ಸಾರಾಂಶ
ವೈದ್ಯರ ನಿರ್ಲಕ್ಷ್ಯದಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ನಗರದ ಅಂಬೇಡ್ಕರ್ ಬಡಾವಣೆಯ ಗರ್ಭಿಣಿ ನೇತ್ರಾವತಿ ಮೃತಪಟ್ಟಿದ್ದು ಆ ಕುಟುಂಬದ ಒಬ್ಬರಿಗೆ ಹೊರಗುತ್ತಿಗೆ ಮೂಲಕ ನೌಕರಿ ನೀಡದೇ ಆರೋಗ್ಯ ಇಲಾಖೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ತಾಲೂಕು ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯನ್ನು ಮುಖಂಡರು ಬಹಿಷ್ಕರಿಸಿದರು. ಚಾಮರಾಜನಗರದಲ್ಲಿ ತಾಲೂಕು ಮಟ್ಟದ ಎಸ್ಸಿ, ಎಸ್ಪಿ ಹಿತರಕ್ಷಣಾ ಸಮಿತಿ ಸಭೆಗೂ ಮುನ್ನ ಮುಖಂಡರು ಈ ತೀರ್ಮಾನ ಕೈಗೊಂಡರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವೈದ್ಯರ ನಿರ್ಲಕ್ಷ್ಯದಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ನಗರದ ಅಂಬೇಡ್ಕರ್ ಬಡಾವಣೆಯ ಗರ್ಭಿಣಿ ನೇತ್ರಾವತಿ ಮೃತಪಟ್ಟಿದ್ದು ಆ ಕುಟುಂಬದ ಒಬ್ಬರಿಗೆ ಹೊರಗುತ್ತಿಗೆ ಮೂಲಕ ನೌಕರಿ ನೀಡದೇ ಆರೋಗ್ಯ ಇಲಾಖೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ತಾಲೂಕು ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯನ್ನು ಮುಖಂಡರು ಬಹಿಷ್ಕರಿಸಿದರು.ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ತಹಸೀಲ್ದಾರ್ ಗಿರಿಜಮ್ಮ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಎಸ್ಸಿ, ಎಸ್ಪಿ ಹಿತರಕ್ಷಣಾ ಸಮಿತಿ ಸಭೆ ನಿರ್ಧಾರವಾಗಿತ್ತು. ವಿವಿಧ ದಲಿತ ಸಂಘಟನೆಗಳ ಮುಖಂಡರು ಸಭೆ ಕಾಟಾಚಾರಕ್ಕೆ ನಡೆಯುವುದು ಬೇಡ. ಸಭೆಗೆ ಎಲ್ಲ ವಿಭಾಗದ ಅಧಿಕಾರಿಗಳು ಬಂದಿದ್ದಾರೆಯೇ ಮೊದಲು ತಿಳಿದುಕೊಳ್ಳಿ ಎಂದರು.ತಹಸೀಲ್ದಾರ್ ಗಿರಿಜಮ್ಮ ಸಭೆಗೆ ಬಂದಿರುವ ಅಧಿಕಾರಿಗಳ ಹಾಜರಿ ಪಡೆದುಕೊಂಡು ಗೈರು ಹಾಜರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡುವ ಜೊತೆಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಹಿಂದಿನ ಸಭೆಯ ನಡಾವಳಿಯನ್ನು ಪ್ರಸ್ತಾಪಿಸಿ ಮೃತಪಟ್ಟ ನೇತ್ರಾವತಿ ಕುಟುಂಬಕ್ಕೆ ೭ ತಿಂಗಳಾದರೂ ನೌಕರಿ ನೀಡಿಲ್ಲ. ಕಾಯಂ ಬೇಡ ಹೊರಗುತ್ತಿಗೆ ನೌಕರಿ ನೀಡಲು ವರ್ಷಗಟ್ಟಲೇ ಬೇಕಾ?. ಹಿಂದಿನ ಸಭೆಗಳಲ್ಲೂ ಡಿಎಚ್‌ಒ ನೌಕರಿ ಕೊಡುವುದಾಗಿ ಭರವಸೆ ನೀಡಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಮುಖಂಡರಾದ ನಾಗರಾಜು ಸಿ.ಕೆ. ಮಂಜುನಾಥ್, ಕೆ.ಎಂ. ನಾಗರಾಜು, ಸಿ.