ಸಾರಾಂಶ
ಶಿಕ್ಷಣ ಕ್ಷೇತ್ರದಲ್ಲಿ ಮಹಿಳಾ ಶಿಕ್ಷಕಿಯರ ಶಕೆ ಆರಂಭವಾಗಿದ್ದು, ಮಾತೆ ಸಾವಿತ್ರಿಬಾಯಿ ಫುಲೆ ಆದರ್ಶ ಪ್ರತಿ ಶಿಕ್ಷಕಿಗೂ ಸ್ಫೂರ್ತಿಯಾಗಲಿ ಎಂದು ಶಾಸಕ ಟಿ.ರಘುಮೂರ್ತಿ ಹಾರೈಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಶಿಕ್ಷಣ ಕ್ಷೇತ್ರದಲ್ಲಿ ಇಂದು ಗುಣಾತ್ಮಕ ಶಿಕ್ಷಣ ನೀಡುವ ಎಲ್ಲಾ ವ್ಯವಸ್ಥೆ ಮುಂದುವರೆದಿದೆ. ವಿಶೇಷವಾಗಿ ಮಹಿಳಾ ಶಿಕ್ಷಕಿಯರು ತುಂಬಾ ಆಸಕ್ತಿಯಿಂದ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಸಾವಿತ್ರಿಬಾಯಿ ಫುಲೆಯ ಆದರ್ಶ ಗಳನ್ನು ಮಹಿಳಾ ಶಿಕ್ಷಕಿಯರು ಮೈಗೂಡಿಸಿಕೊಳ್ಳಬೇಕೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.ಅವರು, ಶುಕ್ರವಾರ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ಮಾತೆ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಮಹಿಳಾ ಶಿಕ್ಷಕಿಯರ ಶಕೆ ಆರಂಭವಾಗಿದ್ದು, ಸಾವಿತ್ರಿ ಬಾಯಿ ಫುಲೆಯವರಿಂದ ಇತಿಹಾಸದಲ್ಲಿ ಶಿಕ್ಷಣ ಕ್ಷೇತ್ರದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ. ಅವರ ಜಯಂತಿ ಆಚರಣೆ ಮಾಡುವ ಮೂಲಕ ಎಲ್ಲರೂ ಮತ್ತಷ್ಟು ಸ್ಫೂರ್ತಿ ಪಡೆಯಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ.ನಾಗೇಶ್, ಶಿಕ್ಷಕರಲ್ಲಿ ಮಹಿಳಾ ಸಂಖ್ಯೆ ಹೆಚ್ಚಿದೆ, ವೈಯಕ್ತಿಕವಾಗಿ ಹಲವಾರು ಸಮಸ್ಯೆಗಳು ಶಿಕ್ಷಕಿಯರಿಗೆ ಇದೆ. ಈ ಬಗ್ಗೆ ಹಲವಾರು ಬಾರಿ ಗಮನ ಸೆಳೆದರೂ ನಿರೀಕ್ಷಿತ ಮಟ್ಟದಲ್ಲಿ ನಮಗೆ ಫಲ ದೊರಕಿಲ್ಲ, ಮುಂದಿನ ದಿನಗಳಲ್ಲಿ ಶಿಕ್ಷಕರ ಸಮೂಹಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಸರ್ಕಾರ ಮೇಲೆ ಒತ್ತಡ ಹೇರಲಾಗುವುದು ಎಂದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಿ ಹಾಗೂ ಜಿಲ್ಲಾಧ್ಯಕ್ಷ ಆರ್.ಮಾರುತೇಶ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಮಹಲಿಂಗಪ್ಪ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಮಧು, ಶಾಂತಕುಮಾರಿ, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಖಜಾಂಚಿ ರಂಗನಾಥ, ಚನ್ನಕೇಶವ, ಆಶಾ, ವೀರ ಭದ್ರಪ್ಪ, ಗೀತಾಕುಮಾರಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.