ಸಾರಾಂಶ
ಸೆ. 14 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಆಂದೋಲನದ ರಾಜ್ಯ ಸಂಚಾಲಕ ಅರವಿಂದ ದಳವಾಯಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಷ್ಟ್ರೀಯ ಮಟ್ಟದ ಒಕ್ಕೂಟ ಉಳಿಸಿ ಆಂದೋಲನ ಸಂಘಟನೆ ವತಿಯಿಂದ ಸೆ. 14 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಆಂದೋಲನದ ರಾಜ್ಯ ಸಂಚಾಲಕ ಅರವಿಂದ ದಳವಾಯಿ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕರು, ಬುದ್ದಿಜೀವಿಗಳು ಸೇರಿದಂತೆ 1 ಸಾವಿರ ಜನರು ಪಾಲ್ಗೊಳ್ಳುವರು. ಭಾರತ ರಾಜ್ಯಗಳ ಒಕ್ಕೂಟ ಇದನ್ನು ಉಳಿಸಿಕೊಳ್ಳುವ ಅಗತ್ಯ ಎಲ್ಲರ ಮೇಲಿದೆ. ಕಳೆದ ಕೆಲ ವರ್ಷಗಳಿಂದ ಒಕ್ಕೂಟದ ಆಂದೋಲನದ ಮೇಲೆ ಮೋದಿ ಸರ್ಕಾರ ಬಹಳ ವ್ಯವಸ್ಥಿತವಾಗಿ ಆರ್ಥಿಕ, ಸಾಂಸ್ಕೃತಿಕ ವ್ಯವಸ್ಥೆಯ ಮೇಲೆ ದಾಳಿಯಾಗುತ್ತಿದೆ ಎಂದು ಆರೋಪಿಸಿದರು.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ದೆಹಲಿ ಮತ್ತು ಜಾರ್ಖಂಡ ರಾಜ್ಯದ ಮುಖ್ಯಮಂತ್ರಿಗಳನ್ನು ದುರುದ್ದೇಶದಿಂದ ಜೈಲಿಗೆ ಹಾಕಿದರು. ರಾಷ್ಟ್ರಪತಿ ಮೂಲಕ ದೆಹಲಿ ಸರ್ಕಾರವನ್ನು ವಜಾಗೊಳಿಸಲು ಬಿಜೆಪಿ ಹುನ್ನಾರ ನಡೆಸಿದೆ. ಕರ್ನಾಟಕದಲ್ಲಿ 136 ಶಾಸಕರನ್ನು ಒಳಗೊಂಡ ಕಾಂಗ್ರೆಸ್ ಸರ್ಕಾರವನ್ನು ಕೂಡ ವಜಾಗೊಳಿಸಬೇಕು ಎನ್ನುವ ಹುನ್ನಾರವನ್ನು ಬಿಜೆಪಿ ನಡೆಸುತ್ತಿದೆ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ರಾಜ್ಯಪಾಲರು ಕೆಲಸ ಮಾಡುತ್ತಿದ್ದಾರೆ. ರಾಜ್ಯಪಾಲರ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಯತ್ನಿಸಲಾಗುತ್ತಿದೆ ಎಂದು ದೂರಿದರು.ಖಾಸಗಿ ವ್ಯಕ್ತಿ ಟಿ.ಜೆ.ಅಬ್ರಾಹಿಂ ನೀಡಿದ ಮುಡಾ ಪ್ರಕರಣದ ದೂರುನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರವನ್ನು ರಾಜ್ಯಪಾಲರನ್ನು ಕೈಗೊಂಬೆಯನ್ನಾಗಿಸಿ ಮಾಡಿಕೊಂಡು ಸರ್ಕಾರವನ್ನು ಅಲುಗಾಡಿಸುವ ಪ್ರಯತ್ನ ನಡೆಸಿದ್ದು, ಇದು ನಾಚಿಗೇಡಿತನದ ಸಂಗತಿ ಎಂದರು.
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಕೋಮು ಗಲಭೆ ಸೃಷ್ಟಿಸುವ ಕುತಂತ್ರ ನಡೆಸಿದ್ದು ಎಲ್ಲರಿಗೂ ತಿಳಿದಿದೆ. ದೇಶದ್ಯಾಂತ ಒಕ್ಕೂಟ ಉಳಿಸಿ ಆಂದೋಲನ ಹಮ್ಮಿಹೊಳ್ಳಲಾಗಿದೆ ಎಂದರು.ಗೋಷ್ಠಿಯಲ್ಲಿ ನ್ಯಾಯವಾದಿ ಆರ್.ಪಿ.ಪಾಟೀಲ್, ಸಲೀಂ ಖತೀಬ್, ಅನಿಲ್ ದಳವಾಯಿ, ಬಾಬುಲಾಲ್ ಭಾಗವಾನ, ರಾಜೇಶ ಚಿಕ್ಕಬಳ್ಳಾಪುರ, ಬಿ.ಎಂ.ಚಿಕ್ಕನಗೌಡರ ಉಪಸ್ಥಿತರಿದ್ದರು.