ಚಳಿಗಾಲದ ಅಧಿವೇಶನದಲ್ಲಿ ಹಗರಣ ಹೊರಗೆಳೆಯುತ್ತೇವೆ

| Published : Dec 09 2024, 12:45 AM IST

ಸಾರಾಂಶ

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಅಧಿಕಾರಾವಧಿಯ ಹಗರಣಗಳನ್ನು ಹೊರಗೆಳೆಯುವ ಮೂಲಕ, ರಾಜ್ಯ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಘೋಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಅಧಿಕಾರಾವಧಿಯ ಹಗರಣಗಳನ್ನು ಹೊರಗೆಳೆಯುವ ಮೂಲಕ, ರಾಜ್ಯ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಘೋಷಿಸಿದ್ದಾರೆ. ಹೊನ್ನಾಳಿ ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಡಿ.9ರಿಂದ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಶುರುವಾಗಲಿದ್ದು, ಭ್ರಷ್ಟ ಸರ್ಕಾರದ ಚಳಿ ಬಿಡಿಸುವ ಅಧಿವೇಶನ ಇದಾಗಿರಲಿದೆ ಎಂದರು.

ರಾಜ್ಯದ ಯಾವುದೇ ಕ್ಷೇತ್ರದಲ್ಲೂ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಶಾಸಕರು ಕಾರಿನಲ್ಲೇ ಗುದ್ದಲಿ ಹಿಡಿದುಕೊಂಡು, ಓಡಾಡುತ್ತಿದ್ದರು. ಈಗಿನ ಶಾಸಕರ ಪರಿಸ್ಥಿತಿ ಹೇಗಿದೆಯೆಂದರೆ ಗುದ್ದಲಿಗಳೇ ತುಕ್ಕು ಹಿಡಿದಿವೆ. ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರಿಗೆ ಗುದ್ದಲಿ ಹಿಡಿದು, ಕಾಮಗಾರಿ ಉದ್ಘಾಟಿಸುವ ಭಾಗ್ಯವೇ ಇಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದರು.

ರೈತರು, ಬಡವರ ಪಾಲಿಗೆ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ. ಜನ ಸಾಮಾನ್ಯರಿಗೆ ಅನುಕೂಲವಾಗಿದ್ದ ಭಾಗ್ಯಲಕ್ಷ್ಮಿ, ಕಿಸಾನ್ ಸಮ್ಮಾನ್‌ದಂತಹ ಯೋಜನೆಗಳಿಗೆ ಕಲ್ಲು ಹಾಕಿದೆ. ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲೇ ಈ ಸರ್ಕಾರ ಮಿಂದೇಳುತ್ತಿದೆ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುವ ಮಾತಿತ್ತು. ಈ ಚಳಿಗಾಲದ ಅಧಿವೇಶನದಲ್ಲಿ ಸದನ ಒಳಗೆ ಮತ್ತು ಹೊರಗೆ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದು ಅವರು ಪುನರುಚ್ಛರಿಸಿದರು.

ಹಿಂದೆ ಕೆಆರ್ ಪೇಟೆ, ಶಿರಾದಲ್ಲಿ ಎಂದಿಗೂ ಕಮಲ ಗೆದ್ದಿರಲಿಲ್ಲ. ನಾವು ಅಲ್ಲಿ ಕಮಲ ಅರಳಿಸಿದ್ದೇವೆ. ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಮಾತಿನಂತೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು, ಮುಂದಿನ ಚುನಾವಣೆಯಲ್ಲಿ ರಾಜ್ಯಾದ್ಯಂತ 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು, ಅಧಿಕಾರದ ಗದ್ದುಗೆಯನ್ನು ಹಿಡಿಯುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸುಮಾರು 300ಕ್ಕೂ ಹೆಚ್ಚು ಗರ್ಭಿಣಿ, ಬಾಣಂತಿಯರ ಸಾವಾಗಿವೆ. ನಿನ್ನೆಯಷ್ಟೇ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟಿಸಲಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ ಪರಿಹಾರ ನಿಧಿ ಹೋಗಲಿ, ಮೈಸೂರಿನ ಮುಡಾದಲ್ಲಿ 14 ಸೈಟ್ ಕೊಟ್ಟು, ₹62 ಕೋಟಿ ಪರಿಹಾರ ಕೇಳುವಂತಹ ಪರಿಸ್ಥಿತಿಗೆ ಆಳುವವರು ಬಂದಿದ್ದಾರೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.

