ನಾಳೆ ಎಸ್ಸಿ-ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಪ್ರಶಸ್ತಿ ಪ್ರದಾನ

| Published : Nov 28 2024, 12:32 AM IST

ಸಾರಾಂಶ

ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಪತ್ರಿಕಾ ಸಂಪಾದಕರ ಸಂಘದಿಂದ ಬೆಂಗಳೂರಿನ ಕುಮಾರ ಕೃಪ ರಸ್ತೆಯ ಗಾಂಧಿ ಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ವಾರ್ಷಿಕ ದತ್ತಿ ಪ್ರಶಸ್ತಿ ಹಾಗೂ ಸಂಪಾದಕರಿಗೆ ಸಂಘದ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ನ.29ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಂಘದ ರಾಜ್ಯ ಸಹ ಕಾರ್ಯದರ್ಶಿ ಆರ್.ರವಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಪತ್ರಿಕಾ ಸಂಪಾದಕರ ಸಂಘದಿಂದ ಬೆಂಗಳೂರಿನ ಕುಮಾರ ಕೃಪ ರಸ್ತೆಯ ಗಾಂಧಿ ಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ವಾರ್ಷಿಕ ದತ್ತಿ ಪ್ರಶಸ್ತಿ ಹಾಗೂ ಸಂಪಾದಕರಿಗೆ ಸಂಘದ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ನ.29ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಂಘದ ರಾಜ್ಯ ಸಹ ಕಾರ್ಯದರ್ಶಿ ಆರ್.ರವಿ ತಿಳಿಸಿದರು.

ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಘದ ರಾಜ್ಯಾಧ್ಯಕ್ಷ ಚೆಲುವರಾಜು ಅಧ್ಯಕ್ಷತೆಯಲ್ಲಿ ಸಿಎಂ ಸಿದ್ದರಾಮಯ್ಯ ಸಮಾರಂಭ ಉದ್ಘಾಟಿಸಲಿದ್ದಾರೆ. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ದಿಕ್ಸೂಚಿ ಭಾಷಣ ಮಾಡುವರು. ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ಮಾಜಿ ಸಚಿವ ಎಚ್.ಆಂಜನೇಯ, ವಾರ್ತಾ ಮತ್ತು ಸಾರ್ವಜನಿಕ ಸಂಪಕ್ಕ ಇಲಾಖೆ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಹಿರಿಯ ಪತ್ರಕರ್ತ ಎಚ್.ಬಿ.ಮದನ್ ಗೌಡ, ಬೆಂಗಳೂರು ಪ್ರೆಸ್ ಕ್ಲಬ್ ಕಾರ್ಯದರ್ಶಿ ಶಿವಕುಮಾರ ಬೆಳ್ಳಿತಟ್ಟೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ-2024ನ್ನು ಪತ್ರಕರ್ತ ಜಿ.ಎನ್.ಮೋಹನ್‌, ಬಿ.ರಾಚಯ್ಯ ದತ್ತಿ ಪ್ರಶಸ್ತಿಯನ್ನು ಬಿ.ಎಂ.ಹನೀಫ್‌, ಪ್ರೊ.ಬಿ.ಕೃಷ್ಣಪ್ಪ ದತ್ತಿ ಪ್ರಶಸ್ತಿಯನ್ನು ಡಿಎಸ್ಸೆಸ್ ರಾಜ್ಯ ಸಂಚಾಲಕ, ಹಿರಿಯ ಪತ್ರಕರ್ತ ಮಾವಳ್ಳಿ ಶಂಕರ್, ಬಿ.ಬಸವಲಿಂಗಪ್ಪ ದತ್ತಿ ಪ್ರಶಸ್ತಿಯನ್ನು ಪತ್ರಕರ್ತೆ ಮಂಜುಳಾ ಹುಲಿಕುಂಟೆ ಅವರಿಗೆ ಪ್ರದಾನ ಮಾಡಲಾಗುವುದು. ದಾವಣಗೆರೆ ವರದಿಗಾರರ ಕೂಟದ ಮಾಜಿ ಅಧ್ಯಕ್ಷ, ಶಿವಮೊಗ್ಗ ಮಲ್ನಾಡವಾಣಿ ಸಂಪಾದಕ ಕೆ.ಏಕಾಂತಪ್ಪ, ತುಮಕೂರಿನ ವಿಶಾಲವಾರ್ತೆ ಸಂಪಾದಕ ಸೊಗಡು ವೆಂಕಟೇಶ, ಮಂಡ್ಯದ ಜನೋದಯ ಸಂಪಾದಕಿ ಮಂಜುಳಾ ಕಿರುಗಾವಲು, ಹೈದ್ರಾಬಾದ್ ಕರ್ನಾಟಕದ ಮುಂಜಾವು ಪತ್ರಿಕೆ ಸಂಪಾದಕ ಸುರೇಶ ಸಿಂಧೆಯವರಿಗೆ ಸಂಘದ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ರಾಜ್ಯದ ಸುಮಾರು 500ಕ್ಕೂ ಹೆಚ್ಚು ಸಂಪಾದಕರು ಭಾಗವಹಿಸುವರು ಎಂದು ಆರ್‌.ರವಿ ತಿಳಿಸಿದರು.

ಸಂಘದ ಸದಸ್ಯರು, ವಿವಿಧ ಪತ್ರಿಕೆಗಳ ಸಂಪಾದಕರಾದ ಕೆ.ಉಮೇಶ ಕಾಡಪ್ಪನವರ್, ಕೆ.ಜೈಮುನಿ, ಎಚ್.ಸುಧಾಕರ, ಗೋವಿಂದರಾಜ, ಮಂಜುನಾಯ್ಕ, ಮಂಜುನಾಥ, ಎಚ್.ನಿಂಗರಾಜ ಇದ್ದರು.