ಕೈಯಲ್ಲೊಂದು ಕೋಲು, ತುಂಡು ಪಂಚೆ, ಮೇಲೊಂದು ಶಲ್ಯ, ಕಣ್ಣಿಗೆ ಕನ್ನಡಕ ತೊಟ್ಟು ವೇಗದ ನಡಿಗೆಯೊಂದಿಗೆ ಥೇಟ್‌ ಗಾಂಧೀಜಿಯವರನ್ನೇ ನೆನಪಿಸುವಂತಹ ವೇಷಧಾರಿ ಬಾಲಕ ವೇದಿಕೆಯತ್ತ ಬಂದಾಗ ಎಲ್ಲರು ದಂಗು, ಹೀಗೆ ಬಂದ ಗಾಂಧಿ ವೇಷಧಾರಿ ಹಿಂದೆ ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಬಂದವರು ದೇಶಭಕ್ತಿ ಘೋಷಣೆ ಹೇಳುತ್ತ ಉಪ್ಪಿನ ಸತ್ಯಾಗ್ರಹ ಮಾಡುವ ಮೂಲಕ ಬ್ರಿಟೀಷರ ಗಮನಸೆಳೆದ ಸಂದರ್ಭ ಸೇರಿದ್ದ ಮಕ್ಕಳ ಮನ ಗೆದ್ದಿತ್ತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೈಯಲ್ಲೊಂದು ಕೋಲು, ತುಂಡು ಪಂಚೆ, ಮೇಲೊಂದು ಶಲ್ಯ, ಕಣ್ಣಿಗೆ ಕನ್ನಡಕ ತೊಟ್ಟು ವೇಗದ ನಡಿಗೆಯೊಂದಿಗೆ ಥೇಟ್‌ ಗಾಂಧೀಜಿಯವರನ್ನೇ ನೆನಪಿಸುವಂತಹ ವೇಷಧಾರಿ ಬಾಲಕ ವೇದಿಕೆಯತ್ತ ಬಂದಾಗ ಎಲ್ಲರು ದಂಗು, ಹೀಗೆ ಬಂದ ಗಾಂಧಿ ವೇಷಧಾರಿ ಹಿಂದೆ ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಬಂದವರು ದೇಶಭಕ್ತಿ ಘೋಷಣೆ ಹೇಳುತ್ತ ಉಪ್ಪಿನ ಸತ್ಯಾಗ್ರಹ ಮಾಡುವ ಮೂಲಕ ಬ್ರಿಟೀಷರ ಗಮನಸೆಳೆದ ಸಂದರ್ಭ ಸೇರಿದ್ದ ಮಕ್ಕಳ ಮನ ಗೆದ್ದಿತ್ತು.ಸರಳ ವೇಷಧಾರಿಯಾಗಿ ಬಂದ ಲಾಲ ಬಹುದ್ದೂರ್‌ ಶಾಸ್ತ್ರೀಯವರ ಜೈ ಜವಾನ್‌, ಜೈ ಕಿಸಾನ್‌ ಘೋಷಣೆ ಮೊಳಗುತ್ತಿದ್ದಂತೆಯೇ ಚೈನಾ, ಪಾಕಿಸ್ತಾನ್‌ ಯುದ್ಧಗಳ ಹಿನ್ನೆಲೆಯಲ್ಲಿ ಭಾರತದ ಪರಾಕ್ರಮ ಸನ್ನಿವೇಶಗಳು, ಆಗಿನ ಪ್ರಧಾನಿಯಾಗಿದ್ದ ಶಾಸ್ತ್ರೀಜಿಯವರ ಗಟ್ಟಿ ನಿಲುವುಗಳು ಕಣ್ಣಿಗೆ ಕಟ್ಟುವಂತೆ ವಿವರಿಸಿದಾಗ ಸೇರಿದ್ದ ಮಕ್ಕಳು ಕರತಾಡನ ಮಾಡುತ್ತ ಲಾಲ್‌ ಬದಹಾದ್ದೂರ್‌ ಶಾಸ್ತ್ರೀಯವರ ಬಹಾದ್ದೂರಿಯ ಗುಣಗಾನಕ್ಕೆ ಮನ ಸೋತಿದ್ದರು.ರಘುಪತಿ ರಾಘವ ರಾಜಾರಾಂ, ವೈಷ್ಣವ ಜನತೋ ಭಜನ್‌, ಸಾಬರಮತಿ ಸಂತ ನಿನಗೆ ನಮನ ಎಂದು ಸಾರುವ ಅರ್ಥಪೂರ್ಣ ಗೀತೆಗಳ ಗಾಯನ, ಶಾಸ್ತ್ರೀಜಿ ಬದುಕಿನ ಸರಳತೆ ಸಾರುವ ಜೈ ಜವಾನ್‌ ಗೀತೆಗಳು ಸೇರಿದ್ದವರಿಗೆ ಮಹಾನ್‌ ಚೇತನಗಳ ವ್ಯಕಿತ್ವ ಸಾರಿದವು.ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರೀಯವರ ಬದುಕಿನ ಸಂದೇಶಗಳನ್ನು ಸಾರುವ ಹಲವಾರು ಇಂತಹ ಸನ್ನಿವೇಶಗಳ ಮರುಸೃಷ್ಟಿಯೊಂದಿಗೆ ಇಲ್ಲಿನ ಪ್ರತಿಷ್ಠಿತ ಶರಣಬಸವೇಶ್ವರ ವಸತಿ ಪಬ್ಲಿಕ್‌ ಶಾಲೆಯಂಗಳದಲ್ಲಿ ಶುಕ್ರವಾರ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿಯನ್ನು ಮಕ್ಕಳ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯ್ತು.