ಅರೆಕಾಲಿಕ ಸಿಬ್ಬಂದಿಗೆ 21 ತಿಂಗಳಿಂದ ಗೌರವಧನ ತಡೆ । ಕುಟುಂಬ ನಿರ್ವಹಣೆಗೆ ಪರದಾಟ

ಬಿಜಿಕೆರೆ ಬಸವರಾಜ

ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರು

ಜಲ ಸಂಪನ್ಮೂಲ ಇಲಾಖೆಯ ಮಳೆ ಮಾಪನ ಕೇಂದ್ರಗಳಲ್ಲಿ ದಿನನಿತ್ಯ ಮಳೆ ಪ್ರಮಾಣದ ದತ್ತಾಂಶ ಸಂಗ್ರಹಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತಿರುವ ತಾಲೂಕಿನ ಅರೆಕಾಲಿಕ ಸಿಬ್ಬಂದಿಗೆ ಕಳೆದ 21 ತಿಂಗಳಿಂದ ಗೌರವಧನ ನೀಡದಿರುವುದು ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಮೂಡಿಸಿದೆ.

ಮೊಳಕಾಲ್ಮೂರು, ರಾಯಪುರ, ಬಿಜಿಕೆರೆ, ರಾಮಪುರ ಹಾಗೂ ದೇವಸಮುದ್ರ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾನ್ಯ ಮಳೆ ಮಾಪನ ಕೇಂದ್ರ, ಸ್ವಯಂ ಚಾಲಿತ ಮಳೆ ಮಾಪನ ಕೇಂದ್ರ ಹಾಗೂ ಜಲ ಮತ್ತು ಹವಾಮಾನ ಮಾಪನ ಕೇಂದ್ರಗಳ ಒಟ್ಟು ಐದು ಅರೆಕಾಲಿಕ ಸಿಬ್ಬಂದಿಗೆ ಸತತ 21 ತಿಂಗಳಿಂದ ಗೌರವಧನ ದೊರೆತಿಲ್ಲ. ಇದೇ ಅಲ್ಪ ಪ್ರಮಾಣದ ಗೌರವಧನವನ್ನೇ ನಂಬಿಕೊಂಡಿರುವ ವೀಕ್ಷಕರು ಹಾಗೂ ವರದಿಗಾರರು ಇದೀಗ ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದೆ.

ಸಾಮಾನ್ಯ ಮಳೆ ಮಾಪನ ಕೇಂದ್ರಗಳ ವೀಕ್ಷಕರಿಗೆ ಮಾಸಿಕ 900, ಸ್ವಯಂ ಚಾಲಿತ ಮಳೆ ಮಾಪನ ಕೇಂದ್ರಗಳ ವೀಕ್ಷಕರಿಗೆ 1,200 ಹಾಗೂ ಜಲ ಮತ್ತು ಹವಾಮಾನ ಮಾಪನ ಕೇಂದ್ರಗಳ ವರದಿಗಾರರಿಗೆ 7,500 ರು.ನಂತೆ ಇಲಾಖೆಯಿಂದ ನೇರವಾಗಿ ಗೌರವಧನ ಪಾವತಿಸಲಾಗುತ್ತದೆ. ಆದರೆ ಎರಡು ವರ್ಷಗಳ ಅವಧಿಯಲ್ಲಿ ಗೌರವಧನ ಪಾವತಿಯಾಗದಿರುವುದು ಸಿಬ್ಬಂದಿಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗುವ ಮಳೆಯ ಪ್ರಮಾಣದ ದತ್ತಾಂಶವನ್ನು ವೀಕ್ಷಕರು ಸಂಗ್ರಹಿಸಿ ತಾಲೂಕು ಕೇಂದ್ರದಲ್ಲಿರುವ ಜಲ ಮತ್ತು ಹವಾಮಾನ ಮಾಪನ ಕೇಂದ್ರದ ವರದಿಗಾರರಿಗೆ ನೀಡುತ್ತಾರೆ. ವರದಿಗಾರರು ಈ ಮಾಹಿತಿಯನ್ನು ತಹಸೀಲ್ದಾರ್ ಕಚೇರಿ ಸಹಿತ ಸಂಬಂಧಿಸಿದ ಇಲಾಖೆಗೆ ಹಾಗೂ ಜಲ ಸಂಪನ್ಮೂಲ ಇಲಾಖೆಗೆ ತಲುಪಿಸುವ ಜವಾಬ್ದಾರಿ ನಿರ್ವಹಿಸುತ್ತಾರೆ.

ಮಳೆಗಾಲದ ಸಂದರ್ಭದಲ್ಲಿ ಬೆಳಗ್ಗೆ 8.30ರೊಳಗೆ ತಾಲೂಕು ಕೇಂದ್ರಕ್ಕೆ ಮಳೆಯ ಪ್ರಮಾಣದ ವರದಿ ನೀಡಬೇಕಾಗಿರುವ ವೀಕ್ಷಕರು ಯಾವುದೇ ವಿಳಂಬವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕನಿಷ್ಠ ಗೌರವಧನವ ಕೂಡ ಸಮಯಕ್ಕೆ ಸರಿಯಾಗಿ ಸಿಗದಿರುವುದು ಅವರ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚಿಸಿದೆ. ಇನ್ನಾದರೂ ಸಂಬಂಧಿಸಿದ ಇಲಾಖಾಧಿಕಾರಿಗಳು ಮಳೆ ಮಾಪನ ವೀಕ್ಷಕರಿಗೆ ಮತ್ತು ವರದಿಗಾರರಿಗೆ ಬಾಕಿ ಇರುವ ವೇತನ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.ಕಳೆದ 21 ತಿಂಗಳಿಂದ ಗೌರವಧನ ನೀಡದಿದ್ದರೂ ಮಳೆ ಮಾಪನದ ಮಾಹಿತಿಯನ್ನು ನಿತ್ಯವೂ ಸಮಯಕ್ಕೆ ಸರಿಯಾಗಿ ಸಂಗ್ರಹಿಸಿ ವರದಿ ಮಾಡುತ್ತಿದ್ದೇವೆ. ಅಲ್ಪ ಗೌರವಧನವನ್ನೇ ನಂಬಿಕೊಂಡಿರುವ ನಮಗೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬಾಕಿ ಇರುವ ಗೌರವಧನ ಕೂಡಲೇ ಪಾವತಿಸಬೇಕು.

-ಎನ್.ವಿ.ಲೋಕೇಶ, ಮಾಪನ ವರದಿಗಾರ, ರಾಯಪುರ.