ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಹಳೇಬೀಡು ಹೋಬಳಿ ಐದಳ್ಳ ಕಾವಲಿನ ಸರ್ವೇ ನಂ. ೧ರ ೨೬೮೦ ಎಕರೆ ಭೂಮಿಯಲ್ಲಿ ಕೃಷಿ ಚಟವಟಿಕೆ ನಡೆಸುವ ರೈತರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಮೂಲಕ ರೈತರಿಗೆ ಅನ್ಯಾಯ ಮಾಡಿದೆ. ರೈತರಿಗೆ ಭೂಮಿ ಉಳಿಸಿಕೊಡದಿದ್ದರೆ ಜನವರಿ ೨೬ರಂದು ಬೇಲೂರಿಗೆ ರಸ್ತೆತಡೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಷ್ಟ್ರೀಯ ಸಂಚಾಲಕ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನಕುಮಾರ್ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ.ಮಮತಾ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಷ್ಟ್ರೀಯ ಸಂಚಾಲಕ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನಕುಮಾರ್, ಐದಳ್ಳ ಕಾವಲು ಕೃಷಿಕರ ಭೂಮಿ, ಅರಣ್ಯ ಇಲಾಖೆ ಏಕಾಏಕಿ ನಮ್ಮ ಭೂಮಿ ಎಂದು ಬಡಕೃಷಿಕರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿರುವ ಕಾರಣದಿಂದ ನಾವು ರಾಷ್ಟ್ರಪತಿ, ರಾಜ್ಯಪಾಲರಿಗೆ ಮನವಿ ನೀಡಲಾಗಿದೆ. ಇದೇ ಭೂಮಿಗಾಗಿ ನೂರಾರು ರೈತರು ಬೇಲೂರಿಗೆ ಸತತ ಮೂರು ಬಾರಿ ಪಾದಯಾತ್ರೆ ನಡೆಸಲಾಗಿದೆ. ನಮ್ಮ ಹೋರಾಟಕ್ಕೆ ಪ್ರೊ. ನಂಜುಂಡಸ್ವಾಮಿರವರೇ ಶಕ್ತಿ, ಆದರೆ ಕೆಲವರು ಹಣ ಪಡೆದು ಹೋರಾಟ ಮಾಡುತ್ತಿದ್ದಾರೆ ಎಂದಿದ್ದಾರೆ. ಜನವರಿ ೨೬ರಂದು ಬೇಲೂರಿನಲ್ಲಿ ರಸ್ತೆತಡೆದು ಪ್ರತಿಭಟನೆ ಉದ್ದೇಶದಿಂದಲೇ ನಾವುಗಳು ಜನವರಿ ೨೪ರಿಂದ ಅರಸೀಕೆರೆ ತಾಲೂಕಿನಿಂದ ಬೇಲೂರಿಗೆ ಪಾದಯಾತ್ರೆ ನಡೆಸಿದ್ದು, ಜ.೨೬ ಗಣರಾಜ್ಯೋತ್ಸವ ದಿನ ಪ್ರತಿಭಟನೆ ನಡೆಸುವುದು ಉಚಿತವಲ್ಲ ಎಂದು ನಾವುಗಳು ಮಾರ್ಗ ಮಧ್ಯೆ ಹೆಬ್ಬಾಳಿನಲ್ಲಿ ತಹಸೀಲ್ದಾರ್ ಅವರಿಗೆ ಮನವಿ ನೀಡಿ ಮೂರು ತಿಂಗಳ ಗಡುವು ನೀಡಲಾಗಿದೆ. ಬಳಿಕವೂ ನಿರ್ಲಕ್ಷ್ಯ ತೋರಿದರೆ ಖಂಡಿತ ಹೋರಾಟ ಉಗ್ರಸ್ವರೂಪ ಪಡೆಯುತ್ತದೆ. ಐದಳ್ಳ ಕಾವಲಿನ ಭೂಮಿಯಲ್ಲಿ ಪ್ರೊ. ನಂಜುಂಡಸ್ವಾಮಿ ಪುತ್ಥಳಿ ಸ್ಥಾಪನೆಯೊಂದಿಗೆ ಹೋರಾಟ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ನಿಂಗಪ್ಪ, ಅಯ್ಯಬಾ ಸಾಬ್, ಏಜಾಜ್ ಪಾಷ, ಮಹಮ್ಮದ್ ದಸ್ತಗಿರಿ, ಭೋಜರಾಜ್, ಹನುಮಂತ ಇನ್ನೂ ಮುಂತಾದವರು ಭಾಗವಹಿಸಿದ್ದರು.
* ಹೇಳಿಕೆ:ಈಗಾಗಲೇ ಎರಡು ಬಾರಿ ಐದಳ್ಳ ಕಾವಲಿನ ಬಗ್ಗೆ ಭೂಮಿ ಉಳಿಸಬೇಕು ಎಂದು ರೈತ ಸಂಘ ಪಾದಯಾತ್ರೆ ಮೂಲಕ ಮನವಿ ಸಲ್ಲಿಸಿದೆ. ಈಗಲೂ ಕೂಡ ಮನವಿ ನೀಡಿದ್ದಾರೆ. ಸದ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ಪರಿಶೀಲನೆ ನಡೆಸಲಾಗುತ್ತದೆ ಮತ್ತು ರೈತ ಸಂಘದ ಬಗ್ಗೆ ನಮಗೆ ಅಪಾರ ಗೌರವಾಭಿಮಾನವಿದೆ ಎಂದರು.
- ಮಮತಾ, ಬೇಲೂರು ತಹಸೀಲ್ದಾರ್