ಸಾರಾಂಶ
ಚನ್ನಪಟ್ಟಣ: ಈಗಲಾದರೂ ಎಚ್ಚೆತ್ತುಕೊಂಡು ಪರಿಸರ ರಕ್ಷಿಸದಿದ್ದರೆ, ಮುಂದಿನ ದಿನಗಳಲ್ಲಿ ಶುದ್ಧ ಗಾಳಿ, ನೀರು ಹಾಗೂ ಆಹಾರಕ್ಕಾಗಿ ಬಡಿದಾಡುವ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಪರಿಸರ ಉಳಿಸಿ-ಬೆಳೆಸಬೇಕು ಎಂದು ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ತಿಳಿಸಿದರು.
ತಾಲೂಕಿನ ಬ್ರಹ್ಮಣಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ರಾಡ್ಕಾಂ ವಿಜ್ಞಾನ ಕೇಂದ್ರ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಟ್ಟು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಶಿಕ್ಷಕ ಶಶಿಕುಮಾರ್ ಎಂ.ಕೆ.ಮಾತನಾಡಿ, ಮನುಷ್ಯನ ದುರಾಸೆಯಿಂದಾಗಿ ಇಡೀ ಪ್ರಕೃತಿ ಆಪತ್ತಿನ ಅಂಚಿಗೆ ತಲುಪಿದೆ. ನದಿ, ಕೆರೆ ಸೇರಿದಂತೆ ಜಲಮೂಲಗಳು ಮಲಿನವಾಗುತ್ತಿವೆ. ಮಾನವ ಇನ್ನಾದರೂ ಎಚ್ಚೆತ್ತುಕೊಂಡು ಹೊಸ ಬದುಕು ಕಟ್ಟಿಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಉಳಿಗಾಲವಿಲ್ಲ ಎಂದರು.
ಬ್ರಾಡ್ಕಾಂ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮನು ಮಾತನಾಡಿ, ಜನರು ವಾಸಿಸಲು ಇರುವುದೊಂದೇ ಭೂಮಿ ಎಂಬುದನ್ನು ಮರೆಯಬಾರದು. ನಮ್ಮ ಸುತ್ತಲಿನ ಪರಿಸರದಲ್ಲಿನ ಸಮತೋಲನ ಕಾಪಾಡಬೇಕಾದರೆ ಗಿಡ, ಮರಗಳನ್ನು ನೆಟ್ಟು, ನೀರುಣಿಸಿ ಪೋಷಿಸಬೇಕಾದ ಕರ್ತವ್ಯ ಸಮಸ್ತ ನಾಗರಿಕರದ್ದಾಗಿದೆ ಎಂದರು.ಶಾಲೆಯಲ್ಲಿ ಮಕ್ಕಳು ಸುಮಾರು ೫೦೦ಕ್ಕೂ ಹೆಚ್ಚು ಬೀಜದ ಉಂಡೆ ತಯಾರಿಸಿದ್ದರು. ಶಿಕ್ಷಕರಾದ ಇಂದ್ರಕುಮಾರ್, ಕಲ್ಪನಾ, ನಾಗರಾಜು, ರೂಪ ಮತ್ತು ಬ್ರಾಡ್ಕಾಂ ವಿಜ್ಞಾನ ಕೇಂದ್ರದ ಮಾರ್ಗದರ್ಶಿ ಶಿಕ್ಷಕಿ ವರಲಕ್ಷ್ಮೀ ಉಪಸ್ಥಿತರಿದ್ದರು. ಪೊಟೋ೫ಸಿಪಿಟಿ೫: ಬ್ರಹ್ಮಣಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಟ್ಟು ವಿಶ್ವಪರಿಸರ ದಿನಾಚರಣೆ ಆಚರಿಸಲಾಯಿತು.