ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಈ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ನಗರದ ಪೆಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಆಚರಿಸಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಹೊಯ್ಸಳೇಶ್ವರ ಕಾಲೇಜಿನ ಉಪನ್ಯಾಸಕಿ ಸುಧಾ, ಮಹಿಳೆಯರಿಗೆ ಇಷ್ಟು ಕಟ್ಟುಪಾಡುಗಳು ಕೇವಲ ಶತಮಾನದ ಹಿಂದೆ ಇತ್ತೇ ಎಂಬುದು ಆಶ್ಚರ್ಯ ಆಗುತ್ತದೆ. ಆಂಗ್ಲ ಆಳ್ವಿಕೆಯಲ್ಲಿ ಬಹಳ ನಿರ್ಲಕ್ಷ್ಯದಿಂದ ನಮ್ಮ ಶೈಕ್ಷಣಿಕ ಪರಿಸ್ಥಿತಿಯನ್ನು ಅವಹೇಳನ ಮಾಡುತ್ತಿದ್ದರು, ರಾಮಾಯಣ ಮಹಾಭಾರತ ಭಗವದ್ಗೀತೆ ಪುಸ್ತಕಗಳು ಬಿಟ್ಟರೆ ಪುಸ್ತಕಗಳೇ ಇಲ್ಲ ಎಂದು ಭಾವಿಸಿದ್ದರು. ಆದರೆ ನಮ್ಮ ದೇಶದಲ್ಲಿ ಹಲವು ಸಾವಿರ ವರ್ಷದ ಹಿಂದೆಯೇ 7500 ಗ್ರಂಥಗಳು ಇದ್ದವು ಎಂಬುದನ್ನು ಅವರೇನು ಬಲ್ಲರು. ಇಂದು ಅದೇ ವಿದೇಶಕ್ಕೆ ನಮ್ಮ ಭಾರತದಿಂದ ಎ ಗುಣಮಟ್ಟದ ಸಿದ್ಧ ಉಡುಪುಗಳು ರಫ್ತಾಗುತ್ತಿವೆ. ಇಂದು ಮಹಿಳೆಯರು ಶಿಕ್ಷಣವನ್ನು ಪಡೆಯುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಸಾಧನೆಯನ್ನ ತೋರಿಸಿದ್ದಾಳೆ, ಈ ಎಲ್ಲ ಸಾಧನೆಗಳಿಗೂ ಸಾವಿತ್ರಿಬಾಯಿ ಫುಲೆ ಸ್ಫೂರ್ತಿ ಎಂದರು.
ಸಂಘದ ಅಧ್ಯಕ್ಷೆ ಕುಸುಮಾ ಮಾತನಾಡಿ, ಸಂಘ ಪ್ರಾರಂಭದಿಂದಲೂ ಸಾವಿತ್ರಬಾಯಿ ಫುಲೆ ಅವರ ಜನ್ಮದಿನವನ್ನು ಸಂಭ್ರಮದಿಂದ ಅದ್ಧೂರಿಯಾಗಿ ಮಾಡಿಕೊಂಡು ಬಂದಿದ್ದೆವು. ಕಳೆದ ಬಾರಿ ಕಾರಣಾಂತರದಿಂದ ಹೆಚ್ಚು ಸಂಭ್ರಮದಿಂದ ಆಚರಿಸಲು ಸಾಧ್ಯವಾಗಲಿಲ್ಲ. ಇದೀಗ ಹಿಂದಿನಂತೆಯೇ ಮತ್ತೆ ಸಂಭ್ರಮದಿಂದ ವಿಶ್ವ ಮಹಿಳಾ ದಿನದಂದು ನಾವು ಆಚರಿಸುತ್ತಿದ್ದೇವೆ ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸುವ ಮಹಿಳೆಯರನ್ನು ಗುರುತಿಸಲಾಗುವುದು ಎಂದರು.ಕಾರ್ಯದರ್ಶಿ ಲಕ್ಷ್ಮಿದೇವಮ್ಮ ನಮ್ಮ ಸಂಘವನ್ನು ಸ್ಥಾಪಿಸಬೇಕಾದರೆ ಕೆಲ ಅಡಚಣೆಗಳು ಎದುರಾದರೂ ಸಹ ಅವುಗಳನ್ನು ಎದುರಿಸಿ ಸಂಘವನ್ನ ಸ್ಥಾಪಿಸಿಕೊಂಡೆವು. ಆನಂತರ ಸರಕಾರವು ಸಹ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಎಲ್ಲಡೆ ಆಚರಿಸುವಂತೆ ಜಾರಿಗೆ ತಂದಿತು, ಎಂದ ಅವರು ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಸಂಘದ ಖಜಾಂಚಿ ಕಾತ್ಯಾಯಿನಿ ಮಾತನಾಡಿ, ಇಂದು ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕಿಯಾಗಿ ಮಹಿಳೆಯರೇ ಹೆಚ್ಚಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾವಿತ್ರಿಬಾಯಿ ಫುಲೆ ಅವರು ನಮ್ಮೆಲ್ಲರಿಗೂ ಸ್ಫೂರ್ತಿದಾಯಕ ಎಂದರು. ಕಾರ್ಯಕ್ರಮಕ್ಕೆ ವಿವಿಧ ಶಾಲೆಗಳಿಂದ ಸಂಘದ ಸದಸ್ಯರು ಆಗಮಿಸಿದ್ದರು.