ದುರಾಸೆಯಿಂದ ಹಗರಣಗಳು ಹೆಚ್ಚಾಗುತ್ತಿದೆ: ಸಂತೋಷ್ ಹೆಗ್ಡೆ

| Published : Jan 26 2025, 01:33 AM IST

ಸಾರಾಂಶ

ದೇಶ ಅಭಿವೃದ್ಧಿಯಾಗುತ್ತಿದ್ದರೂ ಅಷ್ಟೇ ಪ್ರಮಾಣದಲ್ಲಿ ಹಗರಣಗಳು, ಭ್ರಷ್ಟಾಚಾರ ಹೆಚ್ಚಾಗಲು ದುರಾಸೆಯೇ ಕಾರಣವಾಗಿದೆ ಎಂದು ಸಂತೋಷ್ ಹೆಗ್ಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ದೇಶ ಅಭಿವೃದ್ಧಿಯಾಗುತ್ತಿದ್ದರೂ ಅಷ್ಟೇ ಪ್ರಮಾಣದಲ್ಲಿ ಹಗರಣಗಳು, ಭ್ರಷ್ಟಾಚಾರಗಳು ಹೆಚ್ಚಾಗಲು ದುರಾಸೆಯೇ ಕಾರಣವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಮತ್ತು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಬೇಸರ ವ್ಯಕ್ತ ಪಡಿಸಿದರು.

ಅವರು ಸಮೀಪದ ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ 20ನೇ ವರ್ಷದ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಲಂಚ, ಭ್ರಷ್ಟಾಚಾರ, ಹಗರಣಗಳಂತಹ ಅನ್ಯಾಯಗಳು ಆಗಲು ವ್ಯಕ್ತಿಯ ತಪ್ಪಲ್ಲ, ಸಮಾಜದ ತಪ್ಪು, ಜನರು ಅನ್ಯಾಯದ ಕೆಲಸ ಮಾಡಿಸಲು ಅಧಿಕಾರಿಗಳಿಗೆ ಲಂಚ ಕೊಡುತ್ತಾರೆ. ಇದರಿಂದ ಭ್ರಷ್ಟಾಚಾರದ ಸಮಾಜ ನಿರ್ಮಾಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ದಶಕಗಳಿಂದ ಬಂದು ಹೋದ ಸರ್ಕಾರಗಳಿಂದ ಸಾವಿರಾರು ಹಗರಣಗಳು ನಡೆದಿದೆ. ಹಗರಣಗಳ ಹಣದಿಂದ ದೇಶವನ್ನೇ ಅಭಿವೃದ್ಧಿ ಪಡಿಸಬಹುದಾಗಿತ್ತು. ಆದರೆ ದುರಾಸೆಯ ಪ್ರತಿಫಲದಿಂದ ಹಗರಣಗಳು ಮಾತ್ರ ಅಭಿವೃದ್ಧಿಯಾಗಿದೆ ಎಂದು ವಿಷಾದಿಸಿದರು.

