ರೌಡಿಗಳಿಂದ ಹಾಲಿನ ಡೇರಿ ಯುವಕನ ಬರ್ಬರ ಕೊಲೆ

| Published : Jul 30 2024, 12:40 AM IST

ಸಾರಾಂಶ

ಹಲವು ವರ್ಷಗಳಿಂದ ಕೌಶಿಕ ಗಡಿಯಲ್ಲಿ ನಂದಿನಿ ಬೂತ್‌ ನಡೆಸುತ್ತಿದ್ದ ಸತೀಶ್‌ ಗೆ, ಈ ಹಿಂದೆ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಮತ್ತು ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ರಾಜು ಮಾಮೂಲಿ(ಹಣ) ನೀಡುವಂತೆ ಬೆದರಿಕೆ ಹಾಕಿದ್ದ. ಈ ಬಗ್ಗೆ ಹಲವಾರು ಬಾರಿ ಫೋನ್‌ ಮಾಡಿಯೂ ಬೆದರಿಸುತ್ತಿದ್ದ. ಈ ಘಟನೆ ಹಿಂದೆ ಸಮುದ್ರವಳ್ಳಿಯ ರೌಡಿಶೀಟರ್ ಅಶೋಕ್ ಕೈವಾಡವಿದೆ ಎಂದು ಮೃತನ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಮಾಮೂಲಿ(ಹಣ) ಕೊಡಲು ಒಪ್ಪದ ನಂದಿನಿ ಬೂತ್‌ ನ ಮಾಲೀಕನ ಮೇಲೆ ಪುಡಿ ರೌಡಿಗಳು ಮಾರಕಾಸ್ತ್ರಗಳಿಂದ ಮನಸೋಯಿಚ್ಛೆ ಹಲ್ಲೆ ನಡೆಸಿದ ಪರಿಣಾಮ 27 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಗ್ಗೆ ನಗರದ ಹೊರವಲಯದಲ್ಲಿರುವ ಕೈಗಾರಿಕಾ ಅಭಿವೃದ್ಧಿ ಪ್ರದೇಶದ ಕೌಶಿಕ ಗೇಟ್‌ನಲ್ಲಿ ನಡೆದಿದೆ.

27 ವರ್ಷದ ಸತೀಶ್‌ ಎಂದಿನಂತೆ ಬೆಳಗ್ಗೆ ನಂದಿನಿ ಬೂತ್‌ ತೆರೆದು ವ್ಯಾಪಾರ ಮಾಡುತ್ತಿದ್ದಾಗ ಅಲ್ಲಿಗೆ ಬಂದ ರಾಜು ಮತ್ತವನ ಸ್ನೇಹಿತರು, ಸತೀಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ಸತೀಶ್‌ ನನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಆತನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತೀಶ್‌ ಅಲ್ಲಿ ಕೊನೆ ಉಸಿರೆಳೆದಿದ್ದಾನೆ.

ಮಾಮೂಲಿ ನೀಡುವಂತೆ ಬೆದರಿಕೆ:

ಹಲವು ವರ್ಷಗಳಿಂದ ಕೌಶಿಕ ಗಡಿಯಲ್ಲಿ ನಂದಿನಿ ಬೂತ್‌ ನಡೆಸುತ್ತಿದ್ದ ಸತೀಶ್‌ ಗೆ, ಈ ಹಿಂದೆ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಮತ್ತು ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ರಾಜು ಮಾಮೂಲಿ(ಹಣ) ನೀಡುವಂತೆ ಬೆದರಿಕೆ ಹಾಕಿದ್ದ. ಈ ಬಗ್ಗೆ ಹಲವಾರು ಬಾರಿ ಫೋನ್‌ ಮಾಡಿಯೂ ಬೆದರಿಸುತ್ತಿದ್ದ. ಈ ಘಟನೆ ಹಿಂದೆ ಸಮುದ್ರವಳ್ಳಿಯ ರೌಡಿಶೀಟರ್ ಅಶೋಕ್ ಕೈವಾಡವಿದೆ ಎಂದು ಮೃತನ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಪೊಲೀಸರಿಗೆ ಧಿಕ್ಕಾರ:

