ನಮ್ಮ ಸಂಸ್ಕೃತಿ ಜೊತೆಗೆ ಪರಿಸರವನ್ನು ಉಳಿಸಿ: ರಾಜೇಶ್ವರ ಶಿವಾಚಾರ್ಯರು

| Published : Jun 26 2024, 12:41 AM IST

ನಮ್ಮ ಸಂಸ್ಕೃತಿ ಜೊತೆಗೆ ಪರಿಸರವನ್ನು ಉಳಿಸಿ: ರಾಜೇಶ್ವರ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ರೇವಪ್ಪಯ್ಯ ಮುತ್ಯಾನವರ ಜಾತ್ರೆ ನಿಮಿತ್ತ ಕಮಲನಗರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜೇಶ್ವರ ಶಿವಾಚಾರ್ಯರು ಮಾತನಡಿದರು. ಜಾತ್ರೆಯಲ್ಲಿ ಗಡಿ ರಾಜ್ಯದ, ಜಿಲ್ಲೆ ಮತ್ತು ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 25000 ಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಕಮಲನಗರ

ಭಾರತದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜೊತೆಗೆ ಗಿಡ ಮರಗಳನ್ನು ಬೆಳೆಸಿ ಪೋಷಿಸಿರಿ ಎಂದು ಮೇಹಕರ-ತಡೋಳಾ ಮಠದ ರಾಜೇಶ್ವರ ಶಿವಾಚಾರ್ಯರು ಹೇಳಿದರು.

ಅವರು ತಾಲೂಕಿನ ಖೇಡ ಗ್ರಾಮದಲ್ಲಿ ಮಂಗಳವಾರ ಪವಾಡ ಪುರುಷ ನಾವದಗಿ ರೇವಪ್ಪಯ್ಯ ಮುತ್ಯಾನವರ 18ನೇ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಹೋಳಿಗೆ ತುಪ್ಪ ಸಂಭ್ರಮದ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂ ಮಾತೆ, ಗೋಮಾತೆ, ಭಾರತ ಮಾತೆ, ಕನ್ನಡ ಮಾತೆ, ವೃಕ್ಷ ಮಾತೆ ಹೀಗೆ ಹತ್ತು ಹಲವಾರು ಶ್ರೇಷ್ಠತೆಯಿಂದ ಪೂಜ್ಯನೀಯವಾಗಿ ಕಾಣುವ ಜನರನ್ನು ಹಾಗೂ ಧಾರ್ಮಿಕ ಆಚರಣೆಯಲ್ಲಿ ಭಾರತ ಅತ್ಯಂತ ಶ್ರೇಷ್ಠವಾಗಿದೆ ಎಂದರು.

ಸ್ಪರ್ಧಾತ್ಮಕ ಯುಗದಲ್ಲಿ ದುಬಾರಿ ದಿನಗಳಲ್ಲಿ ಜಾತ್ರಾ ಮಹೋತ್ಸವಕ್ಕೆ ಬಂದ ಭಕ್ತಾದಿಗಳಿಗೆ ಹೊಟ್ಟೆ ತುಂಬಾ ಹೋಳಿಗೆ ತುಪ್ಪ ಉಣಬಡಿಸುವುದು ರೇವಪ್ಪಯ್ಯನವರ ಪವಾಡ ಶಕ್ತಿಗೆ ಒಂದು ಸಣ್ಣ ಉದಾಹರಣೆಯಾಗಿದೆ ಅಷ್ಟೆ ಎಂದರು.

ಅಕ್ಕ ಮಹಾದೇವಿ ಭಕ್ತ ಮಂಡಳಿ, ರೇವಪ್ಪಯ್ಯನ ಯುವಕ ಸಂಘ ಸದಸ್ಯರು ಎಲ್ಲರೂ ಸೇರಿ ಗ್ರಾಮದಲ್ಲಿ ಹಬ್ಬದ ವಾತಾವರಣದಂತೆ ಪ್ರತಿ ಸದಸ್ಯರೆಲ್ಲರೂ ರೇವಪ್ಪಯ್ಯನವರ ದರ್ಶನ ಪಡೆದು ಪುನೀತಗೊಂಡರು. ಸುತ್ತಲಿನ ಗ್ರಾಮಗಳಿಂದ ಜಾತ್ರಾ ಮಹೋತ್ಸವಕ್ಕೆ ಬಂದ ಭಕ್ತಾದಿಗಳಿಗೆ ದರ್ಶನ ಬಳಿಕ ವಿಶೇಷವಾಗಿ ಹೋಳಿಗೆ ತುಪ್ಪ ಉಣ ಬಡಿಸಿ ಭಾವೈಕ್ಯತೆ ಮೆರೆದರು.

600 ಕೆ.ಜಿ. ತುಪ್ಪ ಬಳಕೆ: ಹೋಳಿಗೆಯ ಮೇಲೆ ತುಪ್ಪ ಸುರಿಯಲು 15 ಕೆ.ಜಿ.ಯ ಸುಮಾರು 40 ಡಬ್ಬಿಗಳು ಹೀಗೆ ಸರಿ ಸುಮಾರು 600 ಕೆ.ಜಿ ತುಪ್ಪವನ್ನು ಬಂದಂತಹ ಭಕ್ತಾದಿಗಳಿಗೆ ಬಡಿಸಲು ಸಿದ್ಧ ಮಾಡಿಕೊಳ್ಳಲಾಗಿತ್ತು. ಕಡಲೆ ಬೇಳೆ 7 ಕ್ವಿಂಟಲ್, ಅಕ್ಕಿ 15 ಕ್ವಿಂಟಲ್, ಉಪ್ಪಿನ ಕಾಯಿ 1 ಕ್ವಿಂಟಲ್, ಗೋಧಿ 8 ಕ್ವಿಂಟಲ್, ಸಕ್ಕರೆ 10 ಕ್ವಿಂಟಲ್, ತೊಗರಿ ಬೇಳೆ 1 ಕ್ವಿಂಟಲ್, ಜೋಳದ ಹಿಟ್ಟು 2 ಕ್ವಿಂಟಲ್, ಎಣ್ಣೆ 300 ಕೆ.ಜಿ. ಅನ್ನದಾಸೋಹ ಸಿದ್ಧಪಡಿಸಲು ಬಳಸಲಾಗಿತ್ತು.

ಜಾತ್ರೆಗೆ ಸುತ್ತಮುತ್ತಲಿನ ಗಡಿ ರಾಜ್ಯದ, ಜಿಲ್ಲೆ ಮತ್ತು ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 25000 ಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು.

ಸಿ.ಪಿ.ಐ ಅಮರೆಪ್ಪ ಇವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಚಂದ್ರಶೇಖರ ನಿರ್ಣೆ ನೇತೃತ್ವದಲ್ಲಿ ಪೊಲೀಸ್ ಬಂದೊಬಸ್ತ್‌ ಮಾಡಲಾಯಿತು.