ಅರಣ್ಯ ಇಲಾಖೆ, ಉದ್ಯೋಗ ಖಾತರಿ ಯೋಜನೆಯಲ್ಲಿ ಅವ್ಯವಹಾರ ಆರೋಪ
KannadaprabhaNewsNetwork | Published : Oct 12 2023, 12:00 AM IST
ಅರಣ್ಯ ಇಲಾಖೆ, ಉದ್ಯೋಗ ಖಾತರಿ ಯೋಜನೆಯಲ್ಲಿ ಅವ್ಯವಹಾರ ಆರೋಪ
ಸಾರಾಂಶ
ಅರಣ್ಯ ಇಲಾಖೆ, ಉದ್ಯೋಗ ಖಾತರಿ ಯೋಜನೆಯಲ್ಲಿ ಅವ್ಯವಹಾರ ಆರೋಪ
₹90 ಲಕ್ಷಕ್ಕಿಂತಲೂ ಹೆಚ್ಚಿನ ಹಣ ದುರುಪಯೋಗ । ಅರಣ್ಯ ಅಧಿಕಾರಿಗಳ ವಿರುದ್ಧ ತನಿಖೆಗೆ ದಸಂಸ ಆಗ್ರಹ ಕನ್ನಡಪ್ರಭ ವಾರ್ತೆ ಶಹಾಪುರ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಲಕ್ಷಾಂತರ ರು.ಗಳ ಅವ್ಯವಹಾರ ನಡೆದಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ವಿದ್ಯಾರ್ಥಿ ಒಕ್ಕೂಟ ಹಾಗೂ ಮಹಿಳಾ ಒಕ್ಕೂಟದ ವತಿಯಿಂದ ನಗರದ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆಯ ಎಸಿಎಫ್ ಅವರ ಮುಖಾಂತರ ಅರಣ್ಯ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಮಾತನಾಡಿ, ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಶಹಾಪುರ ಮತ್ತು ವಡಗೇರಾ ತಾಲೂಕು ಸಾಮಾಜಿಕ ವಲಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 2021-22 ಮತ್ತು 2022-23ನೇ ಸಾಲಿನ ಸಾಮಗ್ರಿಗಳ ವೆಚ್ಚದಲ್ಲಿ ಸುಮಾರು ₹90 ಲಕ್ಷಕ್ಕಿಂತಲೂ ಹೆಚ್ಚಿನ ಹಣವನ್ನು ಅವ್ಯವಹಾರ ಮಾಡಲಾಗಿದೆ ಎಂದು ಆರೋಪಿಸಿದರು. ಅಲ್ಲದೆ ಹಳಿಸಗರ್ ನರ್ಸರಿ ಫಾರ್ಮ್ ಹೆಸರಲ್ಲಿ ಖೋಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದಲ್ಲದೆ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿನ ರಸ್ತೆಗಳ ಬದಿ ಸಸಿ ನೆಡುವ ನೆಪದಲ್ಲಿ ಲಕ್ಷಾಂತರ ರು.ಗಳ ವಂಚನೆ ಮಾಡಿದ್ದಾರೆ ಎಂದು ಅವರು ಆರೋಪಿಸಿ, ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಬೀರನಕಲ್ ನರ್ಸರಿ, ಅಣಬಿ, ಮುಡಬೂಳ ರೋಡ್, ದೋರನಹಳ್ಳಿ-ಶಿರವಾಳ ರಸ್ತೆ, ದರ್ಶನಾಪುರ ಕ್ರಾಸ್‌ನಿಂದ ಗೋಗಿ ಮುಖ್ಯ ರಸ್ತೆವರೆಗೆ, ಕನ್ಯಾಕೋಳುರು ದಿಂದ ಅನ್ವಾರದವರೆಗೆ ಹಾಗೂ ಗುಂಡಳ್ಳಿ ತಾಂಡಾದಿಂದ ತಂಗಡಗಿವರೆಗಿನ ರಸ್ತೆಗಳು ಸೇರಿದಂತೆ ಅನೇಕ ಗ್ರಾಮಗಳ ರಸ್ತೆ ಗಿಡ ನೆಡುವ ಹಾಗೂ ಪ್ಲಾಂಟೇಶನ್ ಹೆಸರಲ್ಲಿ ಸಾಕಷ್ಟು ಹಣವನ್ನು ಲೂಟಿ ಮಾಡಿದ್ದಾರೆ ಎಂಬುದು ತನಿಖೆಯಿಂದ ಬಯಲಾಗಿದೆ. ಬೋಗಸ್ ಬಿಲ್ ಮಾಡಿದ ಬಗ್ಗೆ ಬಿಲ್ ನಂಬರ್ ಸಹಿತ ಮೇಲಧಿಕಾರಿಗಳಿಗೆ ಹಾಗೂ ಅರಣ್ಯ ಸಚಿವರಿಗೆ ದೂರು ನೀಡಿದ್ದು, ಒಂದು ವಾರ ಕಾಲಾವಕಾಶ ಕೊಡುತ್ತೇವೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ಮಾಡಬೇಕು. ಇಲ್ಲದಿದ್ದರೆ ಕಚೇರಿ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿದರು. ಸಮಿತಿಯ ತಾಲೂಕು ಸಂಚಾಲಕ ಮರೆಪ್ಪ ಕ್ರಾಂತಿ, ಚಂದಪ್ಪ ಮುನಿಯಪ್ಪನೂರ್, ಶಿವಲಿಂಗ ಹಸನಾಪುರ್, ಶಿವಕುಮಾರ್ ತಳವಾರ್, ಭೀಮಣ್ಣ ನಾಟೆಕಾರ, ಬಾಲರಾಜ್ ಖಾನಾಪುರ್, ಮಲ್ಲಿಕಾರ್ಜುನ, ನಾಗರಾಜ, ವೆಂಕಟೇಶ, ಶರಬಣ್ಣ ದೋರನಹಳ್ಳಿ, ವಾಸು ಕೋಗಿಲ್ಕರ್, ಶ್ರೀಮಂತ ಸಿಂಗನಹಳ್ಳಿ, ಶಿವಪುತ್ರ ಡಾಂಗೆ, ತಿಪ್ಪಣ್ಣ, ರಾಜು ಬಡಿಗೇರ್, ಖಾಜಾ ಅಮೀರ್ ಪಟೇಲ್ ಇತರರಿದ್ದರು. - - - ಬಾಕ್ಸ್.. ಶ್ರೀಗಂಧ ಕಳ್ಳತನ ಪ್ರಕರಣ: ತನಿಖೆಗೆ ಆಗ್ರಹ ಇತ್ತೀಚೆಗೆ ಯಾದಗಿರಿಯಲ್ಲಿ ಗಂಧದ ಕಳ್ಳತನದಲ್ಲಿ ಆರೋಪಿಗಳನ್ನು ಬಂಧಿಸಿ ಗಂಧದ ಕಟ್ಟಿಗೆಯನ್ನು ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಇಡಲಾಗಿತ್ತು ಎನ್ನಲಾಗಿದೆ. ಅರಣ್ಯ ಅಧಿಕಾರಿಯೇ ಕಚೇರಿಯಲ್ಲಿ ಇಡಲಾದ ಗಂಧದ ಮರ ಕದ್ದಿರುವುದಾಗಿ ಮಾಧ್ಯಮಗಳಲ್ಲಿ ಆರೋಪಗಳು ಮೂಡಿಬಂದಿವೆ. ಅರಣ್ಯ ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ತಮ್ಮ ದುರಾಸೆಗೆ ಮರಗಳಿಗೆ ಕೊಡಲಿ ಹಾಕಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕಳ್ಳತನದಲ್ಲಿ ಭಾಗಿಯಾದ ಅರಣ್ಯ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು. - - - 11ವೈಡಿಆರ್13; ಶಹಾಪುರ ನಗರದ ತಾಲೂಕು ಪಂಚಾಯಿತಿ ಎದುರು ಅರಣ್ಯ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರವೆಸಗಿದ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ---೦೦೦---