- ಕೇಂದ್ರ, ರಾಜ್ಯ ಸರ್ಕಾರಗಳ ತಪ್ಪು ನೀತಿ, ಭ್ರಷ್ಟರ ಕಾಟ ಅಸಹನೀಯ: ಲಾರಿ ಮಾಲೀಕರ ಸಂಘ ಆಕ್ರೋಶ - - -
ಕನ್ನಡಪ್ರಭ ವಾರ್ತೆ ದಾವಣಗೆರೆಕೇಂದ್ರ, ರಾಜ್ಯ ಸರ್ಕಾರಗಳ ತಪ್ಪು ನೀತಿಗಳು, ಪೊಲೀಸ್- ಪ್ರಾದೇಶಿಕ ಸಾರಿಗೆ ಇಲಾಖೆಗಳ ಭ್ರಷ್ಟ ಅಧಿಕಾರಿ, ಸಿಬ್ಬಂದಿ ಕಿರುಕುಳ ಸೇರಿದಂತೆ ನಾನಾ ಸಮಸ್ಯೆಗಳಿಂದ ಇಡೀ ಲಾರಿ ಉದ್ಯಮವೇ ಸಂಕಷ್ಟದಲ್ಲಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಲಾರಿ ಮಾಲೀಕರು, ಚಾಲಕರು ದೇಶದ ಬೆನ್ನೆಲುಬಾದ ಲಾರಿ ಉದ್ಯಮವನ್ನೇ ತೊರೆಯಬೇಕಾಗುತ್ತದೆ ಎಂದು ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್‌ಪೋರ್ಟ್ ಏಜೆಂಟ್ಸ್ ಅಸೋಸಿಯೇಷನ್ ಎಚ್ಚರಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಸೈಯದ್ ಸೈಫುಲ್ಲಾ, ಲಾರಿ ಮಾಲೀಕರು ಮತ್ತು ಚಾಲಕರು ಇಂದು ಒಂದಲ್ಲ, ಹತ್ತಾರು ಸಮಸ್ಯೆಗಳ ಸುಳಿಗೆ ಸಿಲುಕಿದ್ದು, ಈ ವೃತ್ತಿ, ಉದ್ಯಮದ ಜೀವನ ಸಾಗಿಸುವುದಿರಲಿ, ನೆಮ್ಮದಿಯಿಂದ ನಿದ್ದೆ ಮಾಡಲೂ ಆಗದಂತಹ ಪರಿಸ್ಥಿತಿಯನ್ನು ಕೇಂದ್ರ, ರಾಜ್ಯ ಸರ್ಕಾರಗಳ ತಪ್ಪು ನೀತಿಗಳು, ಭ್ರಷ್ಟ ಅಧಿಕಾರಿ, ಸಿಬ್ಬಂದಿ ತಂದೊಡ್ಡಿದ್ದಾರೆ ಎಂದರು.ಪ್ರಸ್ತುತ ಸಾರಿಗೆ ಉದ್ಯಮ ವಿಶೇಷವಾಗಿ ಸರಕು ಸಾಗಾಣಿಕೆಯ ಆಧಾರವಾದ ಲಾರಿ ಉದ್ಯಮ ನಡೆಸುವುದೇ ಕಷ್ಟವಾಗಿದೆ. ಸರಕು ಸಾಗಾಣಿಕೆ ಉದ್ಯಮ ಮೊದಲಿನಂತೆ ಈಗ ಇಲ್ಲ. ಹೆದ್ದಾರಿ, ಟೋಲ್‌ಗಳಲ್ಲಿ ಲಾರಿ ಚಾಲಕರಿಗೆ ಸುರಕ್ಷತೆ ಇಲ್ಲ, ಶೌಚಾಲಯ, ರೆಸ್ಟ್ ರೂಂ ಯಾವುದೂ ಇಲ್ಲ. ಈಗಾಗಲೇ ಲಾರಿಗಳಲ್ಲಿ ಕ್ಲೀನರ್ ಕೆಲಸಕ್ಕೆ ಯಾರೂ ಬರುತ್ತಿಲ್ಲ. ಸರಕು ಹೊತ್ತ ಲಾರಿಯಲ್ಲಿ ಚಾಲಕನೊಬ್ಬನೇ ಇರುವ ಸ್ಥಿತಿ ಇದೆ ಎಂದರು.
