ಶಿಕ್ಷಣವನ್ನು ನಿರಾಕರಿಸಿದ್ದ ಕಾಲಘಟ್ಟದಲ್ಲಿ ಸಾವಿತ್ರಿಬಾಯಿ ಫುಲೆ ಶೋಷಿತರಿಗೆ ಅಕ್ಷರದ ಬೆಳಕು ನೀಡಿದ ಮೊದಲ ಮಹಿಳಾ ಶಿಕ್ಷಕಿ
ಸಿರುಗುಪ್ಪ: ಸಮಾಜದಲ್ಲಿ ಲಿಂಗಬೇಧದ ಅಸಮಾನತೆಯಲ್ಲಿ ಬಳಲುತ್ತಿದ್ದಾಗ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಿದ್ದ ಕಾಲಘಟ್ಟದಲ್ಲಿ ಸಾವಿತ್ರಿಬಾಯಿ ಫುಲೆ ಶೋಷಿತರಿಗೆ ಅಕ್ಷರದ ಬೆಳಕು ನೀಡಿದ ಮೊದಲ ಮಹಿಳಾ ಶಿಕ್ಷಕಿ ಎಂದು ಶಾಸಕ ಬಿ.ಎಂ. ನಾಗರಾಜ ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ನವದೆಹಲಿ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ ಮತ್ತು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕದಿಂದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆ ಅಂಗವಾಗಿ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಶೈಕ್ಷಣಿಕ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹೆಣ್ಣು ಸಂಸಾರದ ಕಣ್ಣು ಮಾತ್ರವಲ್ಲದೆ, ಜಗದ ಕಣ್ಣಾಗಿದ್ದಾಳೆ. ಅದೆಷ್ಟೋ ಮಹಿಳೆಯರು ಭಾರತದ ಇತಿಹಾಸದಲ್ಲಿ ತಮ್ಮ ತ್ಯಾಗ, ಬಲಿದಾನ ಹಾಗೂ ಅವಿರತ ಹೋರಾಟಗಳಿಂದ ಇತಿಹಾಸದ ಪುಟದಲ್ಲಿ ಚಿರಸ್ಥಾಯಿಯಾಗಿ ಮಿನುಗುತ್ತಿದ್ದಾರೆ. ಸದೃಢ ಹಾಗೂ ಸುಶಿಕ್ಷಿತ ಸಮಾಜ ನಿರ್ಮಾಣವಾಗಬೇಕಾದರೆ ಶಿಕ್ಷಣವೇ ಆಧಾರ ಸ್ತಂಭ. ಸಮಾಜದಲ್ಲಿನ ಅನಿಷ್ಟ ಪದ್ಧತಿಗಳು ದೂರವಾಗಿ ಜನಸಾಮಾನ್ಯರಲ್ಲಿ ಉತ್ತಮ ನಾಗರಿಕತೆಯ ಬೆಳಕು ಎಲ್ಲೆಡೆ ಮೂಡಬೇಕು. ಇಂದು ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ವಿಶಿಷ್ಟ ಛಾಪು ಮಾಡಿಸುತ್ತಿದ್ದಾರೆ. ಸಾಮಾಜಿಕ, ರಾಜಕೀಯ, ಆರ್ಥಿಕ, ವಿಜ್ಞಾನ ತಂತ್ರಜ್ಞಾನ ಹೀಗೆ ಎಲ್ಲೆಡೆ ತಮ್ಮ ಸಾಧನೆಯ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದ್ದಾರೆ. ಇದೊಂದು ಆರೋಗ್ಯಕರ ಬೆಳವಣಿಗೆ ಎಂದೇ ಹೇಳಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತು ಆಕ್ಷರಶಃ ಸತ್ಯ. ಹಿಂದೆಲ್ಲ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದ ಕಾಲಘಟ್ಟದಲ್ಲಿ, ಹೆಣ್ಣು ಮಕ್ಕಳಿಗಾಗಿ ಶಾಲೆಗಳನ್ನು ತೆರೆದು ಮಹಿಳೆಯರ ಕಲ್ಯಾಣಕ್ಕಾಗಿ ದುಡಿದ ಅಕ್ಷರಜ್ಯೋತಿ, ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಸಾಧನೆ, ದೂರದೃಷ್ಟಿ ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಿದೆ ಎಂದರು.
