ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮನುಷ್ಯನ ಬಾಹ್ಯ ಸೌಂದರ್ಯ ಇಮ್ಮಡಿಗೆ ಸವಿತಾ ಸಮಾಜ ಕಾರಣವಾಗಿದೆ. ಆ ಸಮಾಜದ ಅವಿರತ ಶ್ರಮದಿಂದಾಗಿ ನಾವೆಲ್ಲರೂ ಸುಂದರವಾಗಿ ಕಾಣುತ್ತಿದ್ದೇವೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸವಿತಾ ಮಹರ್ಷಿ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಸವಿತಾ ಸಮಾಜವು ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರಬಹುದು. ಆದರೆ ಅದನ್ನು ಮೆಟ್ಟಿ ನಿಲ್ಲಲು ಶಿಕ್ಷಣ ಒಂದೇ ದಾರಿ. ಪೋಷಕರು ತಮ್ಮ ಮಕ್ಕಳನ್ನು ಕನಿಷ್ಠ ಪದವಿವರೆಗೆ ಓದಿಸಲೇಬೇಕು. ಸರ್ಕಾರಿ ಸವಲತ್ತು, ಹಾಸ್ಟೆಲ್ ಸೌಲಭ್ಯ ಮತ್ತು ಮೀಸಲಾತಿ ಬಳಸಿಕೊಂಡು ಉನ್ನತ ಮಟ್ಟದ ಶಿಕ್ಷಣ ಪಡೆಯಬೇಕು ಎಂದರು.

ಸವಿತಾ ಸಮಾಜವು ಕೇವಲ ಒಂದು ಸಮುದಾಯವಲ್ಲ, ಅದು ಇಡೀ ಸಮಾಜಕ್ಕೆ ಸೌಂದರ್ಯ ಮತ್ತು ಶುಚಿತ್ವ ನೀಡುವ ಶ್ರಮಜೀವಿಗಳ ಸಮೂಹ. ಕುಲವೃತ್ತಿಯ ಬಗ್ಗೆ ಕೀಳರಿಮೆ ಬೇಡ. ಮಾಡುವ ಕೆಲಸದಲ್ಲಿ ವೃತ್ತಿಪರತೆ ಇರಲಿ. ಸಾಂಪ್ರದಾಯಿಕ ಕಸುಬಿಗೆ ಆಧುನಿಕತೆಯ ಸ್ಪರ್ಶ ನೀಡಿ ಉದ್ಯಮವನ್ನಾಗಿ ಪರಿವರ್ತಿಸಬೇಕು. ಆಧುನಿಕ ತಂತ್ರಜ್ಞಾನ ಮತ್ತು ನವೀನ ಶೈಲಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಹತ್ತು ಜನರಿಗೆ ಕೆಲಸ ಕೊಡುವ ಮಟ್ಟಕ್ಕೆ ಸಮಾಜದ ಯುವಕರು ಬೆಳೆಯಬೇಕು. ಸರ್ಕಾರದ ವಿವಿಧ ಸಾಲ ಸೌಲಭ್ಯಗಳು ಮತ್ತು ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಹಿರಿಯ ಪತ್ರಕರ್ತ ಟಿ.ತಿಪ್ಪೇಸ್ವಾಮಿ ಉಪನ್ಯಾಸ ನೀಡಿ, ಮನುಷ್ಯನನ್ನು ಸುಂದರಗೊಳಿಸುವ ಕಾಯಕದ ಮೂಲಕ ಸವಿತಾ ಸಮಾಜವು ಜಗತ್ತಿಗೆ ಶ್ರೇಷ್ಠ ಕೊಡುಗೆ ನೀಡುತ್ತಿದೆ ಎಂದರು.

ಸವಿತಾ ಸಮಾಜದ ಸೇವೆ ಕೇವಲ ಉದ್ಯೋಗವಲ್ಲ. ಅದು ಮನುಷ್ಯನ ಜೀವನದ ಮೂರು ಹಂತಗಳಾದ ಜನನ, ವಿವಾಹ ಮತ್ತು ಮರಣದಲ್ಲಿ ಹಾಸುಹೊಕ್ಕಿರುವ ಪವಿತ್ರ ಕಾಯಕವಾಗಿದೆ. ಹುಟ್ಟಿದ ಮಗುವಿನ ಚೌಲ ಕರ್ಮದಿಂದ ಹಿಡಿದು, ಮರಣದ ನಂತರ ಮೋಕ್ಷಕ್ಕೆ ದಾರಿಯಾಗುವ ಅಂತ್ಯಸಂಸ್ಕಾರದ ವಿಧಿಗಳವರೆಗೆ ಈ ಸಮಾಜದ ಸೇವೆ ಅನಿವಾರ್ಯವಾಗಿದೆ ಎಂದರು.