ವಿದ್ಯಾರ್ಥಿಗಳಿಂದ ವಿವಿಧ ಭಜನೆಗಳು ಹಾಗೂ ಭಾಷಣಗಳು ಜರುಗಿದವುಕಲಬುರಗಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಎಫ್‌ಟಿಎಸ್‌ಸಿ 1 ಕಲಬುರಗಿ ಎಸ್. ಎಲ್. ಚವ್ಹಾಣ್, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ವಿಜಯಕುಮಾರ್ ಜಟ್ಲಾ ಮಾತನಾಡಿ, ಗಾಂಧೀಜಿ ಹಾಗೂ ಶಾಸ್ತ್ರೀಜಿಯ ಜೀವನಾದರ್ಶಗಳು, ಸತ್ಯ, ಅಹಿಂಸೆ ಮತ್ತು ನ್ಯಾಯದ ಮಹತ್ವ, ಸರಳತೆಯ ಅಗತ್ಯತೆ ವಿವರಿಸಿ, ಶಾಸ್ತ್ರೀಜಿ ಹಾಗೂ ಗಾಂಧೀಜಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು.ಮಕ್ಕಳ ಕವಿ ಎ. ಕೆ. ರಾಮೇಶ್ವರ ಮಾತನಾಡಿ, ಗಾಂಧೀಜಿಯವರೊಂದಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡು, ಗಾಂಧೀಜಿಯವರ ಸರಳತೆ, ಸತ್ಯನಿಷ್ಠೆ ಮತ್ತು ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.ಎಸ್ಬಿಆರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲಎನ್. ಎಸ್. ದೇವರಕಲ್ ಅವರ ಮಾರ್ಗದರ್ಶನದಲ್ಲಿ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿಯ ವಿನೂತನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಹಿರಿಯ ಶಿಕ್ಷಕಿ ಶಾರದಾ ರಾಂಪೂರೆ ಉಪಸ್ತಿತರಿದ್ದರು. ಎಸ್ಬಿಆರ್‌ ಶಾಲೆಯ ನೂರಾರು ಮಕ್ಕಳು, ಬೋಧಕ, ಬೋಧಕೇತರ ಸಿಬ್ಬಂದಿ, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ದಂಡಿ ಯಾತ್ರೆ ನೃತ್ಯರೂಪಕ: ಮಕ್ಕಳಿಂದ ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ಎಂಬಂತೆ ಮಕ್ಕಳೇ ನಿರೂಪಿಸಿ, ಸ್ವಾಗತಿಸಿ ಇಡೀ ಕಾರ್ಯಕ್ರಮ ನಿವ್ರಹಿಸಿದ್ದು ವಿಶೇಷವಾಗಿತ್ತು. ಪಾಲ್ಗೊಂಡಿದ್ದ 500 ಮಕ್ಕಳಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಒಂದಿಲ್ಲೊಂದು ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಾಂಧಿ, ಶಾಸ್ತ್ರೀ ಬದುಕಿನ ಸಂದೇಶಗಳನ್ನು ಆಕರ್ಷಕವಾಗಿ ಕಟ್ಟಿಕೊಟ್ಟರು.

ಎಸ್ಬಿಆರ್‌ ಹೈಸ್ಕೂಲ್‌ ವಿದ್ಯಾರ್ಥಿಗಳು ಗಾಂಧೀಜಿಯವರ ಐತಿಹಾಸಿಕ ದಂಡಿ ಉಪ್ಪಿನ ಸತ್ಯಾಗ್ರಹದ ಮೆರವಣಿಗೆಯನ್ನು ಸಾಂಪ್ರದಾಯಿಕ ಉಡುಗೆ-ತೊಡುಗೆ ಹಾಗೂ ದೇಶಭಕ್ತಿಯ ಘೋಷಣೆಗಳೊಂದಿಗೆ ಮರುಸೃಷ್ಟಿಸಿರುವುದು ಸಮಾರಂಭದ ಮುಖ್ಯ ಆಕರ್ಷಣೆಯಾಗಿತ್ತು. ಮಕ್ಕಳ ಈ ಮನೋಜ್ಞ ಪ್ರಸ್ತುತಿಯು ದಂಡಿ ಯಾತ್ರೆಯ ಐತಿಹಾಸಿಕ ಸನ್ನಿವೇಶವನ್ನು ಸ್ಮರಿಸುವುದರ ಜತೆಗೆ, ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಸಂದೇಶವನ್ನು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳ ಮನದಲ್ಲಿ ಮೂಡಿಸಿತು.