ಮುಂದಿನ ಪೀಳಿಗೆಗೆ ಮಣ್ಣನ್ನು ಆಸ್ತಿಯಾಗಿ ಉಳಿಸಿ

| Published : Dec 08 2024, 01:16 AM IST

ಸಾರಾಂಶ

ವಿಶ್ವ ಮಣ್ಣು ದಿನಾಚರಣೆಯ ಹಿನ್ನೆಲೆ, ಪ್ರಾಮುಖ್ಯತೆ ಹಾಗೂ ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಕೈಗೊಳ್ಳಬೇಕಾದ ಕೃಷಿ ಪದ್ಧತಿಗಳ ಕುರಿತು ಚರ್ಚಿಸಿದರು.

ಗದಗ: ತಾಲೂಕಿನ ಹುಲಕೋಟಿಯ ಕೆವಿಕೆಯಲ್ಲಿ ಐಸಿಎಆರ್, ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಸಹಭಾಗಿತ್ವದಲ್ಲಿ ವಿಶ್ವ ಮಣ್ಣು ದಿನಾಚರಣೆ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಈ ವೇಳೆ ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್‌ ಮಾತನಾಡಿ, ಪ್ರಸ್ತುತ ವರ್ಷ ಮಣ್ಣಿನ ಕಾಳಜಿ, ಮಾಪನ, ನಿಗಾ ವಹಿಸುವುದು ಮತ್ತು ನಿರ್ವಹಣೆ ಎಂಬ ಧ್ಯೇಯೋದ್ದೇಶದೊಂದಿಗೆ ವಿಶ್ವ ಮಣ್ಣು ದಿನ ಜಾಗತಿಕವಾಗಿ ಆಚರಿಸಲಾಗುತ್ತಿದೆ. ಕೃಷಿಗೆ ಮಣ್ಣು ಅತ್ಯಂತ ಮಹತ್ವಪೂರ್ಣ ನೈಸರ್ಗಿಕ ಸಂಪನ್ಮೂಲವಾಗಿದ್ದು, ಮುಂದಿನ ಪೀಳಿಗೆಗೆ ನಾವು ಆರೋಗ್ಯಕರ ಮಣ್ಣನ್ನೇ ಆಸ್ತಿಯಾಗಿ ಉಳಿಸಬೇಕು. ಮಣ್ಣಿನಲ್ಲಿನ ಸಾವಯವ ಇಂಗಾಲ ದಿನಂಪ್ರತಿ ಕ್ಷೀಣಿಸುತ್ತಿದ್ದು, ನಾವು ಮಣ್ಣಿಗೆ ಸೇರಿಸುವ ಗೊಬ್ಬರ ಮಣ್ಣಿನ ಪರೀಕ್ಷೆಗೆ ಅನುಗುಣವಾಗಿ ಶಿಫಾರಸ್ಸಿನ ಪ್ರಕಾರ ಸೇರಿಸಬೇಕು ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಎನ್.ಎಚ್. ಭಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ಮಣ್ಣು ದಿನಾಚರಣೆಯ ಹಿನ್ನೆಲೆ, ಪ್ರಾಮುಖ್ಯತೆ ಹಾಗೂ ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಕೈಗೊಳ್ಳಬೇಕಾದ ಕೃಷಿ ಪದ್ಧತಿಗಳ ಕುರಿತು ಚರ್ಚಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ.ಸುಧಾ ವಿ. ಮಂಕಣಿ ಮಾತನಾಡಿ, ರೈತರು ಯತೇಚ್ಛವಾಗಿ ರಸಗೊಬ್ಬರ ಬಳಸುತ್ತಿದ್ದಾರೆ, ಇದರಿಂದ ಮಣ್ಣಿನ ರಚನೆ ಹಾಗೂ ಆರೋಗ್ಯ ಕೆಡುವುದಲ್ಲದೇ ದೀರ್ಘಕಾಲೀನವಾಗಿ ಇಳುವರಿಯಲ್ಲಿಯೂ ವ್ಯತ್ಯಾಸವಾಗುತ್ತದೆ. ಆದ್ದರಿಂದ ಪ್ರತಿ ವರ್ಷ ರೈತರು ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರ ಮಣ್ಣಿಗೆ ಸೇರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರೈತರಿಗೆ ಮಣ್ಣು ಆರೋಗ್ಯ ಪತ್ರ ವಿತರಿಸಲಾಯಿತು. ಹುಲಕೋಟಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಜೇಶ್ವರಿ ಚಿನಿವಾರ, ಕೃಷಿ ಇಲಾಖೆಯ ಸಿಬ್ಬಂದಿ, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಡಾ.ವಿನಾಯಕ ನಿರಂಜನ್ ನಿರೂಪಿಸಿ ಸ್ವಾಗತಿಸಿದರು. ಲಲಿತಾ ಅಸೂಟಿ ವಂದಿಸಿದರು.