ಬ್ರಹ್ಮನ ಎಡಗಣ್ಣಿನಿಂದ ಉದ್ಭವಿಸಿದ ಸವಿತಾ ಮಹರ್ಷಿಗಳು ಸಾಮವೇದವನ್ನು ರಚಿಸಿದವರು. ದೇವತೆಗಳ ಯಜ್ಞ-ಯಾಗಾದಿ ಸಂದರ್ಭದಲ್ಲಿ ಅವರಿಗೆ ಸಂಸ್ಕಾರ ನೀಡಿದ ಕಾರಣಕ್ಕಾಗಿ ಇವರಿಗೆ ಆಯುರ್ವೇದ, ಸಂಗೀತ ಮತ್ತು ಕುಲಕಸುಬಿನ ಮೂರು ವರಗಳು ಲಭಿಸಿವೆ ಎಂದು ಪುರಾಣಗಳ ಹಿನ್ನೆಲೆಯನ್ನು ಟಿ.ತಿಪ್ಪೇಸ್ವಾಮಿ ಸ್ಮರಿಸಿದರು.

ದೇಶವನ್ನು ಸುದೀರ್ಘ ಕಾಲ ಆಳಿದ ನಂದ ರಾಜವಂಶವು ಸವಿತಾ ಸಮಾಜಕ್ಕೆ ಸೇರಿದೆ. ಅಲ್ಲದೆ, 12ನೇ ಶತಮಾನದ ಶರಣ ಹಡಪದ ಅಪ್ಪಣ್ಣನವರು ಬಸವಣ್ಣನವರ ನಂಬಿಕಸ್ತ ಆಪ್ತರಾಗಿ ಮತ್ತು ಆರ್ಥಿಕ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಬಿಜ್ಜಳ ಮಹಾರಾಜರು ಕಳಚೂರಿ ವಂಶಕ್ಕೆ ಸೇರಿದವರಾಗಿದ್ದು, ಬಸವಣ್ಣನವರಿಗೆ ರಾಜಾಶ್ರಯ ನೀಡಿ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಹಕರಿಸಿದ್ದರು.ಇಂದಿಗೂ ಸವಿತಾ ಸಮಾಜವು ಆಯುರ್ವೇದ, ಸಂಗೀತ ಮತ್ತು ಕಲೆಗಳ ಮೂಲಕ ಜನಸೇವೆಯಲ್ಲಿ ತೊಡಗಿದ್ದು, ಸವಿತಾ ಮಹರ್ಷಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ಪೀರ್, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ಎನ್.ಡಿ.ಕುಮಾರ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ಪ್ರಾಸ್ತಾವಿಕ ಮಾತನಾಡಿದರು. ಸುರೇಂದ್ರನಾಥ ಮತ್ತು ತಂಡ ಗೀತಗಾಯನ ಪ್ರಸ್ತುತ ಪಡಿಸಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ಸವಿತಾ ಸಮಾಜ ಅಧ್ಯಕ್ಷ ಎನ್.ಚಂದ್ರಶೇಖರ್, ಗೌರವ ಅಧ್ಯಕ್ಷ ಜಿ.ಎನ್ ಲಿಂಗರಾಜು, ಕಾರ್ಯಾಧ್ಯಕ್ಷ ಎನ್. ಶ್ರೀನಿವಾಸ್, ತಾಲೂಕು ಅಧ್ಯಕ್ಷ ಆರ್.ಶ್ರೀನಿವಾಸ್, ಕಾರ್ಯದರ್ಶಿ ಆರ್.ನಾಗರಾಜ್, ಮುಖಂಡರಾದ ನರಸಿಂಹಮೂರ್ತಿ, ಕೆ.ವಿ ಪ್ರಸಾದ್ ಬಾಬು, ಸತ್ಯನಾರಾಯಣ, , ವೆಂಕಟೇಶ್, ನಾಗರಾಜು, ಬಾಲಕೃಷ್ಣ, ಗೋಪಾಲ್ ಉಪಸ್ಥಿತರಿದ್ದರು.