ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಹಿಂದೂ ಸಂಘಟನಾ ಮಹಾ ಮಂಡಳಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಸಭಾ ಗಣಪತಿಯ ವಿಸರ್ಜನಾ ಪೂರ್ವದ ಭವ್ಯ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ನಡೆಯಿತು.ನಗರದ ಗಾಂಧಿ ಬಜಾರ್‌ನಲ್ಲಿ ಕಣ್ಣು ಹಾಯಿಸಿದಷ್ಟು ದೂರ ಜನಸ್ತೋಮ, ಕೇಸರಿ ಬಂಟಿಂಗ್ಸ್, ಮುಗಿಲು ಮುಟ್ಟಿದ ಜೈ ಶ್ರೀರಾಮ, ಬಜರಂಗಿ ಮತ್ತು ಗಜಮುಖನ ಘೋಷಣೆಗಳು ಕೇಳಿ ಬಂದವು.
ಗಾಂಧಿ ಬಜಾರ್‌ನಲ್ಲಿ ನಿರ್ಮಿಸಿದ್ದ ದ್ವಾರದಿಂದ ಹಿಡಿದು ರಾಮಣ್ಣ ಶ್ರೇಷ್ಠಿ ಪಾರ್ಕ್‌ವರೆಗೆ ಕೈಯಲ್ಲಿ ಕೇಸರಿ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಯುವಕ, ಯುವತಿಯರು ಉತ್ಸಾಹದಿಂದ ಪಾಲ್ಗೊಂಡರು. ಯುವಕರ ತಂಡವೂ ಹುಲಿ ಹೆಜ್ಜೆ ಹಾಕಿದರು. ಜೈಲುರಸ್ತೆ, ಗೋಪಿ ಮತ್ತು ಅಮೀರ್‌ಅಹ್ಮದ್ ಸರ್ಕಲ್ ಗಳು ಕೇಸರಿಮಯವಾಗಿದ್ದವು. ನೆಹರೂ ರಸ್ತೆಯುದ್ದಕ್ಕೂ ಕೇಸರಿ ಬಂಟಿಂಗ್ಸ್‌ಗಳಿಂದ ಶೃಂಗರಿಸಲಾಗಿತ್ತು.ಕೋಟೆ ಬಡಾವಣೆಯ ಭೀಮೇಶ್ವರ ದೇವಾಲಯದಲ್ಲಿ ಶನಿವಾರ ಬೆಳಗ್ಗೆ 11ಕ್ಕೆ ಸುಮಾರಿಗೆ ಬೆಕ್ಕಿನ ಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಗಣಪತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆ ಜೈನ ಸಮುದಾಯ ಭವನ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕನ ಪ್ರತಿಮೆ, ಬಿ.ಎಚ್. ರಸ್ತೆ, ಎ.ಎ.ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಜೈಲ್ ಸರ್ಕಲ್, ಶಿವ ಮೂರ್ತಿ ಸರ್ಕಲ್, ಸವಳಂಗ ರಸ್ತೆ, ಮಹಾವೀರ ವೃತ್ತ, ಡಿವಿಎಸ್ ವೃತ್ತ ಮಾರ್ಗದ ಮೂಲಕ ಕೋಟೆ ರಸ್ತೆಗೆ ತಲುಪಿ, ದುರ್ಗಾ ಪರಮೇಶ್ವರ ದೇವಾಲಯ ರಸ್ತೆಯಿಂದ ಸಾಗಿ ಕೋಟೆ ರಸ್ತೆಯ ಭೀಮೇಶ್ವರ ದೇವಸ್ಥಾನ ಪಕ್ಕದ ತುಂಗಾ ನದಿಯಲ್ಲಿ ಗಣಪತಿಯನ್ನು ವಿಸರ್ಜಿಸಲಾಯಿತು.ಅಮೀರ್‌ಅಹ್ಮದ್ ವೃತ್ತ, ನೆಹರೂ ರಸ್ತೆ ಸೇರಿದಂತೆ ಹಲವೆಡೆ ಗಣಪತಿಯ ಸ್ವಾಗತಕ್ಕಾಗಿ ಹೂವು, ಹಾರ, ವಾದ್ಯ ಮೇಳಗಳೊಂದಿಗೆ ಭಕ್ತಾದಿಗಳು ಕಾಯುತಿದ್ದರು. ರಾಮಣ್ಣ ಶ್ರೇಷ್ಠಿ ಪಾರ್ಕ್ ಎದುರುಗಡೆಯೇ ಗಂಟೆಗಟ್ಟಲೇ ಮೆರವಣಿಗೆ ನಡೆಯಿತು. ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ವಿವಿಧ ವಾದ್ಯಗೋಷ್ಠಿ ತಂಡದೊಂದಿಗೆ ಹೆಜ್ಜೆ ಹಾಕುತಿದ್ದ ಯುವಕ ಯುವತಿಯರು, ಕುಣಿದು ಕುಪ್ಪಳಿಸಿ ಭಕ್ತಿ ಪ್ರದರ್ಶಿಸಿದರು.