ಇಂದಿನ ಸಮಾಜದಲ್ಲಿ ಜನರು ಶ್ರೀಮಂತಿಕೆಯನ್ನು ಪೂಜಿಸುತ್ತಾರೆ. ಆದರೆ ಪ್ರಾಮಾಣಿಕತೆಗೆ ಸಮಾಜದಲ್ಲಿ ಗೌರವ ಇರುವುದಿಲ್ಲ. ದೇಶದಲ್ಲಿಂದು ಭ್ರಷ್ಟಾಚಾರ, ಹಗರಣದ ಪ್ರಕರಣಗಳಲ್ಲಿ ಭಾಗಿಯಾದ ಭ್ರಷ್ಟರಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುತ್ತಿಲ್ಲ ಎಂದ ಅವರು ಪ್ರತಿಯೊಬ್ಬರು ಪ್ರಾಮಾಣಿಕವಾಗಿ ನ್ಯಾಯವಾಗಿ ಹಣ, ಆಸ್ತಿ ಸಂಪಾದಿಸುವುದು ತಪ್ಪಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಾಮಾಣಿಕತೆ, ಮಾನವಿಯತೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿದಂತೆಯೇ ಸಮಾಜವನ್ನು ಆಸ್ತಿಯನ್ನಾಗಿ ಮಾಡುವ ಮನೋಭಾವನೆ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರಾಂಶುಪಾಲೆ ಕೆ.ಎನ್.ಭಾರತಿ ಮಾತನಾಡಿ, ಪೋಷಕರು ಮಕ್ಕಳಿಗೆ ತಾವೆ ಮಾದರಿಯಾಗುವಂತೆ ಬೆಳೆಸಬೇಕು. ಪೋಷಕರು ತಪ್ಪು ಮಾಡಿದರೆ ಮಕ್ಕಳು ಅದನ್ನೆ ಅನುಸರಿಸುತ್ತಾರೆ. ಅದೆ ರೀತಿ ಪೋಷಕರು ಶಿಕ್ಷಣದ ಅರ್ಹತ ಪತ್ರಗೋಸ್ಕರವಾಗಿಯೇ ಮಕ್ಕಳಿಗೆ ಶಿಕ್ಷಣಕೊಡಿಸಬಾರದು ಎಂದ ಅವರು ಇಂದಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ದೊರೆಯುತ್ತಿದೆ. ಆದರೆ ಸಂಸ್ಕಾರದ ಶಿಕ್ಷಣ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಸಂಸ್ಕಾರವನ್ನು ಕಲಿಸಿಕೊಡುವಂತೆ ಮನವಿ ಮಾಡಿದರು.ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತ ಮತ್ತು ಜಿಲ್ಲಾಧ್ಯಕ್ಷ ಹಾಗೂ ಕಾನೂನು ಸಲಹೆಗಾರ ಮನೋಜ್ ಬೋಪಯ್ಯ ಮಾತನಾಡಿ, ಮಕ್ಕಳು ಮತ್ತು ಶಾಲೆ ಭವಿಷ್ಯದ ಬುನಾದಿಗಳಾಗಿದ್ದು ಈ ನಿಟ್ಟಿನಲ್ಲಿ ಮಕ್ಕಳು ವಿದ್ಯಾವಂತರಾಗುವ ಮೂಲಕ ದೇಶ ಮತ್ತು ಸಮಾಜವನ್ನು ಬದಲಾವಣೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಸಾಯಿ ಎಜುಕೇಷನ್ ಮ್ಯಾನೆಜಿಂಗ್ ಟ್ರಸ್ಟಿ ಎಚ್.ಕೆ.ಶಿವಪ್ರಕಾಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಕಾರ್ಯದರ್ಶಿ ಭರತ್‍ ಕುಮಾರ್ ಮಾತನಾಡಿದರು. ಸಾಯಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಟಿ.ಪಿ.ಜೀವನ್, ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ರಜಿತ್ ಗೌಡ ಪಾಲ್ತಾಡು ದೇವಸ್ಯ, ಗ್ರಾ.ಪಂ.ಅಧ್ಯಕ್ಷೆ ಮೀನಾಕ್ಷಮ್ಮ, ಆಲೂರುಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷೆ ವೀಣಾ, ಗ್ರಾ.ಪಂ.ಸದಸ್ಯರಾದ ಮಲ್ಲಪ್ಪ, ದಮಯಂತಿ, ಗೋಣಿಮರೂರು ಕ್ಲಸ್ಟರ್ ಸಿಆರ್‍ಪಿ ಆಶಾ, ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್, ಪಿಡಿಒ ಹರೀಶ್, ಪ್ರಮುಖರಾದ ಎಂ.ಎನ್.ರಾಜು ಮುಂತಾದವರಿದ್ದರು.