ಸಾರಾಂಶ
2500 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹಿಂಗಾರಿ ಬಿತ್ತನೆ
ಕೃಷಿ ಚಟುವಟಿಕೆಗಳಿಗೆ ಮರುಜೀವ ಬರುವ ನಿರೀಕ್ಷೆಗದಗ: ಸೋಮವಾರ ಸಂಜೆ ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿರುವುದು ಸಾರ್ವಜನಿಕರಲ್ಲಿ ಮತ್ತೆ ಜೀವಕಳೆ ಮೂಡುವಂತೆ ಮಾಡಿದೆ.ಸೋಮವಾರ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ. ಗದಗ ಬೆಟಗೇರಿ ಅವಳಿ ನಗರದಲ್ಲಿ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಸುರಿಯಿತು. ಲಕ್ಷ್ಮೇಶ್ವರ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿಯೂ ಕೊಂಚ ಮಳೆಯಾಗಿದೆ. ರೋಣ ಪಟ್ಟಣ ಮತ್ತು ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಅರ್ಧಗಂಟೆ ಉತ್ತಮ ಮಳೆಯಾಗಿದೆ. ಗಜೇಂದ್ರಗಡ, ನರಗುಂದ ಸೇರಿದಂತೆ ಇನ್ನುಳಿದ ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.
ಬಿತ್ತನೆಯೇ ಆಗಿಲ್ಲ: ಜಿಲ್ಲೆಯಲ್ಲಿ ಪ್ರತಿ ವರ್ಷ 2.18 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗುವುದು ವಾಡಿಕೆ, ಆದರೆ ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಕೇವಲ 2500 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹಿಂಗಾರಿ ಬಿತ್ತನೆಯಾಗಿದೆ. ಬಿತ್ತನೆಯಾಗಿದ್ದ ಅಲ್ಪ ಬೆಳೆಗಳೂ ಒಣಗಿ ಹೋಗುವ ಹಂತದ ವೇಳೆಯಲ್ಲಿ ಸೋಮವಾರ ಅಲ್ಪ ಮಳೆಯಾಗಿರುವುದು ರೈತರಲ್ಲಿ ಆಶಾ ಭಾವನೆ ಮೂಡಿಸಿದೆ.ಹಿಂಗಾರು ಹಂಗಾಮಿನ ಕೊನೆಯ ಮಳೆ:ಮುಂಗಾರು ಹಂಗಾಮಿನ ಯಾವೊಂದು ಮಳೆಯೂ ಆಗಿಲ್ಲ, ಹಿಂಗಾರಿ ಹಂಗಾಮಿನ ರೈತನ ನಂಬಿಗಸ್ಥ ಮಳೆ ಎಂದೇ ಗುರುತಿಸುವ ಉತ್ತರಿ ಮಳೆ ಕೂಡಾ ಈ ಬಾರಿ ಕೈಕೊಟ್ಟಿದ್ದು, ಹಿಂಗಾರು ಮಳೆಗಾಲದ ಕೊನೆಯ ಮಳೆ ಎಂದೇ ಕರೆಸಿಕೊಳ್ಳುವ ವಿಶಾಖ ಮಳೆ ಸೋಮವಾರ ಜಿಲ್ಲೆಯ ಅಲ್ಲಲ್ಲಿ ಸುರಿದಿದೆ.
ಬಿತ್ತನೆ ಸಾಧ್ಯವಿಲ್ಲ: ಹಿಂಗಾರು ಹಂಗಾಮಿನ ಬಿತ್ತನೆಯ ಸಮಯ ಪೂರ್ಣಗೊಂಡಿದ್ದು, ಈಗ ಮಳೆಯಾದರೆ ಯಾವುದೇ ಪ್ರಯೋಜನವಿಲ್ಲ, ಬಿತ್ತನೆ ಮಾಡಲೂ ಸಾಧ್ಯವಿಲ್ಲ, ಆದರೆ ಮಳೆಯಾದರೆ ಭೂಮಿ ತಂಪಾಗುತ್ತದೆ. ಕುಡಿವ ನೀರಿನ ಸಮಸ್ಯೆ ನೀಗುತ್ತದೆ. ಇನ್ನು ಈಗಾಗಲೇ ಬಿತ್ತನೆಯಾಗಿರುವ ಕಡಲೆ ಬೆಳೆಗೆ ಅಲ್ಪ ಮಟ್ಟಿನ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರ ರೈತಾಪಿ ವಲಯದಲ್ಲಿದೆ.ಹವಾಮಾನ ಇಲಾಖೆ ಮುಂದಿನ ನಾಲ್ಕೈದು ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಎಂದು ತಿಳಿಸಿದ ಬೆನ್ನಲ್ಲಿಯೇ ಸೋಮವಾರ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು, ಇನ್ನುಳಿದ ದಿನಗಳಲ್ಲಿಯೂ ಉತ್ತಮ ಮಳೆ ಬಂದಲ್ಲಿ ಕೃಷಿ ಚಟುವಟಿಕೆಗಳಿಗೆ ಮರು ಜೀವ ಬರುತ್ತದೆ ಎನ್ನುವುದು ಬಹುತೇಕ ರೈತರ ಅಭಿಪ್ರಾಯವಾಗಿದೆ. 6ಜಿಡಿಜಿ10
ಗದಗ ಬೆಟಗೇರಿ ಅವಳಿ ನಗರದಲ್ಲಿ ಸೋಮವಾರ ಮಧ್ಯಾಹ್ನ ಉತ್ತಮ ಮಳೆಯಾಯಿತು.