ಹಗರಣಗಳ, ಅಭಿವೃದ್ಧಿ ಶೂನ್ಯ ಸರ್ಕಾರ: ಮಾಜಿ ಸಚಿವ ಎನ್.ಮಹೇಶ್

| Published : Jul 17 2024, 12:53 AM IST

ಹಗರಣಗಳ, ಅಭಿವೃದ್ಧಿ ಶೂನ್ಯ ಸರ್ಕಾರ: ಮಾಜಿ ಸಚಿವ ಎನ್.ಮಹೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಐದು ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಎಲ್ಲಿಯೂ ಹೇಳಲಿಲ್ಲ. ಯೋಜನೆಗಳಿಗೆ ೪೭ ಸಾವಿರ ಕೋಟಿ ರು. ಹೆಚ್ಚುವರಿ ಆದಾಯ ಸಂಗ್ರಹಿಸಬಹುದೆಂಬ ಭಾವನೆ ರಾಜ್ಯದ ಜನರಲ್ಲಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ದಲಿತ, ಸಂವಿಧಾನ ವಿರೋಧಿ, ಹಗರಣಗಳ ಮತ್ತು ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಮಾಜಿ ಸಚಿವ ಎನ್.ಮಹೇಶ್ ಟೀಕಿಸಿದರು.

ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಐದು ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಎಲ್ಲಿಯೂ ಹೇಳಲಿಲ್ಲ. ಯೋಜನೆಗಳಿಗೆ ೪೭ ಸಾವಿರ ಕೋಟಿ ರು. ಹೆಚ್ಚುವರಿ ಆದಾಯ ಸಂಗ್ರಹಿಸಬಹುದೆಂಬ ಭಾವನೆ ರಾಜ್ಯದ ಜನರಲ್ಲಿತ್ತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿಗಳ ಅಭಿವೃದ್ಧಿಗಿರಿಸಿದ್ದ ವಿಶೇಷ ಘಟಕ ಬುಡಕಟ್ಟು ಯೋಜನೆಯಲ್ಲಿ ೧೧ ಸಾವಿರ ಕೋಟಿ ರು. ಪಡೆದುಕೊಂಡರೆ, ಈ ವರ್ಷ ೩೯ ಸಾವಿರ ಕೋಟಿ ರು., ಎಸ್‌ಸಿಪಿ, ಟಿಎಸ್ಪಿ ಯೋಜನೆಯಲ್ಲಿ ೧೪೫೬೩ ಕೋಟಿ ರು. ಪಡೆಯುತ್ತಿರುವುದಾಗಿ ಉನ್ನತಮಟ್ಟದ ಪರಿಷತ್ ಸಭೆಯಲ್ಲಿ ತೀರ್ಮಾನಿಸಿದ್ದು ಸರ್ಕಾರದ ಆಡಳಿತ ದಿಕ್ಕು ತಪ್ಪಿ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಹಣವನ್ನು ಬೇರೆ ಯೋಜನೆಗಳಿಗೆ ಬಳಸುವ ಅಧಿಕಾರವಿಲ್ಲದಿದ್ದರೂ ತಮಗಿಷ್ಟಬಂದಂತೆ ಕಾನೂನು ಬದಲಾಯಿಸಿಕೊಂಡು ೨೫ ಸಾವಿರ ಕೋಟಿ ರು. ಬಳಕೆ ಮಾಡಿಕೊಂಡಿದ್ದಾರೆ. ಪ್ರಸಕ್ತ ವರ್ಷ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗಿರುವ ಏಳು ನಿಗಮಗಳಿಗೆ ೫೧೦ ಕೋಟಿ ರು. ನೀಡಲಾಗಿದೆ. ಭೂ ಒಡೆತನ ಯೋಜನೆಯ ಬಾಕಿಯೇ ೧,೧೧೯ ಕೋಟಿ ರು., ಗಂಗಾ ಕಲ್ಯಾಣ ಯೋಜನೆಗೆ ೬೫೦ ಕೋಟಿ ರು. ಬಾಕಿ ನೀಡಬೇಕಿದೆ. ಯಾವ ಹಣವನ್ನೂ ಬಿಡುಗಡೆ ಮಾಡದಿರುವ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರಬೇಕೆ ಎಂದು ಪ್ರಶ್ನಿಸಿದರು.

ವಾಲ್ಮೀಕಿ, ವಕ್ಫ್, ಮೈಸೂರು ಮುಡಾ ಸೇರಿದಂತೆ ಹಲವಾರು ಹಗರಣಗಳನ್ನು ನಡೆಸಿರುವ ಸರ್ಕಾರ ಅದನ್ನು ಮರೆಮಾಚುವ ಪ್ರಯತ್ನ ನಡೆಸುತ್ತಿದೆ. ಶಾಸಕರಿಗೆ ವಾರ್ಷಿಕವಾಗಿ ನೀಡಲಾಗುವ ಅನುದಾನವನ್ನು ನೀಡಲಾಗದೆ ಆರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಅಭಿವೃದ್ಧಿಗೆ ಯಾವುದೇ ಹಣಕಾಸಿನ ನೆರವನ್ನೂ ನೀಡದೆ ಶೂನ್ಯದಲ್ಲಿರಿಸಿದೆ. ಅಭಿವೃದ್ಧಿ ಎನ್ನುವುದು ನಿಂತ ನೀರಾಗಿದೆ ಎಂದು ಕುಟುಕಿದರು.

ಗೋಷ್ಠಿಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ಡಾ.ಎನ್.ಎಸ್.ಇಂದ್ರೇಶ್, ಅಶೋಕ್ ಜಯರಾಂ, ಸಿ.ಟಿ.ಮಂಜುನಾಥ್, ವಸಂತಕುಮಾರ್, ಪರಮಾನಂದ, ಶಂಕರ್, ಕೃಷ್ಣಪ್ಪ, ನರಸಿಂಹ ಇತರರಿದ್ದರು.