ತಾಲೂಕಿನ ಚಂದಕವಾಡಿ ಗ್ರಾಮದ ನಾಯಕ ಜನಾಂಗದವರು ಸಾಗುವಳಿ ಮಾಡುತ್ತಿದ್ದ ಜಮೀನನ್ನು ಅಧಿಕಾರಿಗಳು ತೆರವು ಮಾಡಿಸಲು ಮುಂದಾಗಿದ್ದು, ನಮ್ಮ ಜಮೀನನ್ನು ನಮಗೆ ಉಳಿಸಿಕೊಡಬೇಕು ಎಂದು ಮುಖಂಡ ಮಂಜುನಾಥ್ ಆಗ್ರಹಿಸಿದರು

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ತಾಲೂಕಿನ ಚಂದಕವಾಡಿ ಗ್ರಾಮದ ನಾಯಕ ಜನಾಂಗದವರು ಸಾಗುವಳಿ ಮಾಡುತ್ತಿದ್ದ ಜಮೀನನ್ನು ಅಧಿಕಾರಿಗಳು ತೆರವು ಮಾಡಿಸಲು ಮುಂದಾಗಿದ್ದು, ನಮ್ಮ ಜಮೀನನ್ನು ನಮಗೆ ಉಳಿಸಿಕೊಡಬೇಕು ಎಂದು ಮುಖಂಡ ಮಂಜುನಾಥ್ ಆಗ್ರಹಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯ್ಯನಪುರಕ್ಕೆ ಸೇರಿದ ಸ.ನ.೫೬/೧ ರಲ್ಲಿ ೧೯೬೬ರಲ್ಲಿ ಚಂದಕವಾಡಿ ಗ್ರಾಮದ ನಾಯಕ ಜನಾಂಗಕ್ಕೆ ಸೇರಿದ ೧೨ ಕುಟುಂಬಕ್ಕೆ ತಲಾ ಮೂರು ಎಕರೆಯಂತೆ ೩೬ ಎಕರೆ ಸಾಗುವಳಿ ಮಾಡಲು ನೀಡಲಾಗಿತ್ತು. ಅಂದಿನಿಂದಲೂ ಇಲ್ಲಿ ಭತ್ತ ರಾಗಿ ಜೋಳ ಬೆಳೆಯುತ್ತಿದ್ದು, ಗಂಗಕಲ್ಯಾಣ ಯೋಜನೆ ಬೋರ್ ವೆಲ್, ವಿದ್ಯುತ್ ಸಂಪರ್ಕ ಪಡೆದು ಬೆಳೆಗಳನ್ನು ಬೆಳೆಯುತ್ತಿದ್ದೇವೆ, ಸರ್ಕಾರದ ಸೌಲಭ್ಯವನ್ನು ಪಡೆದುಕೊಂಡಿದ್ದೇವೆ ಎಂದರು.

ಕಳೆದ ಮೂರು ತಿಂಗಳಿಂದೀಚೆಗೆ ಗಡಿ ಗುರುತು ಮಾಡಲು ನಮ್ಮ ೧೨ ಮಂದಿ ರೈತರಿಗೆ ನೋಟಿಸ್ ಕೊಟ್ಟರು. ಅಲ್ಲದೇ ಅತಿಕ್ರಮವಾಗಿ ಸಾಗುವಳಿ ಮಾಡಲಾಗುತ್ತಿದೆ ಎಂದಿದ್ದಾರೆ. ಈ ಜಮೀನಿಗೆ ಸಂಬಂಧಿಸಿದಂತೆ ಹಲವು ದಾಖಲೆಗಳನ್ನು ಸಲ್ಲಿಸಲಾಗಿದೆ. ಆದರೂ ಕಳೆದ ಹಲವು ವರ್ಷಗಳಿಂದಲೂ ಸಾಗುವಳಿ ಮಾಡುತ್ತಿದ್ದ ಜಮೀನನ್ನು ತೆರವು ಮಾಡಿಸುತ್ತಿದ್ದು ಜೀವನ ಮಾಡಲು ತೊಂದರೆಯಾಗುತ್ತಿದೆ ಎಂದರು.

ಸ.ನಂ.೫೧/೧ರಲ್ಲಿ ೪೦೨ ಎಕರೆ ಇದ್ದು ೮೨ಕ್ಕೂ ಹೆಚ್ಚು ರೈತರು ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಅವರನ್ನು ಪ್ರಶ್ನಿಸದೇ ನಾಯಕ ಜನಾಂಗದವರನ್ನೇ ಗುರಿಯಾಗಿಸಿಕೊಂಡು ಕೊಂಡು ಜಮೀನನ್ನು ತೆರವು ಮಾಡಿದ್ದು ನಮ್ಮ ಜಮೀನಿನಲ್ಲಿ ಮೊದಲಿನಂತೆ ಸಾಗುವಳಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಈಗ ಕಾಗಲವಾಡಿ ಜೀತ ವಿಮುಕ್ತರಿಗೆ ಜಮೀನು ನೀಡುಲು ನೀವು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದೀರಾ ಎಂದು ಆರೋಪಿಸಿ ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿ ದಾಖಲೆ ಕೇಳಿದ್ದರು ನಾವು ನೀಡಿದ್ದೇವೆ. ತಹಸೀಲ್ದಾರರು ಸ್ಥಳ ಪರಿಶೀಲನೆಗೆ ಬಂದಿದ್ದಾಗ ಪರಿಶೀಲಿಸಿ ನಿಮ್ಮ ಜಮೀನನ್ನು ನಿಮಗೆ ಬಿಟ್ಟು ಕೊಡುವುದಾದಾಗಿ ಭರವಸೆ ನೀಡಿದ್ದರು ಎಂದರು.

ಡಿ.೨೯ ರಂದು ನೋಟಿಸ್ ನೀಡಿ ತೆರವುಗೊಳಿಸುದಾಗಿ ಹೇಳಿದ್ದರು. ನಾವು ಜಮೀನಿಗೆ ಹೋಗಿ ಕಾದೆವು ಬರಲಿಲ್ಲ. ಸಂಜೆ ೪ ಗಂಟೆ ಬಳಿಕ ೩ ಜೆಸಿಬಿ ಬಳಸಿ ಸುಮಾರು ೬ ಎಕರೆ ಜಮೀನು ತೆರವುಗೊಳಿಸಿದ್ದಾರೆ. ನಮ್ಮ ಜಮೀನು ತೆರವು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ವಿರೋಧಿಸಿದಾಗ ನಮ್ಮನ್ನು ಬಂದಿಸಿ ಸ್ಟೇಷನ್ ಗೆ ಕರೆದುಕೊಂಡು ಹೋಗಿ ಬಿಟ್ಟು ಕಳುಹಿಸಿದ್ದಾರೆ ಎಂದರು. ನೋಟಿಸ್ ನೀಡಿರುವುದಕ್ಕೆ ನಾವು ನ್ಯಾಯಾಲಯದ ಮೊರೆ ಹೋಗಿದ್ದು, ಆದರೂ ತೆರವುಗೊಳಿಸಿದ್ದಾರೆ. ತೆರವು ಮಾಡಿರುವ ಜಮೀನನ್ನು ಉಳಿಸಿಕೊಡುವಂತೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಜು, ಶಿವಣ್ಣ, ರಂಗರಾಜು, ಆರ್. ಮಂಜುನಾಥ್ ಇದ್ದರು.