ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ 26 ರಂದು ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುವ ಸಂದರ್ಭದಲ್ಲಿ ಈ ಮಾಹಿತಿ ನೀಡಿದರು.

ಮಡಿಕೇರಿ: ಪರಿಶಿಷ್ಟ ಪಂಗಡ ಸಮಾಜಗಳ ಸಮಸ್ಯೆ ಆಲಿಸಿ ಪರಿಹರಿಸುವಲ್ಲಿ 15 ದಿನದೊಳಗೆ ಕುಂದುಕೊರತೆ ಸಭೆ ಆಹ್ವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ 26 ರಂದು ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುವ ಸಂದರ್ಭದಲ್ಲಿ ಈ ಮಾಹಿತಿ ನೀಡಿದರು. ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಕೆ.ಎನ್‌. ಅಶೋಕ್ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ವ್ಯವಸ್ಥಾಪಕರು ಇಲ್ಲದೆ ಯಾವುದೇ ಕಾರ್ಯಕ್ರಮಗಳು ಸಮಾಜದವರಿಗೆ ತಲುಪುತ್ತಿಲ್ಲ. ಹೆಸರಿಗೆ ಮಾತ್ರ ನಿಗಮ ಇದ್ದು, ಕಳೆದ ಮೂರು ವರ್ಷದಿಂದ ಸಮಾಜಕ್ಕೆ ಅನುಕೂಲ ಆಗಿಲ್ಲ. ಆದ್ದರಿಂದ ಈ ಸಂಬಂಧ ಐಟಿಡಿಪಿ ಇಲಾಖಾ ಅಧಿಕಾರಿಯವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಪ್ರಭಾರ ವಹಿಸಬೇಕು ಎಂದು ಕೋರಿದರು.

ಕುಂದುಕೊರತೆ ಸಭೆಗೆ ತಾಲೂಕು ಮಟ್ಟದ ಐಟಿಡಿಪಿ ಇಲಾಖಾ ಅಧಿಕಾರಿಗಳನ್ನು ಸಹ ಆಹ್ವಾನಿಸಬೇಕು ಎಂದು ಇದೇ ಸಂದರ್ಭದಲ್ಲಿ ಅಶೋಕ್ ಅವರು ತಿಳಿಸಿದರು. ಸರ್ಕಾರ 26 ರಂದು ವಾಲ್ಮೀಕಿ ಜಯಂತಿ ಆಚರಿಸಲು ನಿರ್ಧರಿಸಿದ್ದು, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಿರ್ದೇಶನ ನೀಡಿದರು. ಐಟಿಡಿಪಿ ಇಲಾಖಾ ಅಧಿಕಾರಿ ಭಾಗೀರಥಿ ಅವರು ವಾಲ್ಮೀಕಿ ಜಯಂತಿ ಕಾರ್ಯಕ್ರಮ ಸಂಬಂಧ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಜೊತೆಗೆ ಮಾಜಿ ಸೈನಿಕರು, ಕೃಷಿಕರು, ಪೌರಕಾರ್ಮಿಕರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಕುಡಿಯರ ಮುತ್ತಪ್ಪ ಅವರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪರಿಶಿಷ್ಟ ವರ್ಗದವರನ್ನು ಗೌರವಿಸುವಂತಾಗಬೇಕು ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಿರಂಜನ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಹೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎ.ಗಣಪತಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಹಿರಿಯ ಪೊಲೀಸ್ ಇನ್ಸೆಪೆಕ್ಟರ್ ಐ.ಪಿ.ಮೇದಪ್ಪ, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಮಂಜುನಾಥ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಜಿ.ಬಿಲಾಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಐಟಿಡಿಪಿ ಇಲಾಖೆಯ ವ್ಯವಸ್ಥಾಪಕರಾದ ದೇವರಾಜು, ಬಸವನಹಳ್ಳಿ ಗಿರಿಜನ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷರಾದ ಎಸ್.ಆರ್.ಅರುಣ್ ರಾವ್, ವಾಲ್ಮೀಕಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ವಾಲ್ಮೀಕಿ ಸಮಾಜದ ಪ್ರಮುಖರು ಇದ್ದರು.