ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಸಂಬಧ ಉಪವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶ ಸಂಗ್ರಹಕ್ಕಾಗಿ ನಡೆಸಲಾಗುತ್ತಿರುವ ಸಮೀಕ್ಷೆ ಕುರಿತ ಪ್ರಗತಿ ಪರಿಶೀಲನೆ ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಸಮ್ಮುಖದಲ್ಲಿ ಬುಧವಾರ ನಡೆಯಿತು.ನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ ಸಂಬಂಧ ಪ್ರಗತಿಯ ವಿವರವನ್ನು ಪರಾಮರ್ಶಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸಮೀಕ್ಷಾ ಕಾರ್ಯ ಸಂಬಂಧ ಕೈಗೊಳ್ಳಲಾಗಿರುವ ಕ್ರಮಗಳು ಹಾಗೂ ಈವರೆಗಿನ ಪ್ರಗತಿ ಕುರಿತು ಮಾಹಿತಿ ಪಡೆದರು. ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್ ಮಾತನಾಡಿ, ಜಿಲ್ಲೆಗೆ ಆಗಮಿಸಿ ನಾನೂ ಸಹ ಸಮೀಕ್ಷೆ ಕಾರ್ಯ ನಡೆಸುತ್ತಿರುವ ಸ್ಥಳಕ್ಕೆ ಖುದ್ದು ಭೇಟಿ ಪರಿಶೀಲಿಸಿದ್ದೇನೆ. ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಸಮೀಕ್ಷೆ ಸುಗಮವಾಗಿ ನಡೆಯುತ್ತಿದೆ ಎಂದರು.
ಸಮೀಕ್ಷೆ ವೇಳೆ ಜನರು ನೈಜ ಮಾಹಿತಿ ನೀಡಬೇಕು. ಸಮೀಕ್ಷಾ ಸಂದರ್ಭದಲ್ಲಿ ಹೇಳಲಾಗುವ ಮಾಹಿತಿಯನ್ನು ಮಾತ್ರ ನಮೂದು ಮಾಡಿಕೊಳ್ಳಲಾಗುತ್ತದೆ. ಮಾಹಿತಿ ನೀಡುವುದರಿಂದ ಯಾವುದೇ ತೊಂದರೆಯಿಲ್ಲ. ಸರ್ಕಾರದ ಸೌಲಭ್ಯಗಳು ಜಾತಿ ಪ್ರಮಾಣ ಪತ್ರ ರದ್ದಾಗುತ್ತದೆ ಎಂಬ ತಪ್ಪು ಕಲ್ಪನೆ ಬೇಡ. ಸಮೀಕ್ಷೆ ಮುಗಿದ ನಂತರ ಮಾಹಿತಿ ನೀಡಿದವರಿಗೆ ಎಸ್ಎಂಎಸ್ ಮೂಲಕ ಲಿಂಕ್ ಕಳುಹಿಸಲಾಗುತ್ತದೆ. ಈ ಲಿಂಕನ್ನು ಒತ್ತಿದ್ದಲ್ಲಿ ಸಮೀಕ್ಷೆ ವೇಳೆ ನೀಡಲಾಗಿರುವ ಮಾಹಿತಿ ವೀಕ್ಷಿಸಬಹುದು. ಗಣತಿದಾರರು ಏನಾದರೂ ತಪ್ಪಾಗಿ ದಾಖಲು ಮಾಡಿಕೊಂಡಿರುವುದು ಕಂಡುಬಂದರೆ ದೂರವಾಣಿ ಮೂಲಕ ತಿಳಿಸಿ ಸರಿಪಡಿಸಿಕೊಳ್ಳಲು ಅವಕಾಶವಿರುತ್ತದೆ ಎಂದರು.17 ಲಕ್ಷ ಮನೆಗಳ ಅಂದಾಜು:
ರಾಜ್ಯದಲ್ಲಿ ಈಗಾಗಲೇ 17 ಲಕ್ಷ ಪರಿಶಿಷ್ಟ ಜಾತಿಯ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗಿದೆ. ಒಟ್ಟಾರೆ 22 ಲಕ್ಷ ಪರಿಶಿಷ್ಟ ಜಾತಿ ಮನೆಗಳು ಇರಬಹುದೆಂದು ಅಂದಾಜಿಸಲಾಗಿದೆ. ಇನ್ನು ಒಂದುವಾರದಲ್ಲಿ ಸಮೀಕ್ಷೆ ಪೂರ್ಣವಾಗಲಿದೆ ಎಂದರು.ಸಮೀಕ್ಷೆ ಸಂಬಂಧ ಯಾವುದೇ ಮಾಹಿತಿ ಸಂದೇಹಗಳಿದ್ದಲ್ಲಿ ಸಹಾಯವಾಣಿ ಸಂಪರ್ಕಿಸಬಹುದು. ಜಿಲ್ಲೆಯಲ್ಲಿಯೂ ಸಹಾಯವಾಣಿ ಲಭ್ಯವಿದೆ. ರಾಜ್ಯಮಟ್ಟದಲ್ಲಿಯೂ ಸಹಾಯವಾಣಿ ಸಂಖ್ಯೆ 9481359000 ಇದ್ದು 24*7 ಅವಧಿಯಲ್ಲಿಯೂ ಕಾರ್ಯನಿರ್ವಹಿಸಲಿದೆ. ಯಾವುದೇ ಸಮಯದಲ್ಲಿ ಸಹಾಯವಾಣಿಗೆ ಕರೆ ಮಾಡಿದರೆ ಸ್ವೀಕರಿಸಿ ಸ್ಪಂದಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗ ಮೇಜರ್ ಪಿ.ಮಣಿವಣ್ಣನ್ ತಿಳಿಸಿದರು.ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಸಮೀಕ್ಷೆ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶಿಕ್ಷಕರು ಗಣತಿದಾರರಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದು ಸಮೀಕ್ಷೆ ಕಾರ್ಯದಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು. ಸಭೆಗೆ ವಿವರ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮುನಿರಾಜು ಜಿಲ್ಲೆಯಲ್ಲಿ 1,135 ಗಣತಿದಾರರು ಸಮೀಕ್ಷೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ 58,485 ಪರಿಶಿಷ್ಟ ಜಾತಿಯವರ ಕುಟುಂಬಗಳಿವೆ. 1,86,389 ಪರಿಶಿಷ್ಟ ಜಾತಿಯಲ್ಲದವರ ಕುಂಟುಂಬಗಳಿವೆ. ಈಗಾಗಲೇ 39,791 ಪರಿಶಿಷ್ಟ ಜಾತಿಯವರ ಮನೆಗಳ ಸರ್ವೆ ಪೂರ್ಣವಾಗಿದೆ. 1,56,528 ಪರಿಶಿಷ್ಟಜಾತಿಯಲ್ಲದವರ ಮನೆಗಳ ಭೇಟಿ ಕಾರ್ಯ ಪೂರ್ಣವಾಗಿದೆ. ಒಟ್ಟಾರೆ ಶೇ.68ರಷ್ಟು ಸಮೀಕ್ಷಾ ಕಾರ್ಯ ಮುಗಿದಿದೆ. ನಿಗದಿತ ವೇಳೆಗೆ ಶೇ.100ರಷ್ಟು ಸರ್ವೆ ಕಾರ್ಯ ಪೂರ್ಣವಾಗಲಿದೆ ಎಂದರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಹೆಚ್.ವಿ. ಚಂದ್ರು, ನಗರಸಭೆ ಅಧ್ಯಕ್ಷ ಸುರೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.ಸಭೆಗೂ ಮೊದಲು ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ, ಇತರೆ ಭಾಗಗಳಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯವನ್ನು ಖುದ್ದು ವೀಕ್ಷಿಸಿದರು. ಗಣತಿದಾರರು ಹೇಗೆ ಸಮೀಕ್ಷೆ ನಡೆಸುತ್ತಿದ್ದಾರೆ ಎಂಬುದನ್ನು ಗಣತಿದಾರರ ಜೊತೆಯಲ್ಲಿಯೇ ಇದ್ದು ವಿವರವಾಗಿ ಪರಿಶೀಲಿಸಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮುನಿರಾಜು, ತಹಸೀಲ್ದಾರ್ ಐ.ಇ.ಬಸವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಇದ್ದರು.