ಜಿಲ್ಲೆಗಳು, ರಾಜ್ಯಗಳ ಗಡಿ ಭಾಗಗಳಲ್ಲಿ ಬರುವ ಮತ್ತು ಹೊರ ಹೋಗುವ ವಾಹನಗಳಲ್ಲಿ ಎಲ್ಲ ದಾಖಲಾತಿ ಸರಿ ಇದ್ದರೂ ಸಾರಿಗೆ ಅಧಿಕಾರಿ, ಸಿಬ್ಬಂದಿ ಅನಾವಶ್ಯಕ ತೊಂದರೆ ಕೊಡುತ್ತಾರೆ. ರಾತ್ರಿಯಾದರೆ ಸುಖಾಸುಮ್ಮನೆ ರಾತ್ರಿಯಿಂದ ಬೆಳಗ್ಗೆವರೆಗೆ ಲಾರಿಗಳನ್ನು ನಿಲ್ಲಿಸಿಕೊಳ್ಳುತ್ತಾರೆ. ಪೊಲೀಸರು ಸಹ ವಿನಾಕಾರಣ ಲಾರಿ ತಡೆದು, ಆರ್‌ಟಿಒಗೆ ಕೇಸ್ ಮಾಡುವುದಕ್ಕೆ ಹೇಳುತ್ತೇವೆಂದು ಬೆದರಿಸಿ, ಹಣ ವಸೂಲಿ ಮಾಡುವುದು ಸಾಮಾನ್ಯವಾಗಿದೆ. ಇಂತಹ ಭ್ರಷ್ಟ ಅಧಿಕಾರಿ, ಸಿಬ್ಬಂದಿ ಕಿರುಕುಳ ಮೊದಲು ತಪ್ಪಲಿ ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ಜಿಎಸ್‌ಟಿ ಆದೇಶ ಬಂದ ನಂತರ ಚೆಕ್ ಪೋಸ್ಟ್‌ಗಳ ಅವಶ್ಯಕತೆಯೇ ಇಲ್ಲ. ಆದರೂ, ಗಡಿಭಾಗದ ಚೆಕ್ ಪೋಸ್ಟ್ ಹಾಗೂ ರಸ್ತೆಯುದ್ದಕ್ಕೂ ಹೋಗುವ ವಾಹನಗಳಿಗೆ ಅಧಿಕಾರಿಗಳು ಅನಾವಶ್ಯಕವಾಗಿ ತೊಂದರೆ ನೀಡುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ ಲಾರಿ ಚಾಲಕರ ಲೈಸೆನ್ಸ್ ಅಮಾನತು, ರದ್ದುಪಡಿಸುವ ಬೆದರಿಕೆ ಹಾಕುತ್ತಾರೆ. ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಸುತ್ತೋಲೆ ಪ್ರಕಾರ ಎಪಿಎಂಸಿ ಪ್ರಾಂಗಣ ಸೇರಿದಂತೆ ಇತರೆ ಸಂಸ್ಥೆಗಳಿಂದ ವಾಹನ ಲೋಡಿಂಗ್, ಅನ್ ಲೋಡಿಂಗ್ ಮೊತ್ತವನ್ನು ಸರಕಿನ ಮಾಲೀಕರೇ ಪಾವತಿಸಬೇಕು. ಇದನ್ನು ಉಲ್ಲಂಘಿಸಿ, ಲಾರಿ ಮಾಲೀಕರಿಂದ ವಸೂಲು ಮಾಡುತ್ತಿರುವುದು ಕಾನೂನು ಬಾಹಿರ. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಓವರ್ ಲೋಡ್ ಕಾನೂನು ಬಾಹಿರವಾಗಿದ್ದರೂ, ಅದನ್ನು ತಡೆಯುವಲ್ಲಿ ಸಾರಿಗೆ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ. ವಾಹನದಲ್ಲಿ ಅಧಿಕ ಭಾರವಿದ್ದರೆ ಅದಕ್ಕೆ ಸರಕಿನ ಮಾಲೀಕ, ಖರೀದಿದಾರ ಹಾಗೂ ವಾಹನದ ಮಾಲೀಕ, ಚಾಲಕ ಈ ಎಲ್ಲರನ್ನೂ ಸಮಾನ ಹೊಣೆಗಾರರಾಗುತ್ತಾರೆ. ಆದರೆ, ಲಾರಿ ಮಾಲೀಕ ಹಾಗೂ ಚಾಲಕರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದ್ದು