ಸಾರಾಂಶ
ನಂಜನಗೂಡು : ಶೋಷಿತ ಸಮಾಜಗಳು ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣವೇ ಪ್ರಮುಖ ಅಸ್ತ್ರ, ಆದ್ದರಿಂದ ನಿಮ್ಮ ಮಕ್ಕಳಿಗೆ ತಪ್ಪದೆ ಶಿಕ್ಷಣ ಕೊಡಿಸಿ ಎಂದು ಉಪ ತಹಸೀಲ್ದಾರ್ ಮಹೇಶ್ ಪಾಟೀಲ್ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಸವಿತಾ ಮಹರ್ಷಿ ರವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ವೃತ್ತಿಯೂ ಸಹ ಕನಿಷ್ಠವಲ್ಲ, ಅಂತಹ ಕೀಳರಿಮೆಯನ್ನು ಬಿಟ್ಟು ಸವಿತಾ ಸಮಾಜದವರು ಕೌಶಲ್ಯಗಳನ್ನು ಕಲಿತು ಸಾಮರ್ಥ್ಯ ವೃದ್ಧಿಸಿಕೊಂಡು ಉದ್ಯಮಿಗಳಾಗಬೇಕು, ಅಲ್ಲದೆ ಸವಿತಾ ಸಮಾಜ ಶಿಕ್ಷಣದ ಕೊರತೆಯಿಂದಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದೆ ಉಳಿದಿದೆ. ನಿಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಿ ಜೊತೆಗೆ ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಶಿಕ್ಷಣ ದೊರಕಿಸಿ, ಎಂದು ಸಲಹೆ ನೀಡಿದರಲ್ಲದೆ ಸವಿತಾ ಮಹರ್ಷಿಗಳು ಆಯುರ್ವೇದ ಮತ್ತು ಸಂಗೀತ ಕ್ಷೇತ್ರದಲ್ಲಿ ಅಪಾರ ಕೊಡುಗೆಯನ್ನು ನೀಡಿದ್ದಾರೆ, ಅವರ ತತ್ವ ಆದರ್ಶಗಳನ್ನು ನಾವು ಪಾಲನೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು.
ಮುಖ್ಯ ಭಾಷಣಕಾರರಾಗಿದ್ದ ಬೇವಿನಹಳ್ಳಿ ಉಮೇಶ್ ಮಾತನಾಡಿ, ಸವಿತಾ ಮಹರ್ಷಿಗಳು ತಮ್ಮ ವಿಚಾರಧಾರೆಗಳ ಮೂಲಕ ಜನರಿಗೆ ಜೀವನದ ಮೌಲ್ಯವನ್ನು ತುಂಬಿದ್ದಾರೆ, ಜೊತೆಗೆ ಮೊದಲಿಗೆ ಆಯುರ್ವೇದ ಶಾಸ್ತ್ರವನ್ನು ಹುಟ್ಟಿ ಹಾಕಿದವರು, ಮೊದಲ ಬಾರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂಬ ಉಲ್ಲೇಖ ಸಾಕಷ್ಟು ಗ್ರಂಥಗಳಲ್ಲಿದೆ, ಗಾಯತ್ರಿ ಮಂತ್ರದಲ್ಲೂ ಇದರ ಉಲ್ಲೇಖವಿದೆ, ಸವಿತಾ ಮಹರ್ಷಿಗಳ ನಮ್ಮ ಪಾರಂಪರಿಕ ಶಿಕ್ಷಣ ಎನಿಸಿದ್ದಾರೆ.
ಆದ್ದರಿಂದ ನಮ್ಮ ಪಾರಂಪರಿಕ ಶಿಕ್ಷಣದ ಅರಿವಿನ ಜೊತೆಗೆ ಆಧುನಿಕ ವೈಜ್ಞಾನಿಕ ಶಿಕ್ಷಣವನ್ನು ನಮ್ಮ ಮುಂದಿನ ಪೀಳಿಗೆಗೆ ಕಲಿಸಬೇಕಿದೆ ಇಲ್ಲವಾದಲ್ಲಿ ನಮ್ಮ ಪಾರಂಪರಿಕ ಶಿಕ್ಷಣ ನಶಿಸಿ ಹೋಗಲಿದೆ ಎಂದರು.
ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಕೃಷ್ಣರಾಜು, ಸವಿತಾ ಕೇಸಲಂಕಾರಿ ಸಂಘದ ಅಧ್ಯಕ್ಷ ಪುಟ್ಟರಾಜು, ಮುಖಂಡರಾದ ಶ್ರೀನಿವಾಸ್, ವಿಷಕಂಠ, ರವಿ, ಮಹದೇವ, ಸುರೇಶ್, ನಂಜುಂಡಸ್ವಾಮಿ, ದಸಂಸ ಸಂಚಾಲಕರಾದ ಸುರೇಶ್, ಜನಸಂಗ್ರಾಮ ಪರಿಷತ್ ಅಧ್ಯಕ್ಷ ನಗರ್ಲೆ ವಿಜಯಕುಮಾರ್, ಅಬ್ದುಲ್ ಖಾದರ್, ಚೇತನ್ ಇದ್ದರು.