* ವಕ್ಫ್ ಭೂ ಕಬಳಿಕೆ ವಿರುದ್ಧದ ಹೋರಾಟ ನಿಲ್ಲದು:

ದಾವಣಗೆರೆ: ವಕ್ಫ್ ಭೂ ಕಬಳಿಕೆ ವಿರುದ್ಧದ ಪಕ್ಷದ ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆ ಮತ್ತೆ ಪ್ರವಾಸ ಮಾಡಿ, ಮತ್ತಷ್ಟು ಮಾಹಿತಿ ಕಲೆ ಹಾಕುತ್ತೇವೆ. ನಂತರ ಕೇಂದ್ರದ ಪಾರ್ಲಿಮೆಂಟ್ ಮುಂದೆ ಧರಣಿ ಮಾಡುತ್ತೇವೆ. ತಾನೇ ಘೋಷಿಸಿದ್ದ ಐದೂ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೇ ಕಾಂಗ್ರೆಸ್ ಸರ್ಕಾರ ಪರದಾಡುತ್ತಿದೆ. ಚುನಾವಣೆ ಮೂರು ದಿನವಿದ್ದಾಗ ಮಾತ್ರ ಗ್ಯಾರಂಟಿ ಹಣವನ್ನು ಬಿಡುಗಡೆ ಮಾಡುತ್ತಾರೆ ಎಂದು ಆರೋಪಿಸಿದರು.

* ಬಿವೈವಿ ಬೆಂಬಲಿಗರ ಸಂಭ್ರಮಾಚರಣೆ:ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಮುಂದುವರಿಯುತ್ತಾರೆಂಬ ರಾಜ್ಯ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್ ಹೇಳಿಕೆ ನೀಡಿದ ಬೆನ್ನಲ್ಲೇ ಹೊನ್ನಾಳಿಯಲ್ಲಿ ಭಾನುವಾರ ವಿಜಯೇಂದ್ರ ಬೆಂಬಲಿಗರು ಭಾನುವಾರರ ಪಟ್ಟಣದಲ್ಲಿ ಪಟಾಕಿ ಸಿಡಿಸಿ, ಸಂಭ್ರಮಾಚರಿಸಿದರು.

ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಇದೇ ಮೊದಲ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಹೊನ್ನಾಳಿಗೆ ಆಗಮಿಸಿರುವ ಬಿ.ವೈ. ವಿಜಯೇಂದ್ರ ಅವರು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಶಿಕಾರಿಪುರದಿಂದ ಗೆದ್ದು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಬಿ.ವೈ.ವಿಜಯೇಂದ್ರ ಹೊನ್ನಾಳಿಗೆ ಭಾನುವಾರ ಆಗಮಿಸಿದ ಹಿನ್ನೆಲೆಯಲ್ಲಿ ಅದ್ಧೂರಿ ಮೆರವಣಿಗೆಯಲ್ಲಿ ಕರೆ ತರಲಾಯಿತು. ನಂತರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಭಕ್ತ ಕನಕ ದಾಸರ ಪುತ್ಥಳಿಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಜೊತೆಗೂಡಿ ಬಿ.ವೈ. ವಿಜಯೇಂದ್ರ ಮಾಲಾರ್ಪಣೆ ಮಾಡಿದರು.

ಯತ್ನಾಳರ ಆಸೆಗೆ ಕಾಲವೇ ಉತ್ತರ ನೀಡಲಿದೆಯತ್ನಾಳ್‌ ಅವರಿಗೆ ಲಾಂಗ್ ಟರ್ಮ್‌ ಸ್ಟ್ರಾಟರ್ಜಿ ಇದ್ದಂತೆ ಕಾಣುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಯಾರಿಗೂ ಸಹ ಯಾವುದೇ ಹೋರಾಡ ಮಾಡಬೇಡಿ ಅಂತಾ ಯಾರೂ ಹೇಳಿಲ್ಲ. ಎಲ್ಲವನ್ನೂ ರಾಷ್ಟ್ರೀಯ ನಾಯಕರು ಗಮನಿಸುತ್ತಿದ್ದಾರೆ. ಯತ್ನಾಳ್‌ ಅನುಮಾನ, ಆಸೆಗಳಿಗೆ ಕಾಲವೇ ಉತ್ತರ ಕೊಡಲಿದೆ. ಅವರಿಗೆ ಒಳ್ಳೆಯದಾಗಲಿ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಪಡೆದಿರುವುದು ಮುಖ್ಯಮಂತ್ರಿ ಆಗುವುದಕ್ಕಲ್ಲ. ರಾಜ್ಯಾಧ್ಯಕ್ಷ ಸ್ಥಾನವನ್ನು ಜವಾಬ್ಧಾರಿಯಿಂದ ನಿರ್ವಹಿಸುತ್ತೇನೆ ಎಂದು ವಿಜಯೇಂದ್ರ ತಿಳಿಸಿದರು.