ಇದು ಸರಿಯಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳಿಗೆ ವಿರುದ್ಧವಾಗಿ ಸಾಲ ವಸೂಲಾತಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಲಾರಿಗಳನ್ನು ಜಪ್ತಿ ಮಾಡುತ್ತಿದ್ದು, ಇಂತಹದ್ದಕ್ಕೆ ಕಡಿವಾಣ ಹಾಕುವ ಕೆಲಸ ಉಭಯ ಸರ್ಕಾರಗಳು ಮಾಡಲಿ ಎಂದು ಮನವಿ ಮಾಡಿದರು.ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಲಾರಿ ಖರೀದಿಗೆ ಸಾಲ ಸಿಗದ ಕಾರಣಕ್ಕೆ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಮಾಡಿರುತ್ತೇವೆ. ಆದರೆ, ಆರ್‌ಬಿಐ ನಿಯಮಾವಳಿಗೆ ವಿರುದ್ಧವಾಗಿ ರೌಡಿಗಳಂತಿರುವ ಸೀಜ್ ಮಾಡುವ ಸಿಬ್ಬಂದಿಯಿಂದ ಗಲಾಟೆ, ಹಲ್ಲೆ ಮಾಡಿಸಿ, ಲಾರಿ ಜಪ್ತಿ ಮಾಡಲಾಗುತ್ತಿದೆ. ಇಂಧನ ದರ, ಲಾರಿಗಳ ಬಿಡಿ ಭಾಗಗಳ ಬೆಲೆ ಏರಿಕೆ, ಸಾರಿಗೆ ಶುಲ್ಕಗಳು ಸಹ ಸಾಕಷ್ಟು ಆರ್ಥಿಕ ಪೆಟ್ಟನ್ನು ಲಾರಿ ಮಾಲೀಕರಿಗೆ ನೀಡುತ್ತಿವೆ. ಹೀಗೆ ಹಲವಾರು ಸಮಸ್ಯೆಗಳ ಮಧ್ಯೆ ಮುಂದೆ ಯಾರೂ ಲಾರಿ ಉದ್ಯಮಕ್ಕೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಎಲ್ಲ ಅಂಶಗಳ ಬಗ್ಗೆ ಉಭಯ ಸರ್ಕಾರಗಳು ಗಂಭೀರವಾಗಿ ಆಲೋಚಿಸಿ, ಕ್ರಮ ಕೈಗೊಳ್ಳಲಿ ಎಂದು ಸೈಯದ್ ಸೈಫುಲ್ಲಾ ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ, ಚಂದ್ರಪ್ಪ, ಪಿ.ಜಯಣ್ಣ, ವೀರೇಶ, ವಾಣಿ ಶಂಭಣ್ಣ, ವಿಜಯಕುಮಾರ, ಸೋಗಿ ವೀರೇಶ, ಚಂದ್ರಣ್ಣ, ಸನಾವುಲ್ಲಾ, ವಾಗೀಶ ಸ್ವಾಮಿ, ಭಾರತ್ ಕ್ರೇನ್ ಸರ್ವೀಸ್‌ನ ಮುನ್ನಾ ಬಾಯಿ ಇತರರು ಇದ್ದರು.- - -
(ಬಾಕ್ಸ್)* ಲಾರಿಗೆ ಹಾನಿ ಮಾಡ್ಬೇಡಿ, ಚಾಲಕರಿಗೆ ತೊಂದ್ರೆ ಕೊಡ್ಬೇಡಿ
- ಕಾವೇರಿ ಹೋರಾಟಕ್ಕೆ ಲಾರಿ ಮಾಲೀಕರ ಸಂಪೂರ್ಣ ಬೆಂಬಲ: ಸೈಫುಲ್ಲಾ ದಾವಣಗೆರೆ: ಕಾವೇರಿನ ನೀರಿನ ವಿಚಾರವಾಗಿ ಆ.13ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲವಿದ್ದು, ಯಾವುದೇ ಕಾರಣಕ್ಕೂ ಪ್ರತಿಭಟನಾಕಾರರು ರಾಜ್ಯ ಹಾಗೂ ಪರ ರಾಜ್ಯಗಳ ಲಾರಿ ಚಾಲಕರಿಗೆ ತೊಂದರೆ ನೀಡಬೇಡಿ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ, ದಾವಣಗೆರೆ ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸಪೋರ್ಟ್ ಏಜೆಂಟ್ಸ್ ಅಸೋಷಿಯೇಶನ್ ಅಧ್ಯಕ್ಷ ಸೈಯದ್ ಸೈಫುಲ್ಲಾ ಮನವಿ ಮಾಡಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾವೇರಿ ವಿಚಾರದ ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲವಿತ್ತು. ಕಾವೇರಿ ಗಲಾಟೆ ವೇಳೆ ತಮಿಳುನಾಡಿನಲ್ಲಿ ನಮ್ಮ ರಾಜ್ಯದ ಹಲವಾರು ಲಾರಿಗಳನ್ನು ಸುಟ್ಟಿದ್ದರು. ಅದಕ್ಕೆ ಇನ್ಷೂರೆನ್ಸ್ ಹಣಕ್ಕಾಗಿ ಲಾರಿ ಮಾಲೀಕರು ತೀವ್ರ ಪರದಾಡಬೇಕಾಯಿತು ಎಂದರು.
ನೀವು ಹೋರಾಟ ಮಾಡುತ್ತಿದ್ದರೆ ಲಾರಿಯನ್ನು ರಸ್ತೆ, ಹೆದ್ದಾರಿ ಬದಿ ನಿಲ್ಲಿಸುವಂತೆ ಹೇಳಿದರೆ ಖಂಡಿತಾ ನಮ್ಮ ಲಾರಿ ಚಾಲಕರು ಲಾರಿ ನಿಲ್ಲಿಸುತ್ತಾರೆ. ಯಾವುದೇ ಕಾರಣಕ್ಕೂ ಲಾರಿಗಳ ಮೇಲೆ ಕಲ್ಲು ಎಸೆಯುವುದು, ಟೈರ್‌ಗಳ ಹಿಂದೆ ಮುಂದೆ ಕಲ್ಲುಗಳನ್ನು ಇಡುವುದು, ಮೊಳೆಗಳನ್ನು ಹಾಕುವುದು, ಲಾರಿ ಗಾಜುಗಳನ್ನು, ಹೆಡ್ ಲೈಟ್‌ಗಳನ್ನು ಒಡೆಯುವಂತಹ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.ಸ್ಥಳೀಯರಾಗಿ ನಾವು ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಟ್ಟೇ ಕೊಡುತ್ತೇವೆ. ಆದರೆ, ರಾಜ್ಯ ರಾಜ್ಯದಿಂದ ಲಾರಿ ತಂದಂತಹ ಲಾರಿ ಚಾಲಕರಿಗೆ ಇಲ್ಲಿನ ಬಂದ್ ವಿಚಾರ ಗೊತ್ತಿರುವುದಿಲ್ಲ. ಹಾಗಾಗಿ ಹೆದ್ದಾರಿಯಲ್ಲಿ ಸಾಗುವಂತಹ ಲಾರಿಗಳನ್ನು ತಡೆಯುವುದು, ಚಾಲಕರಿಗೆ ತೊಂದರೆ ಕೊಡುವುದು, ಹಲ್ಲೆ ಮಾಡುವುದು, ಲಾರಿ ಗಾಜು, ಹೆಡ್ ಲೈಟ್ ಒಡೆಯುವುದು, ಟೈರ್‌ಗಳಲ್ಲಿನ ಗಾಳಿ ಬಿಡುವುನ್ನು ಮಾಡಬೇಡಿ ಎಂದು ಸೈಯದ್ ಸೈಫುಲ್ಲಾ ತಿಳಿಸಿದರು.
- - --12ಕೆಡಿವಿಜಿ2, 3:
ದಾವಣಗೆರೆಯಲ್ಲಿ ಬುಧವಾರ ರಾಜ್ಯ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಸೈಯದ್ ಸೈಫುಲ್ಲಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.