ಸಾರಾಂಶ
ತೆಂಕನಿಡಿಯೂರು ಸ.ಪ್ರ.ದ. ಕಾಲೇಜಿನ ಕನ್ನಡ ವಿಭಾಗವು ಐಕ್ಯೂಎಸಿಯೊಂದಿಗೆ ಸಾವಿತ್ರಿಬಾಯಿ ಫುಲೆಯವರ ೧೯೪ನೇ ಜನ್ಮದಿನಾಚರಣೆ ಆಯೋಜಿಸಿತ್ತು.
ಕನ್ನಡಪ್ರಭ ವಾರ್ತೆ ಉಡುಪಿ
ಸಾವಿತ್ರಿಬಾಯಿ ಫುಲೆ ಅವರ ಬಹುಮುಖಿ ಬದುಕು ಈ ನೆಲದ ದಮನಿತರ ಬಿಡುಗಡೆಗಾಗಿಯೇ ಮೀಸಲಾಗಿದೆ ಮಾತ್ರವಲ್ಲ ದಮನಿತರ ಪಾಲಿನ ಎಚ್ಚರದ ಚರಿತ್ರೆಯಾಗಿ ಅವರ ವಿವೇಕವನ್ನು ಕಾಯುವ ಕಾವಲುದೀಪವೂ ಆಗಿದೆ ಎಂದು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಪ್ರಕಾಶ್ ಶೆಟ್ಟಿ ಹೇಳಿದರು.ಅವರು ತೆಂಕನಿಡಿಯೂರು ಸ.ಪ್ರ.ದ. ಕಾಲೇಜಿನ ಕನ್ನಡ ವಿಭಾಗವು ಐಕ್ಯೂಎಸಿಯೊಂದಿಗೆ ಆಯೋಜಿಸಿದ ಸಾವಿತ್ರಿಬಾಯಿ ಫುಲೆಯವರ ೧೯೪ನೇ ಜನ್ಮದಿನಾಚರಣೆಯ ಸಲುವಾಗಿ ವಿಶೇಷ ಉಪನ್ಯಾಸ ನೀಡಿದರು.
ಈಕೆ ಯಮನನ್ನು ಬೆನ್ನಟ್ಟಿ ಗಂಡನ ಆಯುಷ್ಯವನ್ನು ಬೇಡಿತಂದ ಪುರಾಣದ ಸಾವಿತ್ರಿಯಲ್ಲ, ಪತಿಯೊಂದಿಗೆ ಕೂಡಿ ದಮನಿತರ ಕರಾಳ ಬದುಕಿನ ಬಿಡುಗಡೆಗಾಗಿ ಗುದ್ದಾಡಿ ಗೆದ್ದ ಚರಿತ್ರೆಯ ಸಾವಿತ್ರಿ ಎಂದರು.ಅರಿವಿನ ತಾಯಿ ಸಾವಿತ್ರಿಬಾಯಿ ಫುಲೆಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಆರಂಭವಾದ ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಮಾತನಾಡಿ, ಸಾವಿತ್ರಬಾಯಿ ಫುಲೆ ಮಹಿಳಾ ಸಬಲೀಕರಣದ ಮೊದಲ ಚಿಂತಕಿಯಾಗಿದ್ದು, ಅವರು ಹುಟ್ಟಿದ ದಿನವನ್ನು ನಾವು ಅರ್ಥಪೂರ್ಣವಾಗಿಸುವ ಅಗತ್ಯವಿದೆ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಮಾಲಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶೈಕ್ಷಣಿಕ ಸಲಹೆಗಾರ ಡಾ.ರಘು ನಾಯ್ಕ್, ಕನ್ನಡ ವಿಭಾಗದ ಸಂಧ್ಯಾರಾಣಿ, ಶರಿತಾ, ಅರ್ಚನಾ ಹಾಗೂ ಶಾಲಿನಿ ಯು.ಬಿ. ಉಪಸ್ಥಿತರಿದ್ದರು. ನೈನಾ ಶೆಟ್ಟಿ ಸ್ವಾಗತಿಸಿದರು. ಸುಶ್ಮಿತಾ ಶೆಟ್ಟಿ ವಂದಿಸಿದರು. ನೇತ್ರಾವತಿ ನಿರೂಪಿಸಿದರು.