ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ಪಕ್ಷದ ಕಟ್ಟಾಳಾಗಿ ಕೆಲಸ ಮಾಡುತ್ತಿರುವ ಜಿಪಂ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಪ.ಪಂಗಡ ವಿಭಾಗದ ಉಪಾಧ್ಯಕ್ಷ ಹೊಸೂರು ಕಲ್ಲಹಳ್ಳಿ ಶ್ರೀನಿವಾಸ್ ಆಗ್ರಹಿಸಿದರು.ಕಾಂಗ್ರೆಸ್ ಪಕ್ಷದ ವತಿಯಿಂದ ಈ ವರೆಗೆ ಮೈಸೂರು ಜಿಲ್ಲೆಯ ನಾಯಕ ಸಮಾಜದ ಮುಖಂಡರಿಗೆ ವಿಧಾನ ಪರಿಷತ್ ಸ್ಥಾನ ನೀಡದಿರುವುದರಿಂದ ಈ ಬಾರಿ ಅವಕಾಶ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಎಸ್.ಸಿ.ಬಸವರಾಜು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರೆ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಗೆ ಅನುಕೂಲವಾಗಲಿದ್ದು ಈ ವಿಚಾರವನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.ಮುಂಬರುವ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಅನೂಕೂಲವಾಗಬೇಕಾದರೆ ಈ ಭಾಗದ ನಿಷ್ಠಾವಂತ ನಾಯಕ ಸಮಾನದ ಮುಖಂಡರಾದ ಎಸ್.ಸಿ. ಬಸವರಾಜು ಅವರಿಗೆ ಈ ಬಾರಿ ಅವಕಾಶ ನೀಡಬೇಕು. ನಮ್ಮ ಮನವಿಗೆ ಪಕ್ಷ ಮನ್ನಣೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
1987 ರಲ್ಲಿ ಜಿಪಂ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ ಎಸ್.ಸಿ. ಬಸವರಾಜು ಅವರು ಮೂರು ಬಾರಿ ಜಿಪಂ ಸದಸ್ಯರಾಗಿ ಆನಂತರ ಜಿಪಂ ಅಧ್ಯಕ್ಷ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು ಪಕ್ಷದ ವಿವಿಧ ಹುದ್ದೆಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ ಎಂದರು.ಈ ಸಂಬಂಧ ಜಿಲ್ಲೆಯ ವ್ಯಾಪ್ತಿಯ ನಾಯಕ ಸಮಾಜದ ಮುಖಂಡರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಲಾಗಿದ್ದು, ಇದರ ಜತೆಗೆ ಲೋಕೋಪಯೋಗಿ ಸಚಿವ ಸತೀಸ್ ಜಾರಕಿಹೊಳಿ ಅವರ ಗಮನಕ್ಕೂ ತರಲಾಗಿದೆ ಎಂದು ಅವರು ತಿಳಿಸಿದರು.
ಸಾಲಿಗ್ರಾಮ ಕೆ.ಆರ್. ನಗರ ತಾಲೂಕು ಕಾಂಗ್ರೆಸ್ ಪ.ಪಂಗಡ ಘಟಕದ ಅಧ್ಯಕ್ಷ ಸೂಪರ್ ಮಹದೇವನಾಯಕ, ಸಾಲಿಗ್ರಾಮ ಘಟಕದ ಅಧ್ಯಕ್ಷ ಮುಂಜನಹಳ್ಳಿ ನರಸಿಂಹ, ವಿಎಸ್ಎಎಸ್ಎನ್ ಮಾಜಿ ನಿರ್ದೇಶಕ ತಿಪ್ಪೂರು ಗಂಗಾಧರ, ಕಾಂಗ್ರೆಸ್ ಮುಖಂಡರಾದ ಸಿದ್ದಿಕ್ ಪಾಷಾ, ಮುಂಜನಹಳ್ಳಿ ಮಹದೇವ್ ಇದ್ದರು.ಬಿ.ಜೆ.ವಿಜಯಕುಮಾರ್, ಯತೀಂದ್ರಗೆ ಪರಿಷತ್ ಸ್ಥಾನ ನೀಡಲು ಆಗ್ರಹಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಕಳೆದ 22 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಸಂಘಟನೆಯಲ್ಲಿ ಮಂಚೂಣಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಹಿರಿಯ ಪ್ರಧಾನ ಕಾರ್ಯದರ್ಶಿ ಸಿ.ಜೆ. ಪಾಲಾಕ್ಷಗೌಡ ಒತ್ತಾಯಿಸಿದ್ದಾರೆ.ತಮ್ಮ ರಾಜಕೀಯ ಜೀವನದಲ್ಲಿ ಎನ್.ಎಸ್.ಯು.ಐ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡುವುದರ ಜತೆಗೆ ಪ್ರಸ್ತುತ 10 ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರಿಗೆ ಸ್ಥಾನ ನೀಡಿದರೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಅನೂಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ತಮ್ಮ ಸಂಘಟನಾ ಚಾತುರ್ಯದ ಮೂಲಕ ಮೈಸೂರು ಜಿಲ್ಲೆಯಲ್ಲದೆ ಹಾಸನ, ಕೊಡಗು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿಯೂ ಪರಿಚಿತರಾಗಿರುವ ಡಾ.ಬಿ.ಜೆ. ವಿಜಯಕುಮಾರ್ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡುವ ವಿಶ್ವಾಸವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇವರಿಗೆ ರಾಜಕೀಯ ಸ್ಥಾನಮಾನ ನೀಡಿದರೆ ಸರ್ಕಾರದ ಜನಪರವಾದ ಕಾರ್ಯಕ್ರಮ ಮತ್ತು ಯೋಜನೆಗಳು ಅರ್ಹರ ಮನೆ ಬಾಗಿಲಿಗೆ ತಲುಪಲು ಸಹಕಾರಿ ಆಗಲಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆಗೂಡಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರನ್ನು ಭೇಟಿಯಾಗಿ ಡಾ.ಬಿ.ಜೆ. ವಿಜಯಕುಮಾರ್ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡುವಂತೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.ಇವರೊಂದಿಗೆ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮ್ಯ ಅವರಿಗೂ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ.