ಸಾರಾಂಶ
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳು ದಾಖಲಾದ 60 ದಿನಗಳೊಳಗಾಗಿ ಚಾರ್ಜ್ ಶೀಟ್ ಸಲ್ಲಿಕೆಯಾಗದಿರುವ ಪ್ರಕರಣಗಳನ್ನು ಗುರುತಿಸಿ, ಸಭೆಗೆ ಮಂಡಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಶಿವಮೊಗ್ಗ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳು ದಾಖಲಾದ 60 ದಿನಗಳೊಳಗಾಗಿ ಚಾರ್ಜ್ ಶೀಟ್ ಸಲ್ಲಿಕೆಯಾಗದಿರುವ ಪ್ರಕರಣಗಳನ್ನು ಗುರುತಿಸಿ, ಸಭೆಗೆ ಮಂಡಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ (ದೌರ್ಜನ್ಯ ಪ್ರತಿಬಂಧ) ಸಮಿತಿ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂತ್ರಸ್ತರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಬೇಕಾದ ಪರಿಹಾರಧನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು. ದಾಖಲಾಗುತ್ತಿರುವ ದೌರ್ಜನ್ಯ ಪ್ರಕರಣಗಳ ಕುರಿತು ಪ್ರತಿ ತಿಂಗಳ ಸಭೆಯಲ್ಲಿ ಚರ್ಚಿಸುವ ಅಗತ್ಯವಿದೆ. ಜಿಲ್ಲೆಯಾದ್ಯಂತ ಕಂಡುಬರುವ ಬಾಲ್ಯವಿವಾಹ ಪ್ರಕರಣಗಳ ನಿಯಂತ್ರಣಕ್ಕಾಗಿ ಇಲಾಖೆಗಳಿಂದ ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮಗಳ ಉಸ್ತುವಾರಿ ಹಾಗೂ ಬಾಲ್ಯವಿವಾಹಗಳ ನಿಯಂತ್ರಿಸುವಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ. ಗುರುತಿಸಲಾಗುತ್ತಿರುವ ಬಾಲಗರ್ಭಿಣಿಯರಲ್ಲಿಯೂ ಪರಿಶಿಷ್ಟ ಜಾತಿ ಜನಾಂಗದವರೆ ಹೆಚ್ಚಾಗಿರುವುದು ಅತ್ಯಂತ ನೋವಿನ ಸಂಗತಿ. ಈ ವಿಷಯದಲ್ಲಿ ಸಂಬಂಧಿಸಿದ ಸಮುದಾಯದ ಮುಖಂಡರು ವಿಶೇಷ ಗಮನಹರಿಸುವಂತೆ ತಾಕೀತು ಮಾಡಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಸರ್ಕಾರಿ ಅಭಿಯಂತರಾದ ಪುಷ್ಪಾ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಲ್ಲೇಶಪ್ಪ, ಜಾಗೃತಿ ಸಮಿತಿ ಸದಸ್ಯರಾದ ಶಿವಬಸಪ್ಪ, ರುದ್ರಪ್ಪ, ಬಸವರಾಜು ಡಿ.ಬೂದಿಗೆರೆ, ಎಂ.ಮಂಜುನಾಥ್, ಎಂ.ಅಣ್ಣಪ್ಪ, ನಾಗರಾಜ, ಓಂಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಇದೇ ವೇಳೆ ಜಾಗೃತಿ ಸಮಿತಿಗೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಗುರುತಿನ ಚೀಟಿಯನ್ನು ವಿತರಿಸಿದರು. ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ದೌರ್ಜನ್ಯ ಪ್ರಕರಣಗಳನ್ನು ಅವಧಿಪೂರ್ಣಗೊಳ್ಳುವ ಮುನ್ನವೇ ನಿಯಮಾನುಸಾರ ವಿಚಾರಣೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜಾತಿನಿಂದನೆಗೆ ಸಂಬಂಧಿಸಿದಂತೆ ದಾಖಲಾಗುವ ಪ್ರಕರಣಗಳಲ್ಲಿ ಅಗತ್ಯ ಸಾಕ್ಷ್ಯಾಧಾರಗಳೊಂದಿಗೆ ರುಜುವಾತಾಗುವ ಪ್ರಕರಣಗಳು ಶೇ.೩ರಷ್ಟು ಮಾತ್ರ. ದೂರುದಾರರ ಹೇಳಿಕೆಗಳು, ಸಮರ್ಥನೀಯವಲ್ಲದ ಮತ್ತಿತರ ಕಾರಣಗಳಿಂದಾಗಿ ಪ್ರಕರಣಗಳು ಮುಕ್ತಾಯಗೊಳ್ಳುತ್ತವೆ. - ಜಿ.ಕೆ.ಮಿಥುನ್ ಕುಮಾರ್, ಎಸ್ಪಿಜಿಲ್ಲೆಯ ನ್ಯಾಯಾಲಯದಲ್ಲಿ ದಾಖಲಾಗಿರುವ ಪರಿಶಿಷ್ಟರ ಮೇಲಿನ ಒಟ್ಟು ದೌರ್ಜನ್ಯಗಳ ಪೈಕಿ ಸುಮಾರು ೧೫೮ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಉಳಿದ ಪ್ರಕರಣಗಳ ಸ್ಥಿತಿಗತಿಗಳ ಕುರಿತು ಮುಂದಿನ ಸಭೆಯಲ್ಲಿ ವಿವರಗಳನ್ನು ಮಂಡಿಸಲಾಗುವುದು. ಜಾತಿನಿಂದನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಆಸಕ್ತರು ಮೊಕದ್ದಮೆಯ ವಿವರಗಳನ್ನು ಮೊಬೈಲ್ ಆಪ್ ಮೂಲಕ ವೀಕ್ಷಿಸಬಹುದಾಗಿದೆ.
- ಪುಷ್ಪಾ, ಸರ್ಕಾರಿ ಅಭಿಯಂತರರು.