ರಾಮಗಳಲ್ಲಿನ ರೈತ ಮುಖಂಡರು‌ ಹಾಗೂ ಕಾರ್ಯಕರ್ತರ ಹೊಲಗಳಿಗೆ ತೆರಳಿ ಎಳ್ಳ ಮವಾಸ್ಯೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ಈ‌ ಸಂದರ್ಭದಲ್ಲಿ ಮುಖಂಡರಾದ ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ರಮೇಶ ಬಿರಾದಾರ, ಪ್ರಕಾಶ ಅಲ್ಮಾಜೆ, ಶಿವರಾಜ ಅಲ್ಮಾಜೆ, ರವೀಂದ್ರ ರೆಡ್ಡಿ, ಖಂಡೋಬಾ ಕಂಗಟೆ, ನಾಗನಾಥ ಮರ್ಗೆ, ವೀರಾರೆಡ್ಡಿ, ಮಾರುತಿ ರೆಡ್ಡಿ, ಜಗದೀಶ ಪಾಟೀಲ್, ಶಿವಾಜಿರಾವ ಪಾಟೀಲ, ಸಂಜು ರೆಡ್ಡಿ, ಪ್ರಕಾಶ ಮೇತ್ರೆ, ಪ್ರಕಾಶ ಜರ್ಗೆ , ಪ್ರಕಾಶ ಬೀರಕೂಳೆ ಸೇರಿದಂತೆ ಇತರರಿದ್ದರು.