ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ, ಕೆಲಸಕ್ಕೆ ಅರ್ಜಿ ಸಲ್ಲಿಸಿ

| Published : Oct 28 2024, 12:52 AM IST

ಸಾರಾಂಶ

ವೈಯಕ್ತಿಕ ಕಾಮಗಾರಿಗಳ ಬಗ್ಗೆ ಹಾಗೂ ಯೋಜನೆ ಅಡಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.

ಹೂವಿನಹಡಗಲಿ: ಗ್ರಾಮೀಣ ಪ್ರದೇಶದ ಅಕುಶಲ ಕೂಲಿ ಕಾರ್ಮಿಕರ ಕೈಗೆ ಸಕಾಲದಲ್ಲಿ ಕೂಲಿ ಕೆಲಸ ನೀಡುವ ಜತೆಗೆ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಮನೆಯಿಂದ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ಗ್ರಾಪಂ ಕಚೇರಿಗೆ ಕಾರ್ಮಿಕರ ಅಲೆದಾಟ ತಪ್ಪಿಸಬಹುದಾಗಿದೆ ಎಂದು ತಾಪಂ ಇಒ ಉಮೇಶ ಹೇಳಿದರು.

ತಾಲೂಕಿನ 26 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ನರೇಗಾ ಯೋಜನೆ 25 -26 ನೇ ಸಾಲಿನ ಕಾರ್ಮಿಕ ಕ್ರಿಯಾಯೋಜನೆ ತಯಾರಿಸುವ ಕುರಿತು ಅ.2ರಿಂದ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದಲ್ಲಿ ಮಾತನಾಡಿದ ಅವರು, ಈ ಕುರಿತು ಅಭಿಯಾನದ ಅವಧಿಯಲ್ಲಿ ಮನೆ ಮನೆಗೆ ಭೇಟಿ ನೀಡಿ, ವ್ಯಾಪಕ ಪ್ರಚಾರ ಕೈಗೊಂಡಿದ್ದು ಯೋಜನೆಯಡಿ ಕೈಗೊಳ್ಳಬಹುದಾದ ವೈಯಕ್ತಿಕ ಕಾಮಗಾರಿಗಳ ಬಗ್ಗೆ ಹಾಗೂ ಯೋಜನೆ ಅಡಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದರು.

ನರೇಗಾ ಯೋಜನೆ ಅಡಿ ಅನುಷ್ಠಾನ ಮಾಡಬಹುದಾಗ ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ, ಕುರಿದೊಡ್ಡಿ, ದನದ ಕೊಟ್ಟಿಗೆ, ಕೋಳಿ ಸಾಕಾಣಿಕೆ ಶೆಡ್, ಎರೆ ಹುಳು ತೊಟ್ಟಿ ನಿರ್ಮಾಣ ಮಾಡಿಕೊಳ್ಳಬಹುದು ಎಂದರು.

ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನಗೊಳ್ಳುವ ಬೆಳೆಗಳಾದ ಮಲ್ಲಿಗೆ, ದಾಳಿಂಬೆ, ಡ್ರಾಗನ್ ಫ್ರೂಟ್ ,ತೆಂಗು, ಕರಿಬೇವು, ಮಾವು, ಸಪೋಟ, ನಿಂಬೆ, ಬಾಳೆ, ಪಪ್ಪಾಯಿ, ರೇಷ್ಮೆ ಇಲಾಖೆಯಿಂದ ರೇಷ್ಮೆ ಬೆಳೆ ಬೆಳೆಯಲು ನರೇಗಾ ಯೋಜನೆ ಅಡಿ ಸಾಮಗ್ರಿ ಹಾಗೂ ಕೂಲಿ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದ್ದು, ಈ ವೈಯಕ್ತಿಕ ಸೌಲಭ್ಯವನ್ನು ಪಡೆಯಲು ಬಯಸುವ ಫಲಾನುಭವಿಗಳು, ಗ್ರಾಪಂಗೆ ತೆರಳದೇ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿ ಅಥವಾ ಇಲಾಖೆಯ ಸಾಫ್ಟ್ ವೇರ್‌ ಲಿಂಕನ್ನು ಬಳಸಿಕೊಂಡು, ತಮ್ಮ ಮೊಬೈಲ್‌ನಿಂದ ರೈತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಬ್ಬ ಫಲಾನುಭವಿಯು ನರೇಗಾ ಯೋಜನೆ ಅಡಿ ತಮ್ಮ ಜೀವಿತಾವಧಿಯಲ್ಲಿ ವೈಯಕ್ತಿಕ ಕಾಮಗಾರಿಯನ್ನು ಕೈಗೊಂಡು, 5 ಲಕ್ಷ ರುಗಳ ವರೆಗೆ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದರು.

ತಾಲೂಕಿನಾದ್ಯಂತ ಉದ್ಯೋಗ ಖಾತರಿ ನಡಿಗೆ ಸಬಲತೆ ಎಡೆಗೆ ಅಭಿಯಾನವು ಕೈಗೊಂಡಿದ್ದು, ಅಭಿಯಾನದಲ್ಲಿ ಎಲ್ಲಾ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ತಳಮಟ್ಟದ ತಂತ್ರಜ್ಞರು, ಗ್ರಾಮ ಕಾಯಕ ಮಿತ್ರರು, ತಾಂಡ ರೋಜ್ಗಾರ್ ಮಿತ್ರರು ಹಾಗೂ ಗ್ರಾಪಂ, ತಾಪಂ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.