ಎಸ್‌ಬಿಐ ದರೋಡೆ ಕೇಸ್‌: 8 ತಂಡ ರಚನೆ

| Published : Sep 18 2025, 01:11 AM IST

ಸಾರಾಂಶ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು 8 ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಡಚಣ

ಪಟ್ಟಣದ ಪಂಡರಾಪುರ ರಸ್ತೆಗೆ ಹೊಂದಿಕೊಂಡಿರುವ ಎಸ್‌ಬಿಐ ಬ್ಯಾಂಕ್‌ ದರೋಡೆ ಪ್ರಕರಣ ತನಿಖೆ ಮುಂದುವರಿದಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು 8 ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಪಟ್ಟಣದಲ್ಲಿಯೇ ಬೀಡುಬಿಟ್ಟಿರುವ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಅವರ ತಂಡ, ಎಸ್‌ಬಿಐ ಬ್ಯಾಂಕ್‌ ಸಿಬ್ಬಂದಿ ವಿಚಾರಗೊಳಪಡಿಸಿ ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಲಕ್ಷ್ಮಣ ನಿಂಬರಗಿ, ಘಟನೆ ಮಂಗಳವಾರ ಸಂಜೆ 6.30ರಿಂದ 7.30ರ ಸುಮಾರು ಬ್ಯಾಂಕ್ ಬಂದ್‌ ಮಾಡಿಕೊಂಡು ಹೋಗುವ ವೇಳೆ ದರೋಡೆ ನಡೆದಿದೆ. ದರೋಡೆಕೋರರಲ್ಲಿ ಒಬ್ಬ ವ್ಯಕ್ತಿ ಮೊದಲೇ ಬ್ಯಾಂಕ್‌ ಒಳಗಡೆ ಬಂದು ಕುಳಿತಿದ್ದನು. ಬ್ಯಾಂಕ್ ಬಂದ್‌ ಮಾಡುವ ಸಮಯದಲ್ಲಿ ಲಾಕರ್ ಓಪನ್ ಇದೆ. ದರೋಡೆಕೋರರು ಬ್ಯಾಂಕಿಗೆ ನುಗ್ಗಿ ಬಂದೂಕಿನಿಂದ ಬೆದರಿಸಿ, ಸಿಬ್ಬಂದಿ ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ ಎಂದರು.ಅಂದಾಜು ₹21 ಕೋಟಿ ಮೌಲ್ಯದ 398 ಪ್ಯಾಕ್‌ (20 ಕೆಜಿ) ಚಿನ್ನ, ₹1.5 ಕೋಟಿ ನಗದು ಹಣ ದರೋಡೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಬಳಸಿರುವ ವಾಹನವೊಂದು ಮಹಾರಾಷ್ಟ್ರದ ಹುಲಜಂತಿಯಲ್ಲಿ ಪತ್ತೆಯಾಗಿದೆ. ಬಿಟ್ಟು ಹೋದ ವಾಹನದಲ್ಲಿ ಸ್ವಲ್ಪ ಪ್ರಮಾಣದ ದುಡ್ಡು, ಬಂಗಾರದ ಪ್ಯಾಕೆಟ್ ಸಿಕ್ಕಿವೆ. ಈಗಾಗಲೇ ದರೋಡೆಕೋರರನ್ನು ಹಿಡಿಯಲು 8 ತನಿಖಾ ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲಿ ದರೋಡೆಕೋರರನ್ನು ಬಂಧಿಸಲಾಗುತ್ತದೆ ಎಂದು ತಿಳಿಸಿದರು.

ಎಟಿಎಂಗೆ ಹೋಗಿ ತಗ್ಲಾಕಿಕೊಂಡ ಗ್ರಾಹಕ:

ಹಣ ಪಡೆಯಲು ಎಟಿಎಂಗೆ ಆಗಮಿಸಿದ್ದ ಗ್ರಾಹಕ ಶ್ರೀಶೈಲ, ಎಟಿಎಂನಿಂದ ಹಣ ಬರದೇ ಹೋದಲ್ಲಿ ಬ್ಯಾಂಕ್‌ನಲ್ಲಿದ್ದ ಅವರನ್ನು ವಿಚಾರಿಸಲು ಒಳಗೆ ಹೋಗುತ್ತಿದ್ದಂತೆ ದರೋಡೆಕೋರರು ಅವರನ್ನು ಮಾತನಾಡದಂತೆ ಎಚ್ಚರಿಸಿ ಸುಮ್ಮನಿರುವಂತೆ ಹೇಳಿದ್ದರು ಎಂದು ಗ್ರಾಹಕ ಶ್ರೀಶೈಲ ಹೇಳಿಕೊಂಡಿದ್ದಾನೆ.

ದರೋಡೆಯಾದ ಬ್ಯಾಂಕ್‌ ಮುಂಭಾಗದಲ್ಲಿ ಆಗಮಿಸಿದ ಗ್ರಾಹಕರು ತಾವು ಅಡವಿಟ್ಟಿರುವ ಚಿನ್ನದ ಪತ್ರಗಳು ತೋರಿಸಿ ತಮ್ಮ ಅಳಲು ತೋಡಿಕೊಂಡಿರುವ ಘಟನೆ ಬುಧವಾರ ನಡೆದಿದೆ. ಎಸ್‌ಬಿಐ ಬ್ಯಾಂಕ್ ಲಾಕರ್‌ನಲ್ಲಿ ಚಿನ್ನಾಭರಣ ಇಟ್ಟಿರುವ ಅಜ್ಜಿ ಸುಶೀಲಾ ಮಾತನಾಡಿ, ನಾನು 300 ಗ್ರಾಂ ಚೈನ್‌, ತಾಳಿ ಸರ, ಬೋರಮಾಳ, ಯಕ್ಸಾರ್, ಮೇಲ್ಗುಂಡು ಆಭರಣ, ನೆಕ್ಲೆಸ್ ಸೇರಿ ಹಲವು ಚಿನ್ನಾಭರಣ ಇಟ್ಟಿರುವೆ. ದರೋಡೆಯಿಂದ ಆತಂಕಕ್ಕೊಳಗಾಗಿದ್ದೇನೆ. ನಾನು ಲಾಕರ್ ಕೀ ತಂದಿದ್ದೀನಿ, ದಯವಿಟ್ಟು ನನ್ನ ಚಿನ್ನ ತೋರಿಸಿ ಬಿಡಿ ಎಂದು ಬ್ಯಾಂಕ್ ಎದುರು ಅಜ್ಜಿ ಗೋಳಾಟ ನಡೆಸಿತ್ತು.

ಇನ್ನೋರ್ವ ಗ್ರಾಹಕ ಶಿಗಣಾಪುರದ ರವಿಗೌಡ ಬಿರಾದಾರ, ನಾವು ಅಡವಿಟ್ಟಿರುವ ಚಿನ್ನಾಭರಣದ ಕತೆ ಏನೆಂದು ಕೇಳಿದಾಗ ಅಲ್ಲಿರುವ ಸಿಬ್ಬಂದಿ ನಿಮ್ಮ ಆಭರಣಕ್ಕೆ ಬ್ಯಾಂಕ್‌ ಹೊಣೆಯಿದೆ. ನೀವು ಯಾವುದೇ ಆತಂಕಕ್ಕೆ ಒಳಗಾಗಬೇಡಿ ಎಂದು ತಿಳಿಸಿದ್ದಾರೆ ಎಂದರು. ಇದೇ ತರಹ ಮೂರ್ನಾಲ್ಕು ಗ್ರಾಹಕರು ತಮ್ಮ ಅಳಲು ತೋಡಿಕೊಂಡ ಘಟನೆ ನಡೆಯಿತು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಬ್ಯಾಂಕ್‌ ಕ್ಯಾಶಿಯರ್‌ ಭಾಗ್ಯಶ್ರೀ ಗೊಟ್ಯಾಳ, ನಾನು ಕೆಲಸ ಮುಗಿಸಿಕೊಂಡು 5.30ಕ್ಕೆ ಮನೆಗೆ ಹೋಗಿದ್ದೆ. ಸಂಜೆ 7.30ರ ಸುಮಾರಿಗೆ ಮೇಲಾಧಿಕಾರಿಗಳು ನನಗೆ ಕರೆ ಮಾಡಿ ಘಟನೆ ಕುರಿತು ಕೇಳಿದಾಗ ನನಗೇನು ಗೊತ್ತಿಲ್ಲ ಎಂದು ಹೇಳಿದ್ದೇನೆ. ಮ್ಯಾನೇಜರ್‌ ಅವರಿಗೆ ಕರೆ ಮಾಡಿ ಕೇಳಿದಾಗ ಅವರು ಎಲ್ಲವೂ ತೆಗೆದುಕೊಂಡು ಹೋದರು ಎಂದು ಹೇಳಿದರಷ್ಟೇ. ನಾನು ಬಂದ್‌ ಮಾಡಿ ಹೋಗುವ ಸಮಯದಲ್ಲಿ ಸುಮಾರು ₹1 ಕೋಟಿಗೂ ಅಧಿಕ ನಗದು ಇರಬಹುದು ಎಂದು ಹೇಳಿದರು.

ಐಜಿಪಿ ಚೇತನಕುಮಾರ ಭೇಟಿ, ಪರಿಶೀಲನೆ:

ಚಡಚಣ ಪಟ್ಟಣದ ಎಸ್‌ಬಿಐ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಉತ್ತರ ವಲಯದ ಐಜಿಪಿ ಚೇತನಕುಮಾರ ಸಿಂಗ್ ರಾಠೋಡ ಭೇಟಿ ನೀಡಿ ಪರಿಶೀಲಿಸಿ ಘಟನೆಯ ವಿವರ ಕಲೆಹಾಕಿದರು. ಈ ವೇಳೆ ಎಸ್‌ಪಿ ಹಾಗೂ ಸಿಬ್ಬಂದಿ ಇತರರು ಇದ್ದರು.