ಸಾವಿತ್ರಿ ಬಾಯಿ ಫುಲೆ ತ್ಯಾಗ ಪ್ರತಿಯೊಬ್ಬರು ಸ್ಮರಿಸಿ: ಅಭಿಲಾಷ್

| Published : Jan 05 2025, 01:30 AM IST

ಸಾರಾಂಶ

ದೇಶದ ಎಲ್ಲ ಮಹಿಳೆಯರಿಗಾಗಿ ಕ್ರಾಂತಿಕಾರಿ ಸಾಮಾಜಿಕ ಶಿಕ್ಷಣ ಚಳುವಳಿಯನ್ನು ನಿರ್ಮಿಸಿದರು. ಗರ್ಭಿಣಿ ಹಾಗೂ ಶೋಷಿತ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಸ್ವಂತ ಮನೆಯಲ್ಲಿಯೇ ಶಿಶು ಹತ್ಯೆ ತಡೆಗಟ್ಟುವ ಮನೆ ಆರಂಭಿಸಿದರು. ವರದಕ್ಷಿಣೆ ಮತ್ತು ಬಾಲ್ಯ ವಿವಾಹವನ್ನು ವಿರೋಧಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಜ್ಞಾನದ ಹಸಿವಿಗೆ ಅಕ್ಷರದ ಅಗಳುಗಳನ್ನು ಉಣಬಡಿಸಿದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಅವರ ತ್ಯಾಗವನ್ನು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದು ಮುಖ್ಯ ಶಿಕ್ಷಕ ಅಭಿಲಾಷ್ ತಿಳಿಸಿದರು.

ತಾಲೂಕಿನ ಚಿಣ್ಯ ಸರ್ಕಲ್ ಸಮೀಪದ ‌ಭೂಸಮುದ್ರ ಗೇಟ್ ಬಳಿಯ ವಿಬ್ ಗಯಾರ್ ಪಬ್ಲಿಕ್ ಶಾಲೆಯಲ್ಲಿ ನಡೆದ ಸಾವಿತ್ರಿ ಬಾಯಿಪುಲೆ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ದೇಶದ ಮೊದಲ ಮಹಿಳಾ ಶಿಕ್ಷಕಿ ಹಾಗೂ ದೇಶದ ಹೆಮ್ಮೆಯ ಪ್ರತೀಕ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗೆ ಶ್ರಮಿಸಿದ ಮಹಾನ್ ಸಾಧಕಿ ಎಂದರು.

ದೇಶದ ಎಲ್ಲ ಮಹಿಳೆಯರಿಗಾಗಿ ಕ್ರಾಂತಿಕಾರಿ ಸಾಮಾಜಿಕ ಶಿಕ್ಷಣ ಚಳುವಳಿಯನ್ನು ನಿರ್ಮಿಸಿದರು. ಗರ್ಭಿಣಿ ಹಾಗೂ ಶೋಷಿತ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಸ್ವಂತ ಮನೆಯಲ್ಲಿಯೇ ಶಿಶು ಹತ್ಯೆ ತಡೆಗಟ್ಟುವ ಮನೆ ಆರಂಭಿಸಿದರು. ವರದಕ್ಷಿಣೆ ಮತ್ತು ಬಾಲ್ಯ ವಿವಾಹವನ್ನು ವಿರೋಧಿಸುತ್ತಿದ್ದರು. ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುಕೊಳ್ಳುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮವನ್ನು ಶಾಲೆ ಬಾಲಕಿಯರೇ ನಿರ್ವಹಣೆ ಮಾಡಿದ್ದು ವಿಶೇಷವಾಗಿತ್ತು. ಈ ವೇಳೆ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ಹಾಗೂ ಶಾಲೆಯ ಎಲ್ಲಾ ಶಿಕ್ಷಕಿಯರು ಇದ್ದರು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ನಾಗಮಂಗಲ: ತಾಲೂಕು ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಹಿಂದೆ ಪ್ರಕಟಣೆ ಹೊರಡಿಸಿ ಅರ್ಜಿ ಸಲ್ಲಿಸಲು 2024ರ ಸೆ.20 ಕೊನೆ ದಿನವಾಗಿತ್ತು. ಅದರಂತೆ ಅರ್ಜಿ ಸಲ್ಲಿಸುವ ಅವಧಿ ಮುಗಿದಿದೆಯದರೂ ಕೆಲವು ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳು ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅಂತಹ ಅರ್ಜಿಗಳನ್ನು ಪೂರ್ಣಗೊಳಿಸಲು ಜ.5 ವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಜಿಗಳನ್ನು ಆನ್‌ಲೈನ್ ವೆಬ್‌ಸೈಟ್ ವಿಳಾಸ http://karnemataone. kar.nic.in/abcd/ದಲ್ಲಿ ಪೂರ್ಣಗೊಳಿಸುವಂತೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಸಿ.ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.