ಸಾರಾಂಶ
ಭಟ್ಕಳ: ನಾವು ನಮ್ಮ ಆಚಾರ, ವಿಚಾರಗಳನ್ನು ಉಳಿಸಿಕೊಳ್ಳಬೇಕು. ಮನೆ ಮನೆಗಳಲ್ಲಿ ದೇವರ ಧ್ಯಾನ ಆಗಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದು ಸಿದ್ದಾಪುರದ ಶಿರಳಗಿಯ ಶ್ರೀ ಚೈತನ್ಯ ಶ್ರೀರಾಜರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದರು.
ಅವರು ಮಣ್ಕುಳಿಯ ರಘುನಾಥ ರಸ್ತೆಯ ದೇವಡಿಗ ಕುಟುಂಬದ ಶ್ರೀ ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿಯವರು ಏರ್ಪಡಿಸಿದ ನವರಾತ್ರಿ ಉತ್ಸವದ ಬೆಳ್ಳಿ ಮಹೋತ್ಸವ ಮತ್ತು ನವಚಂಡಿಯಾಗದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆನಂತರ ಆಶೀರ್ವಚನ ನೀಡಿದರು. ಮನೆಮನೆಗಳಲ್ಲಿ ನಿರಂತರವಾಗಿ ದೇವರ ಭಜನೆ, ಧ್ಯಾನ ನಡೆಯಬೇಕು. ನಮ್ಮ ಸನಾತನ ಹಿಂದೂ ಧರ್ಮದ ಸಂಸ್ಕೃತಿ, ಆಚಾರ, ವಿಚಾರ ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.ಮೊಬೈಲ್ ಗೀಳಿನಿಂದಾಗಿ ನಾವು ಇಂದು ಎಲ್ಲವನ್ನೂ ಮರೆಯುತ್ತಿದ್ದೇವೆ. ನಮ್ಮ ಸಂಸ್ಕೃತಿಯನ್ನು ಯಾವುದೇ ಕಾರಣಕ್ಕೂ ನಾವು ಮರೆಯಬಾರದು. ತಾಯಂದಿರು ಮಕ್ಕಳಿಗೆ ಸಣ್ಣವರಿರುವಾಗಲೇ ದೇವರಲ್ಲಿ ಭಕ್ತಿ, ಶ್ರದ್ಧೆಯನ್ನು ಮೂಡಿಸುವ ಕಾರ್ಯ ಮಾಡಬೇಕು. ಮಕ್ಕಳಲ್ಲಿ ಜೀವನ ಮೌಲ್ಯ ತುಂಬಬೇಕು. ಯಾವ ಮನೆಗಳಲ್ಲಿ ಪ್ರತಿ ನಿತ್ಯ ಭಗವಂತನ ಸ್ಮರಣೆಯಾಗುತ್ತದೆಯೋ ಅಲ್ಲಿ ದೇವರು ನೆಲೆಸುತ್ತಾನೆ, ಎಲ್ಲಿ ಪದೇ ಪದೇ ಕೆಟ್ಟ ವರ್ತನೆ, ಕೆಟ್ಟ ಶಬ್ದಗಳನ್ನು ಬಳಸುತ್ತಾರೋ, ಅಲ್ಲಿ ದುಷ್ಟಶಕ್ತಿಗಳು ನೆಲೆಸುತ್ತವೆ ಎಂದ ಅವರು, ಸನಾತನ ಹಿಂದೂ ಧರ್ಮದಲ್ಲಿ ಮಾತ್ರ ದೇವರನ್ನು ತಾಯಿಯ ರೂಪದಲ್ಲಿ ನೋಡಲು ಸಾಧ್ಯ. ಇದು ಇನ್ಯಾವುದೇ ಧರ್ಮದಲ್ಲಿ ನೋಡಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ತಾಯಿಯ ಪ್ರೀತಿಯನ್ನು ಹಂಚುವುದಕ್ಕೆ ಮತ್ಯಾರಿಗೂ ಸಾಧ್ಯವಿಲ್ಲ ಎನ್ನುವುದು ನಮ್ಮ ಸನಾತನ ಹಿಂದೂ ಧರ್ಮದಲ್ಲಿ ನಾವು ನೋಡುತ್ತೇವೆ. ಲಕ್ಷಾಂತರ ತಾಯಂದಿರು ಒಂದೆಡೆಯಿದ್ದರೆ ಎಷ್ಟು ಪ್ರೀತಿಯನ್ನು ಹಂಚಬಹುದು. ಅದು ನಮಗೆ ಭಗವಂತನಿಂದ ದೊರೆಯುತ್ತಿದೆ ಎಂದರೆ ಭಗವಂತನನ್ನು ನಾವು ಎಷ್ಟು ನೆನೆದರೂ ಕಡಿಮೆಯೇ ಎಂದರು.