ಸುಮಾರು 200 ಕೆ.ಜಿ.ಯ ಸೇಬಿನ ಹಾರ, ಎಂ. ಶ್ರೀಕಾಂತ್ರವರಿಂದ ಅತ್ಯಾಕರ್ಷಕ ಹೂವಿನಹಾರ, ಜೆಡಿಎಸ್‍ನ ಕೆ.ಬಿ. ಪ್ರಸನ್ನಕುಮಾರ್ ಅವರಿಂದ ಹೂವಿನಹಾರ ನಗರಪಾಲಿಕೆ ಮಾಜಿ ವಿಪಕ್ಷನಾಯಕ ಎಚ್.ಸಿ. ಯೋಗೀಶ್ ಅವರಿಂದ 85 ಕೆ.ಜಿ. ತೂಕದ ಡ್ರೈಫ್ರೂಟ್ಸ್ ಹಾರ ಸೇರಿದಂತೆ ಹಲವು ಸಂಘ-ಸಂಸ್ಥೆಗಳಿಂದ ಬೃಹದಾಕಾರದ ಹಾರಗಳನ್ನು ಸಮರ್ಪಿಸಲಾಯಿತು. ಬಲೂನ್ ಹಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.ದಾರಿಯುದ್ಧಕ್ಕೂ ಸುಮಾರು 6000ಕ್ಕೂ ಹೆಚ್ಚು ವಿವಿಧ ಪೊಲೀಸ್ ಪಡೆಯ ಸಿಬ್ಬಂದಿಗಳು ಎರಡೂ ಬದಿಯಲ್ಲಿ ನಿಂತು ಮೆರವಣಿಗೆ ಸಾಂಗವಾಗಿ ಸಾಗಲು ಸಹಕರಿಸಿದರು.
ಹಲವು ಕಡೆ ಡಿಜೆಗಳನ್ನು ಕೂಡ ಅಳವಡಿಸಿಕೊಂಡಿರುವುದು ಕಂಡು ಬಂತ್ತು. ಇಂದು ಬೆಳಿಗ್ಗೆಯಿಂದಲೇ ಮೆರವಣಿಗೆ ಸಾಗುವ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಷೇಧ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.ಹಲವು ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ನಿಷೇಧಿಸಿದ್ದರಿಂದ ಸ್ಥಳೀಯರು ಸ್ವಲ್ಪಮಟ್ಟಿನ ಕಿರಿಕಿರಿ ಅನುಭವಿಸಬೇಕಾಯಿತು. ಮೆರವಣಿಗೆಯ ಪ್ರಾರಂಭದಲ್ಲೇ ಮಹಾಮಂಡಳಿಯ ಎಲ್ಲಾ ಸದಸ್ಯರ ಜೊತೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಪ ಸದಸ್ಯ ಅರುಣ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಕೆ.ಈ. ಕಾಂತೇಶ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಕಾಂಗ್ರೆಸ್ ಮುಖಂಡರಾದ ಎಂ. ಶ್ರೀಕಾಂತ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕಡಿದಾಳ್ ಗೋಪಾಲ್, ಜೆಡಿಎಸ್ ನಗರಾಧ್ಯಕ್ಷ ದೀಪಕ್‍ಸಿಂಗ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ, ಮಹಿಳಾ ಪ್ರಮುಖರಾದ ಸುರೇಖಾ ಮುರಳೀಧರ್, ಶಿಲ್ಪಾ, ದೀನ್‍ದಯಾಳ್, ನಾಗರಾಜ್ ಕಂಕಾರಿ, ಪಾಲಾಕ್ಷಿ, ಸುರೇಶ್‍ಕುಮಾರ್, ಡಾ.ಎಸ್. ಶ್ರೀಧರ್, ಶಿವಣ್ಣ, ಶಿವಾನಂದ್, ಮಂಜುನಾಥ್ ಬಾಬು, ಪಾಲಿಕೆಯ ಮಾಜಿ ಸದಸ್ಯರಾದ ವಿಶ್ವನಾಥ್, ಪ್ರಭಾಕರ್, ಮಂಜುನಾಥ್ ಸೇರಿದಂತೆ ಹಲವರಿದ್ದರು.
