ಸಾರಾಂಶ
ಗುಂಡ್ಲುಪೇಟೆ : ರಾಜ್ಯದ ಹಲವು ಕಡೆ ಗೋವುಗಳ ಮೇಲೆ ದೌರ್ಜನ್ಯ ನಡೆದ ಪ್ರಕರಣ ಜನಮಾನಸದಲ್ಲಿ ಮಾಸುವ ಮುನ್ನವೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಬೀಡಾಡಿ ಕರುವಿನ ಬಾಲ ಕತ್ತರಿಸಿದ ಘಟನೆ ಭಾನುವಾರ ನಡೆದಿದೆ. ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದ ಬಳಿ ಗಲ್ಲಿಯಲ್ಲಿ ಬಾಲ ಕತ್ತರಿಸಿದ ಕರು ನಿತ್ರಾಣಗೊಂಡು ಬಿದ್ದಿರುವುದು ಕಂಡುಬಂದಿದೆ.
ನಿತ್ರಾಣಗೊಂಡು ಬಿದ್ದಿದ್ದ ಬಾಲ ಕತ್ತರಿಸಿದ ಕರುವನ್ನು ಕಂಡು ಸಾರ್ವಜನಿಕರು ನೀರು ಕುಡಿಸಿದ್ದಾರೆ. ಮೇವು ನೀಡಿದ್ದಾರೆ ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ಎಸ್.ಆರ್.ಎಸ್.ರಾಜು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ಜಾನುವಾರು ಮೇಲೆ ದೌರ್ಜನ್ಯ ನಡೆದಿರುವುದು ಖಂಡನೀಯ. ಕರುವಿನ ಬಾಲ ಕತ್ತರಿಸಿದ ಆರೋಪಿಗಳ ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಜನರು ಒತ್ತಾಯಿಸಿದ್ದಾರೆ.
ಬೆಂಗಳೂರು ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣ, ನಂಜನಗೂಡಿನಲ್ಲಿ ಹಸುವಿನ ಬಾಲ ಕತ್ತರಿಸಿದ ಪ್ರಕರಣ, ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಬಳಿ ಹಸು ಕತ್ತರಿಸಿ ಹೊಟ್ಟೆಯಲ್ಲಿದ್ದ ಕರು ಬಿಸಾಡಿ ಹೋದ ಪ್ರಕರಣಗಳು ಇನ್ನೂ ಹಸಿರಾಗಿರುವಾಗಲೇ ಮತ್ತೊಮ್ಮ ಗೋವಿನ ಮೇಲೆ ಕ್ರೌರ್ಯ ಎಸಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.