ಸಾರಾಂಶ
ಮುಂದಿನ ಪೀಳಿಗೆಯು ಗೋವು ಸಂಪತ್ತು ನೋಡಬೇಕಾದರೆ ಮನೆಗೊಂದು ಗೋವು ಸಾಕಬೇಕು. ಮಣ್ಣಿನ ಫಲವತ್ತತೆ ಉಳಿಯಬೇಕಾದರೆ ಸೆಗಣಿ ಗೊಬ್ಬರ ಉಪಯೋಗಿಸಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ದೇವಲಾಪುರ
ಕೃಷಿ ಕ್ಷೇತ್ರ ಉಳಿಯಲು ಗೋವು ಸಂಪತ್ತನ್ನು ಉಳಿಸಬೇಕಿದೆ ಎಂದು ತಾಲೂಕು ಭಾರತಿಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್ ತಿಳಿಸಿದರು.ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ಕೇಂದ್ರಕ್ಕೆ ಗೋ ಸೇವಾ ಗತಿವಿಧಿ ಹಾಗೂ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಸಹಯೋಗದಲ್ಲಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ನಂದಿ ರಥಯಾತ್ರೆಗೆ ದೇವಲಾಪುರದಲ್ಲಿ ಮಂಗಳವಾದ್ಯದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿ ಗೋ ಪೂಜೆ ಮಾಡಿ ಮಾತನಾಡಿದರು.
ನಮ್ಮ ಬದುಕು ಕಟ್ಟಿಕೊಳ್ಳಬೇಕಾದರೆ ಗೋವು ಸಂಪತ್ತು ಉಳಿಯಬೇಕು. ಗೋವು ಆಧಾರಿತ ಕೃಷಿ ನಾವು ಮರೆತಿರುವುದರಿಂದ ಮಾರಕ ರೋಗಗಳು ಬರುತ್ತಿವೆ. ಇದರಿಂದ ನಾವು ನಮ್ಮ ಸಂಸ್ಕೃತಿಯ ಕೃಷಿಯನ್ನು ಮೈಗೂಡಿಸಿಕೊಳ್ಳುವಂತೆ ತಿಳಿಸಿದರು.ದೇಶದ ಸಂಸ್ಕೃತಿ ಹಾಗೂ ಮಣ್ಣಿನ ಸಂಪತ್ತು ಉಳಿಸಿದಾಗ ಮಾತ್ರ ನಾಗರಿಕತೆ ಉಳಿಯುತ್ತದೆ. ಕೃಷಿಯ ಮೂಲ ಆಧಾರ ಗೋವು. ವಿದೇಶಿ ವ್ಯಾಮೋಹದಿಂದ ನಮ್ಮ ಮೂಲ ಸಂಸ್ಕೃತಿ ಮರೆಯುತ್ತಿದ್ದೇವೆ ಎಂದು ವಿಷಾದಿಸಿದರು.
ಮುಂದಿನ ಪೀಳಿಗೆಯು ಗೋವು ಸಂಪತ್ತು ನೋಡಬೇಕಾದರೆ ಮನೆಗೊಂದು ಗೋವು ಸಾಕಬೇಕು. ಮಣ್ಣಿನ ಫಲವತ್ತತೆ ಉಳಿಯಬೇಕಾದರೆ ಸೆಗಣಿ ಗೊಬ್ಬರ ಉಪಯೋಗಿಸಬೇಕು ಎಂದು ಹೇಳಿದರು.ನಂದಿ ರಥಯಾತ್ರೆಯನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಿ ದೇವಲಾಪುರದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಂತ್ರಘೋಷಗಳೊಂದಿಗೆ ಪೂಜೆ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ದೇವಲಾಪುರದ ಶಾರದಾ ಮಹಿಳಾ ಮಂಡಳಿಯ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ನವೀನ್ ಮರಳ ಮತ್ತು ತಂಡ, ಜಿಲ್ಲಾ ಗೋ ಸೇವಾ ಸಂಯೋಜಕರಾದ ಮರಿಗೌಡ, ಮಳವಳ್ಳಿ ಮಂಜುನಾಥ್, ವಿಜಯ ನರಸಿಂಹ, ತೂಬಿನಕೆರೆ ವೀರಪ್ಪ, ಗ್ರಾಮದ ಮುಖಂಡರು ಹಾಜರಿದ್ದರು.