ದೇವರ ಅನುಗ್ರಹಕ್ಕೆ ಒಂದು ದೃಷ್ಟಾಂತವೇ ತಾಯಿ. ತಾಯಿ ತನ್ನ ಮಗುವಿನ ಯಾವುದೇ ತಪ್ಪನ್ನು ಕೂಡಾ ಮನ್ನಿಸುತ್ತಾಳೆ. ಎಷ್ಟು ತಪ್ಪು ಮಾಡಿದರೂ ಪದೇ ಪದೇ ಕ್ಷಮಿಸುವುದು ತಾಯಿ ಮಾತ್ರ. ಶಂಕರಾಚಾರ್ಯರು ಹೇಳಿದಂತೆ ಕೆಟ್ಟ ಮಗು ಹುಟ್ಟಬಹುದು, ಆದರೆ ಪ್ರಪಂಚದಲ್ಲಿ ಕೆಟ್ಟ ತಾಯಿ ಎಂದೂ ಹುಟ್ಟಲಾರಳು. ಭಗವಂತನೂ ಕೂಡಾ ತಾಯಿಯ ಹೃದಯವನ್ನು ಹೊಂದಿದ್ದಾನೆ. ಪ್ರತಿಯೋರ್ವರೂ ದಿನದಲ್ಲಿ ಕನಿಷ್ಠ ಕೆಲವು ಕಾಲವಾದರೂ ಭಗವಂತನ ಸ್ಮರಣೆ ಮಾಡಿ ಎಂದರು.ಪ್ರತಿಯೊಂದಕ್ಕೂ ನಿಯಮವಿದೆ. ಭಗವಂತನ ನಿಯಮ ರೂಪಿಸಿದ್ದಾನೆ. ಅದನ್ನು ಪಾಲಿಸಿಕೊಂಡು ಹೋಗಲು ನಾವು ಭಗವಂತನ ಧ್ಯಾನ ಮಾಡಬೇಕಾಗಿದೆ ಎಂದರು.
ನವರಾತ್ರಿ ಉತ್ಸವ ಸಮಿಯ ಅಧ್ಯಕ್ಷ ಮಹೇಶ ದೇವಾಡಿಗ ಶ್ರೀಗಳ ಪಾದಪೂಜೆಯನ್ನು ನೆರವೇರಿಸಿದರು. ರಾಮನಾಥ ಬಳೇಗಾರ ಸ್ವಾಗತಿಸಿದರು. ಸಮಿತಿಯ ಉಪಾಧ್ಯಕ್ಷ ಅಣ್ಣಪ್ಪ ದೇವಡಿಗ, ಕಾರ್ಯದರ್ಶಿ ಜಯಂತ ದೇವಡಿಗ, ಖಚಾಂಚಿ ಗೋಪಾಲಕೃಷ್ಣ ದೇವಡಿಗ, ರಘುನಾಥ ರಸ್ತೆಯ ದೇವಡಿಗ ಕುಟುಂಬದ ಸರ್ವ ಸದಸ್ಯರು, ಊರ ಭಕ್ತರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.