ಸಾರಾಂಶ
ಬಳ್ಳಾರಿ: ಕಳೆದ 12 ವರ್ಷಗಳ ಅವಧಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಮಹಿಳೆಯರು ಸದಸ್ಯರಾಗಿದ್ದಾರೆ. ಬಳ್ಳಾರಿ ತಾಲೂಕಿನಲ್ಲಿ ಆರಂಭದಲ್ಲಿ ಬರೀ ₹10ಗಳೊಂದಿಗೆ ಶುರುಗೊಳಿಸಿದ ಉಳಿತಾಯದ ಹಣ ಈವರೆಗೆ ₹23 ಕೋಟಿಗಳಷ್ಟಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ಬಿ. ಗಣೇಶ್ ತಿಳಿಸಿದರು.
ನಗರದ ಗೋವಿಂದಪ್ಪ ಕಲ್ಯಾಣಮಂಟಪದಲ್ಲಿ ಶನಿವಾರ ಜರುಗಿದ ತಾಲೂಕು ಮಟ್ಟದ ಜ್ಞಾನವಿಕಾಸ ಮಹಿಳಾ ಸಮಾವೇಶದಲ್ಲಿ ಮಾತನಾಡಿದರು.ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಆಶಯದಿಂದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಡಾ. ಹೇಮಾವತಿ ಹಗ್ಗಡೆ ಅವರು ರಾಜ್ಯದ ಎಲ್ಲ ಕಡೆ ಮಹಿಳಾ ಸ್ವಸಹಾಯ ಗುಂಪುಗಳನ್ನು ಆರಂಭಿಸಿ, ವಾರಕ್ಕೆ ₹10ಗಳಂತೆ ಉಳಿತಾಯ ಮಾಡುವ, ಈ ಮೂಲಕ ಮಹಿಳಾ ಗುಂಪುಗಳೇ ಅದರ ಪ್ರಯೋಜನ ಪಡೆದುಕೊಳ್ಳುವಂತೆ ಯೋಜನೆಗಳನ್ನು ರೂಪಿಸಿದರು. ಅದರ ಫಲವಾಗಿ ಬಳ್ಳಾರಿ ಜಿಲ್ಲೆಯಲ್ಲಿಯೇ ಉಳಿತಾಯ ಮಾಡಿದ ಹಾಗೂ ಬ್ಯಾಂಕ್‌ಗಳಿಂದ ಪಡೆದ ಸಾಲದ ಮೊತ್ತ ಬರೋಬ್ಬರಿ ₹450 ಕೋಟಿಗಳಷ್ಟಾಗಿದೆ. ಮಹಿಳೆಯರಿಗೆ ಬ್ಯಾಂಕ್‌ನಲ್ಲಿ ಸಾಲ ನೀಡಲು ವೀರೇಂದ್ರ ಹೆಗ್ಗಡೆ ಅವರೇ ಜಾಮೀನುದಾರರಾಗಿದ್ದಾರೆ ಎಂದರು.
ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಸಿಗಬೇಕು. ಉಳಿತಾಯ ಯೋಜನೆಗಳ ಮೂಲಕ ಕುಟುಂಬ ನಿರ್ವಹಣೆಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಆರಂಭಿಸಲಾದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ಗೆ ಸದಸ್ಯರಾಗುವ ಮಹಿಳೆಯರ ಸಂಖ್ಯೆ ದಿನದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮಹಿಳೆಯರು ಜಾಗೃತರಾಗುತ್ತಿದ್ದಾರೆ. ಉಳಿತಾಯದ ಮಹತ್ವ ಅರಿಯುತ್ತಿದ್ದಾರೆ ಎಂದರು.ಸಮಾರಂಭಕ್ಕೆ ಚಾಲನೆ ನೀಡಿದ ಬಿಜೆಪಿ ಹಿರಿಯ ಮುಖಂಡ ಹಾಗೂ 24ನೇ ವಾರ್ಡ್‌ನ ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳುತ್ತಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಸ್ಮರಿಸಿದರಲ್ಲದೆ, ಮಹಿಳಾ ಜಾಗೃತಿ ಕಾರ್ಯದಲ್ಲಿ ಟ್ರಸ್ಟ್ ಮುಂಚೂಣಿಯಲ್ಲಿದೆ ಎಂದು ಸ್ಮರಿಸಿದರು.
ಇಂದಿರಾಗಾಂಧಿ ಜ್ಞಾನವಿಕಾಸ ಕೇಂದ್ರದ ಎಸ್. ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ರೋಹಿತಾಕ್ಷ, ಉದ್ಯಮಿ ಗೋಪಾಲ ರೆಡ್ಡಿ, ವೆಂಕಟೇಶ್, ಸೂರ್ಯಕಲಾ ಟ್ರಸ್ಟ್‌ನ ನಿರ್ದೇಶಕ ಹಾಗೂ ನೃತ್ಯನಿರ್ದೇಶಕ ಅಭಿಷೇಕ್, ಜಯಂತಿ ಹಾಗೂ ಮಹಿಳಾ ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪಾಲ್ಗೊಂಡಿದ್ದರು.ನಗರದ ವೈದ್ಯೆ ಡಾ. ಅರುಣಾ ಕಾಮಿನೇನಿ ಅವರು "ಮಹಿಳೆಯರಲ್ಲಿ ಕಾಡುವ ವಿವಿಧ ಆರೋಗ್ಯ ಸಮಸ್ಯೆಗಳು ಹಾಗೂ ಪರಿಹಾರಗಳು " ಕುರಿತು ತಿಳಿಸಿಕೊಟ್ಟರು. ರೂಪಶ್ರೀ, ಸೌಮ್ಯಗುರುರಾಜ್ ಹಾಗೂ ವೆಂಕಟೇಶ್ ನಿರ್ವಹಿಸಿದರು. ಕಾರ್ಯಕ್ರಮ ಮುನ್ನ ಮಹಿಳೆಯರು ಹಾಗೂ ಮಕ್ಕಳಿಂದ ವಿವಿಧ ಗೀತೆಗಳಿಗೆ ಜಾನಪದ ನೃತ್ಯ ಪ್ರದರ್ಶನ ಜರುಗಿತು.