ಹಣ ನೀಡುವಂತೆ ತಮಗೆ ಕಿರುಕುಳ ನೀಡುತ್ತಿರುವ ಬಗ್ಗೆ ತಿಂಗಳ ಹಿಂದೆಯೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆಸ್ಪತ್ರೆಯಲ್ಲಿದ್ದ ಕೊಲೆಯಾದ ಸತೀಶ್ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ತಮಗೆ ಕಿರುಕುಳ ನೀಡುತ್ತಿರುವ ಬಗ್ಗೆ ಪೊಲೀಸರಿಗೆ ದೂರು ನೀಡದಾಗಲೇ ಕಾನೂನು ಕ್ರಮ ಕೈಗೊಂಡಿದ್ದರೆ ಇಂದು ಹೀಗೆ ಆಗುತ್ತಿರಲಿಲ್ಲ. ಹಾಗಾಗಿ ಇದಕ್ಕೆ ಪೊಲೀಸರೇ ಕಾರಣ ಎಂದು ಮೃತನ ತಾಯಿ ಪೊಲೀಸರಿಗೆ ಧಿಕ್ಕಾರ ಕೂಗಿದರು.

ಗಂಭೀರವಾಗಿ ಗಾಯಗೊಂಡಿದ್ದ ಸತೀಶ್‌ ನನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾಗಲೇ ಸತೀಶ್‌ ಸಂಬಂಧಿಕರು, ಸ್ನೇಹಿತರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಮುಂದೆ ಅಪಾರ ಸಂಖ್ಯೆಯಲ್ಲಿ ಜಮಾಯಿಸಿ ಪೊಲೀಸರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಾಗಾಗಿ ಪರಿಸ್ಥಿತಿ ಕೈಮೀರಬಹುದೆಂದು ಆಸ್ಪತ್ರೆ ಮುಂದೆಯೇ ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿತ್ತು.

ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈಗಾಗಲೇ ವಿಶೇಷ ತನಿಖಾ ತಂಡ ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಹಲವು ಅಪರಾಧಗಳಿಗೆ ಪೊಲೀಸ್ ವೈಫಲ್ಯವೇ ಕಾರಣ:

ಹಾಸನ ನಗರದಲ್ಲಿ ಕಳೆದ ಕೆಲವು ತಿಂಗಳಲ್ಲಿ ನಡೆದಿರುವ ಕೊಲೆಗಳಿಗೆ ಪೊಲೀಸ್‌ ವೈಫಲ್ಯವೇ ಕಾರಣ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಇದಕ್ಕೆ ಸಾಕ್ಷಿ ಎನ್ನುವಂತೆ ಸೋಮವಾರ ನಡೆದ ಸತೀಶ್‌ ಕೊಲೆ ಹಿಂದೆ ಕೂಡ ಪೊಲೀಸ್ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಏಕೆಂದರೆ ತಿಂಗಳ ಹಿಂದೆಯೇ ರಾಜು ಮತ್ತವನ ಗ್ಯಾಂಗ್‌ ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಅಂದೇ ಪುಡಿ ರೌಡಿಗಳಿಗೆ ಬಿಸಿ ಮುಟ್ಟಿಸಿದ್ದಿದ್ದರೆ ಇಂದು ಸತೀಶ್‌ ಜೀವ ಕಳೆದುಕೊಳ್ಳಬೇಕಿರಲಿಲ್ಲ ಎಂದು ಸ್ವತ: ಸತೀಶ್‌ ತಾಯಿಯೇ ಪೊಲೀಸರಿಗೆ ಧಿಕ್ಕಾರ ಕೂಗಿದ್ದಾರೆ. ಪುಡಿ ರೌಡಿಗಳನ್ನು ಮೊಳಕೆಯಲ್ಲಿಯೇ ಚಿವುಟದೆ ಅವರನ್ನು ಹೆಮ್ಮರವಾಗಿ ಬೆಳೆಯಲು ಬಿಟ್ಟಿರುವುದೇ ಹಲವು ಅಪರಾಧಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು, ಬುದ್ದಿಜೀವಿಗಳು ಪೊಲೀಸ್‌ ಇಲಾಖೆಯತ್ತ ಬೆರಳು ಮಾಡುವಂತಾಗಿದೆ.