ಎಂ. ಕೃಷ್ಣಮೂರ್ತಿ, ಶಿವಣ್ಣ, ಶ್ರೀಕಂಠು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಮಾತನಾಡಿ, ನೇತ್ರಾವತಿ ತಮ್ಮ ಮಣಿಕಂಠಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಾನ್ ಕ್ಲಿನಿಕ್ ಟೆಂಡರ್ ಕರೆಯಲಾಗಿದ್ದು ಬಿಡ್ ಆಯ್ಕೆಯಾದ ನಂತರ ಮಣಿಕಂಠಗೆ ನೌಕರಿ ನೀಡಲಾಗುವುದು ಎಂದು ತಿಳಿಸಿದರು.ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಇತರ ಎಲ್ಲಾ ಇಲಾಖೆಗಳಲ್ಖೂ ಹೊರಗುತ್ತಿಗೆ ಆಧಾರದಲ್ಲಿ ನೇರವಾಗಿ ಅಧಿಕಾರಿಗಳೇ ನೇಮಕ ಮಾಡಿಕೊಳ್ಳುತ್ತಾರೆ. ಯಾವುದೇ ಟೆಂಡರ್ ಕರೆಯುವುದಿಲ್ಲ. ಇದಕ್ಕೆ ಯಾಕೆ ಬಿಡ್ ಕರೆಯಬೇಕು ಇದು ಅಧಿಕಾರಿಗಳ ನಿರ್ಲಕ್ಷ್ಯ, ಜೊತೆಗೆ ಹಿಂದಿನ ಅನುಪಾಲನಾ ವರದಿಗಳಿಗೂ ಪೂರ್ಣ ಪ್ರಮಾಣದ ತೀರ್ಮಾನ ಮಾಡಿಲ್ಲ. ಆದ್ದರಿಂದ ನೇತ್ರಾವತಿ ಕುಟುಂಬಕ್ಕೆ ನೌಕರಿ ಹಿಂದಿನ ಅನುಪಾಲನಾ ವರದಿಗಳಿಗೆ ಪೂರ್ಣ ಪ್ರಮಾಣದ ಕ್ರಮ ತೆಗೆದುಕೊಳ್ಳವವರೆಗೂ ತಾಲೂಕು ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆ ಬೇಡ ಎಂದರು. ನೇತ್ರಾವತಿ ಕುಟುಂಬಕ್ಕೆ ನೌಕರಿ ಕೊಡದಿದ್ದರೆ ಡಿಎಚ್‌ಒ, ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮುಖಂಡ ಶಿವಣ್ಣ ಹೇಳಿದರು. ತಹಸೀಲ್ದಾರ್ ಗಿರಿಜಮ್ಮ ಅವರ ಮನವಿಗೂ ಸ್ಪಂದಿಸದ ಮುಖಂಡರು, ಆಕ್ರೋಶಗೊಂಡು ತಹಸೀಲ್ದಾರ್, ತಾಲೂಕು ಆರೋಗ್ಯಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಹೊರ ನಡೆದು ನೇತ್ರಾವತಿ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಘೋಷಣೆ ಕೂಗಿದರು. ಈ ವೇಳೆ ಸ್ಥಳಕ್ಕೆ ಬಂದ ತಹಸೀಲ್ದಾರ್ ಗಿರಿಜಾ ಅವರು ಮುಖಂಡರ ಮನವೊಲಿಸಲು ಯತ್ನಿಸಿದರು. ಅನುಪಾಲನ ವರದಿಯಲ್ಲಿರುವ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಬೇಕು. ಜೊತೆಗೆ ನೇತ್ರಾವತಿ ಕುಟುಂಬಕ್ಕೆ ನೌಕರಿ ನೀಡಿರುವ ಸಂಬಂಧ ಆದೇಶ ಪತ್ರ ನೀಡುವ ತನಕ ಸಭೆಗೆ ಬರುವುದಿಲ್ಲ ಎಂದು ಪಟ್ಟುಹಿಡಿದು ಸಭೆ ಬಹಿಷ್ಕರಿಸಿದರು.ಬ್ಯಾಡಮೂಡ್ಲು ಬಸವಣ್ಣ ಶಂಕರ್, ಬಸವರಾಜು, ಮೂರ್ತಿ, ಸ್ವಾಮಿ, ಶಿವಕುಮಾರ್, ಸಂಘಸೇನಾ ವಿವಿಧ ದಲಿತ ಸಂಘಟನೆಗಳ ಮುಖಂಡರು ಇದ್ದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ನಂಜುಂಡೇಗೌಡ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುಬ್ಬರಾಯ, ಎಎಸ್‌ಐ ರುದ್ರಸ್ವಾಮಿ ಇದ್ದರು.