ನಗರದ ಎಲ್ಲಡೆ ಕೇಸರಿಮಯ: ನಗರದ ಎಲ್ಲಡೆ ಕೇಸರಿ ಬಂಟಿಂಗ್ಸ್, ಕೇಸರಿ ಶಾಲು, ಕೇಸರಿ ಪೇಟಕ್ಕೆ ಬೇಡಿಕೆ ಹೆಚ್ಚಾಗಿದ್ದು, ಅಲ್ಲಲ್ಲಿ ಮಾರಾಟ ಮಾಡುತ್ತಿರುವ ದೃಶ್ಯ ಕೂಡ ಕಂಡು ಬಂತು. ಕೇಸರಿ ಬಾವುಟಗಳನ್ನು ಹಿಡಿದು ಯುವಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ದೊಡ್ಡ ಬಾವುಟಗಳನ್ನು ತಿರುಗಿಸಿ ಘೋಷಣೆ ಕೂಗಿ ಸಂಭ್ರಮಿಸಿದರು. ಕುಣಿದು ಕುಪ್ಪಳಿಸಿದ ಯುವಕ-ಯುವತಿಯರು:ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗಿವೆ. ಯುವಕರು - ಯುವತಿಯರು ಹಾಗೂ ಮಹಿಳೆಯರು ಸಹ ಭರ್ಜರಿ ಡ್ಯಾನ್ಸ್ ಮಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದಾರೆ. ಗೋಪಿವೃತ್ತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಸಾವಿರಾರು ಮಂದಿ ಯುವಕ-ಯವತಿಯರು ಹಾಡಿಗೆ ಹಜ್ಜೆ ಹಾಕುತ್ತಿದ್ದರು.
ಪೊಲೀಸರ ಸರ್ಪಗಾವಲುಶಿವಮೊಗ್ಗ ನಗರದಲ್ಲಿ ನಡೆಯುವ ಹಿಂದೂ ಮಹಾಸಭಾ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. 5 ಪೊಲೀಸ್ ಅಧೀಕ್ಷಕರು, 2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 21 ಪೊಲೀಸ್ ಉಪಾಧೀಕ್ಷಕರು, 58 ಪೊಲೀಸ್ ನಿರೀಕ್ಷಕರು, 65 ಪೊಲೀಸ್ ಉಪ ನಿರೀಕ್ಷಕರು, 198 ತರಬೇತಿಯಲ್ಲಿರುವ ಪೊಲೀಸ್ ಉಪ ನಿರೀಕ್ಷಕರು,114 ಸಹಾಯಕ ಪೊಲೀಸ್ ನಿರೀಕ್ಷಕರು, 2259 ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮತ್ತು ಪೊಲೀಸ್ ಕಾನ್ಸ್ಟೆಬಲ್‍ಗಳು, 692 ಗೃಹರಕ್ಷಕ ದಳ ಸಿಬ್ಬಂದಿಗಳು, ಆರ್‌ಎಎಫ್ ತುಕಡಿ 01, ಎಸ್‍ಎಎಫ್ ತುಕಡಿ 01, ಡಿಎಆರ್ ತುಕಡಿ 8, 01, ಕ್ಯೂಆರ್‌ಟಿ ಮತ್ತು 10 ಕೆಎಸ್‍ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು.ಗಣಪನಿಗೆ ವಿವಿಧ ಬಗೆಯ ಹಾರ-ತುರಾಯಿ