ಅರಳಿಗನೂರು ಸರ್ಕಾರಿ ಪ್ರೌಢ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಲಕ್ಷ್ಮಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, 1830ರಿಂದ ಭಾರತೀಯ ಸಮಾಜದಲ್ಲಿ ಆರಂಭವಾದ ಸುಧಾರಣೆ ಹಾಗೂ ಕ್ರಾಂತಿಕಾರಕ ಬದಲಾವಣೆಗಳು ಈತನಕ ಮುಂದುವರಿದಿವೆ. ಆದರೂ ಸಮಾಜದಲ್ಲಿ ಲಿಂಗ ಅಸಮಾನತೆ ಉಳಿದಿದೆ. ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಬೇಡಿಕೆಯೂ ಹಾಗೆ ಉಳಿದುಕೊಂಡಿದೆ. ಬಾಲ್ಯವಿವಾಹವಾಗಿದ್ದರೂ ಪತಿ ಜ್ಯೋತಿಬಾ ಅವರಿಂದ ಪ್ರೇರಣೆ ಪಡೆದು ಅಕ್ಷರ ಕಲಿತು ಶಿಕ್ಷಕ ತರಬೇತಿ ಮುಗಿಸಿ, ದಲಿತ ಮತ್ತು ಶೋಷಿತ ಸಮುದಾಯದ ಬಾಲಕಿಯರಿಗೆ ಶಾಲೆ ಪ್ರಾರಂಭಿಸಿ, ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರ ಜೀವನ ರೋಚಕವಾದುದು. ಸಮಾಜದ ಬಹಿಷ್ಕಾರ ಹಾಗೂ ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸಿದರೂ ಛಲ ಬಿಡದೇ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ ಸಾವಿತ್ರಿಬಾಯಿಯನ್ನು ಭಾರತೀಯ ಸಮಾಜ ಎಂದೂ ಮರೆಯಬಾರದು ಎಂದು ಹೇಳಿದರು.ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಪ್ರಶಸ್ತಿ ಪ್ರಧಾನ ಹಾಗೂ ಸೇವಾ ನಿರತ ಹಿರಿಯ ಶಿಕ್ಷಕರಿಗೆ ಅಭಿನಂದನ ಪ್ರತ ಸಲ್ಲಿಸಿ ಗೌರವಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗುರಪ್ಪ, ಕ್ಷೇತ್ರ ಸಮನ್ವಾಧಿಕಾರಿ ತಮ್ಮನಗೌಡ ಪಾಟೀಲ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಾಫರ್ ಶರೀಫ್, ದೈಹಿಕ ಶಿಕ್ಷಕರ ಪರೀವೀಕ್ಷಕ ಬಿ.ರಮೇಶ, ವಾಲ್ಮೀಕಿ ವಿದ್ಯಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಸತೀಶ್, ಸರ್ವಧರ್ಮೀಯ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ, ಕುರುಬರ ಸಂಘದ ಅಧ್ಯಕ್ಷ ದಮ್ಮೂರು ಸೋಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ, ಅಧ್ಯಕ್ಷೆ ಎಸ್.ಛಾಯಾದೇವಿ, ಪ್ರಧಾನ ಕಾರ್ಯದರ್ಶಿ ಬಸಮ್ಮ ಚಕ್ರಸಾಲಿ, ಸಂಘದ ಉಪಾಧ್ಯಕ್ಷೆ ಅನೀತಾ, ಸಂಘಟನಾ ಕಾರ್ಯದರ್ಶಿ ಟಿ.ರಾಧಿಕಾ, ರಾಜ್ಯ ಕೋಶ ಅಧ್ಯಕ್ಷೆ ದೊಡ್ಡಬಸಮ್ಮ, ತಾಲೂಕು ಕೋಶಾಧ್ಯಕ್ಷೆ ಬಿ.ಪದ್ಮಾವತಿ, ಕರ್ನಾಟಕ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಚಂದ್ರಕಾಂತ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮನಗೌಡ ಭಾಗವಹಿಸಿದ್ದರು.