ಗಣಪತಿಯ ವಿಸರ್ಜನಾಪೂರ್ವ ರಾಜಬೀದಿ ಉತ್ಸವದಲ್ಲಿ ಗಣೇಶನಿಗೆ ಸುಮಾರು 200 ಕೆ.ಜಿ.ಯ ಸೇಬಿನ ಹಾರ, ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ರವರಿಂದ ಅತ್ಯಾಕರ್ಷಕ ಹೂವಿನಹಾರ, ಜೆಡಿಎಸ್‌ನ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಅವರಿಂದ ಹೂವಿನ ಹಾರ, ನಗರಪಾಲಿಕೆ ಮಾಜಿ ವಿಪಕ್ಷ ನಾಯಕ ಎಚ್.ಸಿ. ಯೋಗೀಶ್ ಅವರಿಂದ 85 ಕೆ.ಜಿ. ತೂಕದ ಡ್ರೈಫ್ರೂಟ್ಸ್ ಹಾರ ಸೇರಿದಂತೆ ಹಲವು ಸಂಘ-ಸಂಸ್ಥೆಗಳಿಂದ ಬೃಹದಾಕಾರದ ಹಾರಗಳನ್ನು ಸಮರ್ಪಿಸಲಾಯಿತು. ಈ ಬಾರಿ ಶಿವಮೊಗ್ಗದಲ್ಲಿ ಎರಡು ಕಡೆ ನೋಟಿನ ಹಾರ ಹಾಕಲಾಗುತ್ತಿದೆ.ವಿವಿಧ ಸಂಘ - ಸಂಸ್ಥೆಗಳಿಂದ ಅನ್ನಸಂತರ್ಪಣೆ
ಮೆರವಣಿಗೆ ಉದ್ದಕ್ಕೂ ವಿವಿಧ ಸಂಘ - ಸಂಸ್ಥೆಗಳು, ಸಾರ್ವಜನಿಕರು ಪ್ರಸಾದ, ಅನ್ನ ದಾಸೋಹ, ಕುಡಿಯಲು ನೀರಿನ ವ್ಯವಸ್ಥೆ ಮಾಡಿದ್ದಾರೆ. ಗಾಂಧಿಬಜಾರ್‌ನ ಬಸವೇಶ್ವರ ದೇವಸ್ಥಾನದ ಬಳಿ ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ಸುಮಾರು 10 ಸಾವಿರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ಮೆರವಣಿಗೆಯ ಉದ್ದಕ್ಕೂ ವಿವಿಧ ಸಂಘ-ಸಂಸ್ಥೆಗಳು ಮಜ್ಜಿಗೆ, ನೀರು, ಪಾನಕ, ಲಾಡು, ಚಿತ್ರಾನ್ನ, ಪಲಾವ್, ಮೊಸರನ್ನ ಸಾರ್ವಜನಿಕರಿಗೆ ವಿತರಿಸಿದರು.ನಗರದೆಲ್ಲೆಡೆ ವಿಶೇಷ ಅಲಂಕಾರ
ಇಡೀ ನಗರದಲ್ಲಿ ಕೇಸರಿ ಅಲಂಕಾರ ಮಾಡಲಾಗಿದ್ದು, ವಿವಿಧ ವೃತ್ತಗಳಲ್ಲಿ ವಿಶೇಷ ಅಲಂಕಾರಗಳನ್ನು ಮಾಡಲಾಗಿದೆ. ಶಿವಪ್ಪನಾಯಕ ವೃತ್ತದಲ್ಲಿ ಹನುಮಂತನ ವಿಗ್ರಹ ಅಮೀರ್ ಅಹ್ಮದ್ ವೃತ್ತದಲ್ಲಿ ಪರಶುರಾಮ, ಮಂಡ್ಲಿಯಲ್ಲಿ ಕುರುಕ್ಷೇತ್ರದ ಸನ್ನಿವೇಶ, ಗಾಂಧಿಬಜಾರ್‌ನ ಮುಖ್ಯದ್ವಾರದಲ್ಲಿ ಸಮುದ್ರ ಮಂಥನ, ಶಿವಪ್ಪನಾಯಕ ವೃತ್ತದ ಬಳಿ ಧರ್ಮಸ್ಥಳ ಮಂಜುನಾಥೇಶ್ವರ ಮಹಾದ್ವಾರ, ಎಂಆರ್‌ಎಸ್ ವೃತ್ತದಲ್ಲಿ ವೀರ ಶಿವಾಜಿ ಮತ್ತು ಶ್ರೀರಾಮಚಂದ್ರ, ಷಣ್ಮುಖನ ಪ್ರತಿಕೃತಿ, ಆಂಜನೇಯನ ಪ್ರತಿಕೃತಿ ಸೇರಿದಂತೆ ವಿವಿಧ ಅಲಂಕಾರಿಕ ಪ್ರತಿಕೃತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಇದನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಅಲ್ಲದೇ, ಇಲ್ಲಿಗೆ ಬಂದು ಸಾರ್ವಜನಿಕರು ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.